ತುಮಕೂರು: ಗೂಳೂರು ಬಳಿ ವಶಪಡಿಸಿಕೊಂಡಿರುವ ಸರ್ಕಾರಿ ಜಮೀನಿನಲ್ಲಿ ಸರ್ಕಾರಿ ವೈದ್ಯಕಿಯ ಕಾಲೇಜು ಪ್ರಾರಂಭಿಸಲು ಜಾಗ ಒದಗಿಸಲಾಗುವುದು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.
ನಗರ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ಸ್ವಾತಂತ್ರೊ$್ಯತ್ಸವ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಗೂಳೂರು ಬಳಿ ಭೂಕಬಳಿಕೆಯಾಗಿದ್ದ 106 ಎಕರೆ ಜಾಗವನ್ನು ಮತ್ತೆ ಜಿಲ್ಲಾಡಳಿತ ವಶಕ್ಕೆ ಪಡೆದಿದ್ದು ಈ ಜಾಗದಲ್ಲಿ ಸರ್ಕಾರಿ ವೈದ್ಯಕಿಯ ಕಾಲೇಜು ಸ್ಥಾಪಿಸುವ ಉದ್ದೇಶ ಇದೆ. ಈ ನಿಟ್ಟಿನಲ್ಲಿ ಮುಂದಿನ ಬಜೆಟ್ನಲ್ಲಿ ಸರ್ಕಾರಿ ವೈದ್ಯಕಿಯ ಕಾಲೇಜು ಘೋಷಣೆ ಮಾಡುವಂತೆ ಸಿಎಂ ಬಳಿ ಬೇಡಿಕೆ ಇಡಲಾಗುವುದು ಎಂದರು.
ಏರ್ಪೋರ್ಟ್, ಎಐ ಡೇಟಾ ಸೆಂಟರ್: ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಎಐ ಡೇಟಾ ಸೆಂಟರ್ ಹಾಗೂ ಅದಕ್ಕೆ ಪೂರಕವಾಗಿ ಗ್ರೀನ್ ಹೈಡ್ರೋಜನ್ ಸ್ಥಾಪನೆಗೆ ಚಿಂತನೆ ಇದ್ದು ಸರ್ಕಾರ ಹಂತದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ. ಇದಕ್ಕೆ ಅಗತ್ಯವಾದ 10ಸಾವಿರ ಎಕರೆ ನಮ್ಮ ಬಳಿ ಇದೆ. ಕೆಐಎಡಿಬಿ ಅಭಿವೃದ್ಧಿ ಪಡಿಸಿರುವ ಹಾಗೂ ಹೆಚ್ಚುವರಿ ಜಾಗವನ್ನು ಪಡೆಯಲಾಗುವುದು. ಇದರ ಜತೆಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಜಿಲ್ಲೆಯೆಲ್ಲೇ ಮಾಡಬೇಕೆಂಬ ವಾದವು ನಮ್ಮದು ಎಂದು ಪರಮೇಶ್ವರ ತಿಳಿಸಿದರು.
ಕ್ರೀಡಾನಗರಿ ತುಮಕೂರು : ತುಮಕೂರನ್ನು ಸ್ಪೋರ್ಟ್ಸ್ಸಿಟಿ (ಕ್ರೀಡಾನಗರಿ)ಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಶೂಟಿಂಗ್, ಟೆನ್ನಿಸ್ ಜತೆ ಅಂತಾರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಂಗಣ, ಈಜುಕೊಳ ನಿರ್ಮಿಸಲು ಸಿದ್ದರಾಮಯ್ಯ ಸಿಎಂ ಆಗಿದ್ದಾಗ 3 ಕೋಟಿ ಕೊಟ್ಟಿದ್ದರು. ಈಗ ಹೆಚ್ಚಿನ ಅನುದಾನಕ್ಕೆ ಸಿಎಂಗೆ ಮನವಿ ಮಾಡಲಾಗುವುದು ಎಂದು ಪರಮೇಶ್ವರ್ ಹೇಳಿದರು.
ಖೇಲೋ ಇಂಡಿಯಾ ಕ್ರೀಡಾಕೂಟ ಆತಿಥ್ಯವಹಿಸಲು ಜಿಲ್ಲೆ ಸಿದ್ಧವಾಗಿದ್ದು ಕೇಂದ್ರ ಕ್ರೀಡಾ ಇಲಾಖೆ ಸಂಪರ್ಕಿಸಿ ಚರ್ಚೆ ನಡೆಸಲಾಗಿದೆ. ಈ ಕೂಟದಿಂದ ಹೆಚ್ಚಿನ ಮೂಲಸೌಕರ್ಯಗಳು ತುಮಕೂರು ನಗರಕ್ಕೆ ಸಿಗಲಿವೆ. ಅಲ್ಲದೆ, ಅಂತಾರಾಷ್ಟ್ರೀಯ ಗುಣಮಟ್ಟದ ಇನ್ನಟ್ಟು ಕ್ರೀಡೆಗಳ ಅಂಕಣ ನಿರ್ಮಾಣಕ್ಕೆ ಅವಕಾಶ ಒದಗಿಬರಲಿದೆ ಎಂದರು.
ಜಾರ್ಖಂಡ್ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ರ್ಖಗೆ ಅವರು ಭಾಷಣ ಮಾಡಿದ್ದ ಜಾಗ ಶುದ್ಧೀಕರಣ ಮಾಡಿದ್ದು ಖಂಡನೀಯ. 21ನೇ ಶತಮಾನದಲ್ಲಿ ನಾವಿದ್ದು ಈ ರೀತಿ ಮಾಡುವುದು ಸರಿಯಲ್ಲ. ಇನ್ನೂ ಮನುವಾದದಲ್ಲೇ ಇದ್ದೇವೆ ಅಂದರೆ ನಿಜಕ್ಕು ದುರದೃಷ್ಟಕರ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.