ಪೋಡಿಯಾಗಿ ಸರ್ವೆ ನಂಬರ್​ ಬಂದರೂ ಪಹಣಿ ಸಿಗುತ್ತಿಲ್ಲ!

 ಪಹಣಿ ಇಂಡೀಕರಣ ಆಗಬೇಕಿರುವ ಜಮೀನುಗಳು
ಪಹಣಿ ಇಂಡೀಕರಣ ಆಗಬೇಕಿರುವ ಜಮೀನುಗಳು
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ 3113, ಕೋಲಾರದಲ್ಲಿ 1462 ಅರ್ಜಿ
  • ಭೂದಾಖಲೆ ಇಲಾಖೆ ಡಿಡಿ ಮೇಲು ಸಹಿ ಬಾಕಿ
  • ತುಮಕೂರು ಜಿಲ್ಲೆಯಲ್ಲಿ 182 ಪ್ರಕರಣಗಳು ಬಾಕಿ
ತುಮಕೂರು: ರಾಜ್ಯದಲ್ಲಿಯೇ ಅತೀ ಹೆಚ್ಚು ಪೋಡಿ ಪ್ರಕರಣಗಳನ್ನು ಇತ್ಯರ್ಥಕ್ಕೆ ಬಾಕಿ ಉಳಿಸಿಕೊಂಡಿರುವ ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಪೋಡಿಯಾಗಿ ಸೃಜನೆಯಾಗಿರುವ ಸರ್ವೆ ನಂಬರ್​ ಪಹಣಿ ಇಂಡೀಕರಣ ಕೂಡ ಬಾಕಿ ಉಳಿಸಿಕೊಂಡಿರುವುದು ದಾಖಲೆಗಾಗಿ ಚಾತಕ ಪಯಂತೆ ಕಾಯುತ್ತಿರುವ ರೈತರ ಸಂಕಷ್ಟ ಮುಂದುವರಿದಿದೆ.
ದರಾಖಾಸ್ತು ಪೋಡಿ ಆಂದೋಲನದಲ್ಲಿ ಪೋಡಿಯಾಗಿ ಪಹಣಿ ಇಂಡೀಕರಣ ಬಾಕಿ ಇರುವ 182 ಪ್ರಕರಣಗಳು ತುಮಕೂರು ಜಿಲ್ಲೆಯಲ್ಲಿವೆ, ರಾಜ್ಯದಲ್ಲಿ ಇಂತಹ ಪ್ರಕರಣಗಳೇ 3113 ಸಂಖ್ಯೆಯಲ್ಲಿದ್ದು ಕೋಲಾರ ಜಿಲ್ಲೆಯಲ್ಲಿ ಅತೀ ಹೆಚ್ಚು 1462 ಪ್ರಕರಣಗಳಲ್ಲಿ ಪಹಣಿ ಇಂಡಿಕರಣ ಬಾಕಿ ಉಳಿದಿದ್ದು ಪೋಡಿಗಾಗಿ ವರ್ಷಗಟ್ಟಲೇ ಕಾದ ರೈತರು ಈಗ ಪಹಣಿಗೆ ಕಾಯುವಂತಾಗಿದೆ.
ತುಮಕೂರು ಜಿಲ್ಲೆಯಲ್ಲಿ 24158 ಪೋಡಿ ಅರ್ಜಿಗಳು ಬಾಕಿ ಉಳಿಸಿಕೊಂಡಿರುವ ಕುಖ್ಯಾತಿಯಿದೆ, ಈನಡುವೆ ಆಂದೋಲದಲ್ಲಿ ಈಗಾಗಲೇ ಪೋಡಿ ಮುಗಿಸಿರುವ 182ಹೊಸ ಸರ್ವೇ ನಂಬರ್​ಗಳು ಪಹಣಿ ಇಂಡೀಕರಣಕ್ಕಾಗಿ ಬಾಕಿಯಿವೆ. ರಾಜ್ಯದಲ್ಲಿ ರೈತರಿಗೆ ಸರ್ಕಾರದಿಂದ ಮಂಜೂರಾಗಿರುವ ಪ್ರಕರಣಗಳಲ್ಲಿ ಪೋಡಿ ಆಂದೋಲನಗಳಲ್ಲಿ ಸೃಜನೆಯಾಗಿರುವ ಹೊಸ ಸರ್ವೆಗಳಿಗೆ ಪಹಣಿ ಇಲ್ಲದೆ ರೈತರಿಗೆ ಕೈಗೆ ಬಂದ ತುತ್ತು, ಬಾಯಿಗಿಲ್ಲ ಎಂಬಂತಾಗಿದೆ.
ಪ್ರಸ್ತುತ ದರಖಾಸ್ತು ಪೋಡಿ ಪ್ರಕರಣಗಳಲ್ಲಿ ಅಳತೆಯಾಗಿ ಮಂಜೂರಾಗಿರುವಂತೆ ಹೊಸ ನಂಬರ್​ ನೀಡಿ ಪೋಡಿ ದಾಖಲೆಗಳು ಮತ್ತು ದುರಸ್ತಿ ಆಕಾರಬಂದು ತಯಾರಿಸಲಾಗುತ್ತಿದೆ. ಆನಂತರವಷ್ಟೇ ಕಾನೂನಿನಂತೆ ದುರಸ್ತಿ ಆಕಾರಬಂದ್​ಗೆ ಸಂಬಂಧಿಸಿದ ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಮೇಲು ಸಹಿ ಮಾಡುವ ಮೂಲಕ ಪೋಡಿ ಪ್ರಕ್ರಿಯೆ ಜತೆಗೆ ದಾಖಲೆಗಳು ಅಂತಿಮವಾಗುವುದಿಲ್ಲ.
ದರಖಾಸ್ತು ಪೋಡಿ ಆಂದೋಲನದಲ್ಲಿ ಪೋಡಿಯಾಗಿ ಹೊಸ ನಂಬರ್​ ನೀಡಿದ ತಕ್ಷಣ ಪೋಡಿ ಮಾಹಿತಿಯಂತೆ ಪಹಣಿ ಇಂಡೀಕರಣ ಮಾಡುವ ಕುರಿತು ಆಟೋ ಮ್ಯೂಟೇಷನ್​ ಪ್ರಕ್ರಿಯೆ ನಡೆಸಲು ಅನುಕೂಲವಾಗುವಂತೆ ಮಾಹಿತಿಯನ್ನು ಆನ್​ಲೈನ್​ ಮೂಲಕ ಎಕ್ಸ್​ಎಂಎಲ್​ ೈಲ್​ ಮಾದರಿಯಲ್ಲಿ ಭೂಮಿ ತಂತ್ರಾಂಶಕ್ಕೆ ರವಾನಿಸಬೇಕಿದೆ.
ಇಂಡೀಕರಣ ಪ್ರಕ್ರಿಯೆಯನ್ನು ಆನ್​ಲೈನ್​ನಲ್ಲಿ ಮಾಡುವುದರಿಂದ ವಿಳಂಬಕ್ಕೆ ಅವಕಾಶವಿಲ್ಲ ಎಂದು ಸರ್ಕಾರ ಪದೇಪದೇ ಹೇಳುತ್ತಿದೆಯಾದರೂ ವಾಸ್ತವದಲ್ಲಿ ರೈತರಿಗೆ ತ್ವರಿತವಾಗಿ ಪಹಣಿ ಸಿಕ್ಕಿಲ್ಲ ಎಂಬುದು ಕಂದಾಯ ಇಲಾಖೆ ನೀಡಿರುವ ಅಂಕಿ, ಅಂಶಗಳಿಂದಲೇ ಬಯಲಾಗಿದೆ. ಆನ್​ಲೈನ್​ನಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದಿದ್ದರೂ ಭೂದಾಖಲೆಗಳ ಉಪನಿರ್ದೇಶಕರ ಸಹಿ ವಿಳಂಬವಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ನಿಗಾವಹಿಸುವ ಅಗತ್ಯವಿದೆ.
ರಾಜ್ಯದ ಯಾದಗಿರಿ, ವಿಜಯನಗರ, ರಾಯಚೂರು, ಗದಗ್​, ಬೆಂಗಳೂರು ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಒಂದು ಪ್ರಕರಣವನ್ನು ಬಾಕಿ ಉಳಿಸಿಕೊಂಡಿಲ್ಲ. ವಿಜಯಪುರ, ಶಿವಮೊಗ್ಗ ಕಲಬುರಗಿ, ಹಾವೇರಿ, ಧಾರವಾಡ, ದಾವಣಗೆರೆ, ದಣ ಕನ್ನಡ, ಬೆಳಗಾವಿ, ಬಳ್ಳಾರಿ ಜಿಲ್ಲೆಗಳಲ್ಲಿ ಸಂಖ್ಯೆ 10 ದಾಟಿಲ್ಲ ಎಂಬುದು ಸಮಾಧಾನ. ಆದರೆ, ಬೆಂಗಳೂರು ಸುತ್ತಮುತ್ತಲ ಬಯಲುಸೀಮೆ ಜಿಲ್ಲೆಗಳಲ್ಲಿ ಪೋಡಿ ಪ್ರಕರಣ ಹಾಗೂ ಪಹಣಿ ಇಂಡಿಕರಣ ಪ್ರಕ್ರಿಯೆ ವಿಲೇವಾರಿಗೆ ಗ್ರಹಣ ಬಡಿದಿದೆ.
ರಾಜ್ಯದಲ್ಲಿ ಬಾಕಿ ಉಳಿಸಿಕೊಂಡಿರುವ ಪಹಣಿ ಇಂಡೀಕರಣ ಪ್ರಕರಣ:
ಜಿಲ್ಲೆ ಪಹಣಿ ಇಂಡೀಕರಣ ಬಾಕಿ
ಕೋಲಾರ 1462
ಚಿಕ್ಕಬಳ್ಳಾಪುರ 361
ಹಾಸನ 308
ಬೆಂಗಳೂರು ದಣ 288
ತುಮಕೂರು 182
ಚಿತ್ರದುರ್ಗ 153
ಒಟ್ಟು (ರಾಜ್ಯದಲ್ಲಿ) 3113
ದಶಕಗಳಿಂದಲೂ ಸಾಗುವಳಿ ಮಾಡಿಕೊಂಡು ಬಗರ್​ಹುಕುಂ ಸಮಿತಿ ಮುಂದೆ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆಯುವುದೇ ಒಂದು ಹರಸಾಹಸ, ನಂತರ ಪೋಡಿ ಮಾಡಿಸಿಕೊಂಡು ಹೊಸ ಸರ್ವೇ ನಂಬರ್​ ಪಡೆಯುವುದು ಮತ್ತೊಂದು ದುಸ್ಸಾಹಸ. ಇಷ್ಟೇಲ್ಲಾ ಸಾಹಸಗಳನ್ನು ಪೂರೈಸಿದ್ದರೂ ಪಹಣಿ ಇಂಡೀಕರಣಕ್ಕೆ ವಿನಾಕಾರಣ ವಿಳಂಬ ಮಾಡುತ್ತಿರುವುದು ರೈತರಿಗೆ ಕೃಷಿ ಮೇಲೆ ನಿರಾಸೆ ತಂದಿದೆ.
ಶಾಂತರಾಜು
ರೈತ, ಮಧುಗಿರಿ
ಇಂಡೀಕರಣ ಎಂದರೇನು?
ಇಂಡೀಕರಣ ಎಂದರೇ ಆಸ್ತಿಗೆ ಸಂಬಂಧಪಟ್ಟ ಕಂದಾಯ ದಾಖಲೆ ಕ್ರಮಬದ್ಧಗೊಳಿಸಿ, ಅಧಿಕೃತಗೊಳಿಸಿ, ರೈತರಿಗೆ ಅಥವಾ ಸಂಬಂಧಪಟ್ಟವರಿಗೆ ವಿತರಿಸುವ ಪ್ರಕ್ರಿಯೆ. ಕಂದಾಯ ಇಲಾಖೆ ಆಸ್ತಿ ಪಹಣಿಗಳನ್ನು (ಭೂ ದಾಖಲೆ) ರೈತರಿಗೆ ಸುಲಭವಾಗಿಸಲು ದಾಖಲೆಗಳನ್ನು ಸರಿಪಡಿಸುವುದನ್ನು ಇದು ಸೂಚಿಸುತ್ತದೆ. ಬಗರ್​ಹುಕುಂ ಭೂಮಿ ಮಂಜೂರಾತಿ, ಜೋಡಿ ಗ್ರಾಮಗಳು, ಕಂದಾಯ ಗ್ರಾಮಗಳು, ಒತ್ತುವರಿ, ಖಾಸಗಿ ಸಂಸ್ಥೆಯ ಹೆಸರು ಮತ್ತಿತರರ ಸಂದರ್ಭದಲ್ಲಿ ದಾಖಲೆಗಳಲ್ಲಿರುವ ಗೊಂದಲ ಸರಿಪಡಿಸಲು ಇಂತಹ ಪ್ರಕ್ರಿಯೆ ನಡೆಸಲಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net