ತುಮಕೂರು: ಸರ್ಕಾರ ಮಂಜೂರು ಮಾಡಿದ ಭೂಮಿಯನ್ನು ದುರಸ್ತಿ ಪೋಡಿ ಮಾಡಿಸಿಕೊಳ್ಳಲು ಜಿಲ್ಲೆಯ 18988 ರೈತರು ದಶಕಗಳಿಂದಲೂ ಚಾತಕ ಪಯಂತೆ ಕಾಯುತ್ತಿದ್ದರೂ ಜಿಲ್ಲಾಡಳಿತಕ್ಕೆ ಮನಸ್ಸು ಕರಗಿಲ್ಲ.
ಮಂಜೂರು ಭೂಮಿ ದುರಸ್ತಿ ಪೋಡಿಗೆ ಮಂಜೂರಾದ ಕನಿಷ್ಟ ಮೂರು ದಾಖಲೆ ಅಗತ್ಯವಿದೆ ಆದರೆ, ಕಾರಣಾಂತರಗಳಿಂದ ಕನಿಷ್ಟ ದಾಖಲೆಗಳಿಲ್ಲದ ರೈತರಿಗೆ ಅನುಕೂಲವಾಗಲಿ ಎಂದು ಪರಿಶೀಲಿಸಿ ಅನುಮೋದನೆ ನೀಡಲು ಸರ್ಕಾರವೇ ರೂಪಿಸಿರುವ ಗೈರು ವಿಲೇ ಸಮಿತಿ ಜಿಲ್ಲೆಯಲ್ಲಿ ಕಾರ್ಯಾರಂಭವನ್ನೇ ಮಾಡದಿರುವುದು ಅಚ್ಚರಿ ಮೂಡಿಸಿದೆ.
ನೈಜ ಭೂ ಮಂಜೂರಿಯ ಜಮೀನು ಮಂಜೂರು ಕಡತ ಅಲಭ್ಯತೆ ಹಾಗೂ ಶಿಥಿಲ, ಕಳೆದು ಹೋಗಿರುವುದು ಮತ್ತಿತರ ಕಾರಣಗಳಿಂದ ಕನಿಷ್ಟ ಮೂರು ದಾಖಲೆಗಳಿಲ್ಲದ ಜಮೀನುಗಳನ್ನು ದುರಸ್ತಿ ಪೋಡಿಗೆ ಒಳಪಡಿಸಲು ಆಯಾ ತಹಸೀಲ್ದಾರ್ಗಳಿಗೆ ಅವಕಾಶವಿಲ್ಲ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿನ ಗೈರು ವಿಲೇ ಸಮಿತಿ ಈ ಪ್ರಕಾರದ ಜಮೀನು ದುರಸ್ತಿ ಮಾಡಲು ಅನುಮೋದನೆ ಬೇಕಿದೆ ಆದರೆ, ಕಂದಾಯ ಸಚಿವರ ತವರು ತುಮಕೂರು ಜಿಲ್ಲಾಧಿಕಾರಿ ಈವರೆಗೂ ಸಮಿತಿಯ ಸಭೆಯನ್ನೇ ನಡೆದಿರುವುದು ಸೋಜಿಗ ತಂದಿದೆ.
ತುಮಕೂರು,ಧಾರವಾಡ,ಬೆಂಗಳೂರು ಗ್ರಾಮಾಂತರ ಬಳ್ಳಾರಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸಮಿತಿ ಕಾರ್ಯಾರಂಭ ಮಾಡಿಲ್ಲ ಆದರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಈಗಾಗಲೇ 583 ,ದಾವಣಗೆರೆ 542, ಕೊಡಗು 380 ಪ್ರಕರಣಗಳಲ್ಲಿ ಈ ಸಮಿತಿ ಸಭೆ ನಡೆಸಿ ಅನುಮೋದಿಸಿದ್ದು ಭೂ ದಾಖಲೆಗಳು ಅರ್ಹ ರೈತರಿಗೆ ಲಭಿಸಿದೆ.
ಕಂದಾಯ ಸಚಿವರ ತವರಲ್ಲಿ ಕಾರ್ಯಾರಂಭ ಮಾಡದ ಸಮಿತಿ!
ಕನಿಷ್ಟ ದಾಖಲೆಗಳಿಲ್ಲದ ನೈಜ ಮಂಜೂರಿ ಜಮೀನುಗಳನ್ನು ದುರಸ್ತಿ ಮಾಡಲು ಅನುಮೋದಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಗೈರು ವಿಲೇ ಸಮಿತಿ ಇದ್ದು ,ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಭೂ ಮಾಪನ ಇಲಾಖೆ ಉಪ ನಿರ್ದೇಶಕ ಕಾರ್ಯನಿರ್ವಹಿಸುತ್ತಾರೆ. ಆದರೆ, ಕಂದಾಯ ಸಚಿವರ ಜಿಲ್ಲೆಯಲ್ಲಿ ಈ ಸಮಿತಿ ಕಾರ್ಯಾರಂಭವನ್ನೇ ಮಾಡಿಲ್ಲ.
ಮಂಜೂರಿ ಭೂಮಿಗೆ ಶಾಸನ ಬದ್ದ ಮಾಲೀಕತ್ವ ನೀಡುವ ದುರಸ್ತಿ ಪೋಡಿ ಪ್ರಕ್ರಿಯೆಗೆ ಮೊದಲ ಹಂತವಾದ ಅನುಬಂಧ 1 ರಚಿಸಿ ತಹಸೀಲ್ದಾರ್ ಅನುಮೋದಿಸಲು ಮಂಜೂರಿ ಸಂಬಂಧದ ಕನಿಷ್ಟ ಮೂರು ದಾಖಲೆಗಳಿರಬೇಕು.
ಗೈರು ವಿಲೇ ಸಮಿತಿಯ ಮುಂದಿಡಲು ಅರ್ಹ ಮಂಜೂರಿ ಸರ್ವೇನಂಬರ್ಗಳ ಲಭ್ಯ ದಾಖಲಾತಿ ಹಾಗೂ ವಿವರಗಳು ಸಂಬಂಧಿತ ವೃತ್ತದ ಗ್ರಾಮ ಆಡಳಿತಾಧಿಕಾರಿ ಹಂತದಿಂದ ಆರ್ಐ, ಶಿರೇಸ್ತೇದಾರ್, ತಹಸೀಲ್ದಾರ್ ,ತಹಸೀಲ್ದಾರ್,ಉಪ ವಿಭಾಗಾಧಿಕಾರಿ ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ಡಿಡಿಎಲ್ಆರ್ ಅವರಿಂದ ಪರಿಶೀಲನೆಗೊಂಡು ಅನುಮೋದನೆಯಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಲ್ಲಿ ಅನುಮೋದನೆ ಪಡೆಯಬಹುದಾಗಿದೆ.
ತುಮಕೂರು ಜಿಲ್ಲೆಯಲ್ಲಿ 18988 ಪ್ರಕರಣ:
ತುಮಕೂರು ಜಿಲ್ಲೆಯಲ್ಲಿ ಗೈರು ವಿಲೇ ಸಮಿತಿಗೆ ಅರ್ಹ ಪ್ರಕರಣಗಳ ಸಂಖ್ಯೆ ಗರಿಷ್ಠ ಸಂಖ್ಯೆಯಲ್ಲಿವೆ. ಜಿಲ್ಲೆಯ ಮೂರು ಉಪವಿಭಾಗದಲ್ಲಿ 18988 ಪ್ರಕರಣ ಬಾಕಿ ಉಳಿದಿವೆ. ಈ ಪೈಕಿ 1636 ಪ್ರಕರಣ ಆಯಾ ತಹಸೀಲ್ದಾರ್ಗೆ ಹಿಂದಿರಿಗಿಸಲಾಗಿದ್ದು 17200 ಪ್ರಕರಣಗಳನ್ನು ಸಮಿತಿಗೆ ಕಳುಹಿಸದೇ ಉಪವಿಭಾಗಾಧಿಕಾರಿಗಳ ಹಂತದಲ್ಲಿಯೇ ಧೂಳು ತಿನ್ನುತ್ತಿವೆ. ಸಮಿತಿಯ ಸದಸ್ಯ ಕಾರ್ಯದರ್ಶಿ ಡಿಡಿಎಲ್ಆರ್ ಅನುಮೋದಿಸಿರುವ 56 ಪ್ರಕರಣಗಳು ಜಿಲ್ಲಾಧಿಕಾರಿ ಕಣ್ಣಿಗೆ ಇನ್ನೂ ಬಿದ್ದಿಲ್ಲ.
ಭೂ ಮಂಜೂರಾತಿ ಸಮಿತಿ ಇಲ್ಲದ ಸ್ವಾತಂತ್ರ್ಯ ಪೂರ್ವದ ದರಖಾಸ್ತು ಜಮೀನುಗಳು ಸಹ ದುರಸ್ತಿಯಾಗದೇ ಇಂದಿಗೂ ಉಳಿದಿವೆ. ಈ ಜಮೀನುಗಳ ಮಂಜೂರಿ ಕಡತ ಇಲ್ಲದಿರುವುದು ಹಾಗೂ ಅದರಲ್ಲಿನ ಕನಿಷ್ಠ ದಾಖಲೆಗಳಿಲ್ಲದಿರುವುದು ದುರಸ್ತಿ ಪೋಡಿಗೆ ಅಡ್ಡಿಯಾಗಿದೆ. ಜಿಲ್ಲೆಯಲ್ಲಿ ಸಾವಿರಾರು ರೈತರುಗಳು ಚಾತಕ ಪಕ್ಷಿಯಂತೆ ಜಿಲ್ಲಾಧಿಕಾರಿ ಅಂಕಿತಕ್ಕೆ ಕಾಯುತ್ತಿದ್ದಾರೆ
ಕನಿಷ್ಠ ಮೂರು ದಾಖಲೆ ಲಭ್ಯವಿಲ್ಲದ ಮಂಜೂರು ಭೂಮಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಗೈರು ವಿಲೇ ಸಮಿತಿ ಅನುಮೋದನೆ ಪಡೆದು ದುರಸ್ತಿ ಮಾಡಿಕೊಡಲು ಅವಕಾಶವಿದ್ದರೂ ಕಳೆದ ಒಂದೂವರೆ ವರ್ಷದಿಂದಲೂ ಜಿಲ್ಲಾಧಿಕಾರಿ ಸಭೆ ನಡೆಸಿಲ್ಲ. ಭೂರಹಿತರಿಗೆ ಸರ್ಕಾರ ಭೂಮಿ ನೀಡಿದ್ದರೂ ಅಧಿಕಾರಿಗಳು ಸೂಕ್ತ ದಾಖಲೆ ಮಾಡಿಕೊಡಲು ಮೀನಾಮೇಷ ಎಣಿಸುತ್ತಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ.