ಹೆಸರು ಬದಲಿಸಿದ ಮಾತ್ರಕ್ಕೆ ಗಾಂಧಿ ವಿಚಾರಧಾರೆ ಅಳಿಸಿ ಹಾಕಲು ಸಾಧ್ಯವಿಲ್ಲ
ತುಮಕೂರು ತಾಲೂಕು ದೊಡ್ಡಹೊಸೂರಿನಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಗಾಂಧಿ ಸಹಜ ಬೇಸಾಯ ಆಶ್ರಮದ ವತಿಯಿಂದ ಮಹಾತ್ಮಗಾಂಧಿ ಪುತ್ಥಳಿ ಅನಾವರಣಗೊಳಿಸಲಾಯಿತು. ಡಾ.ವೂಡೇ ಪಿ.ಕೃಷ್ಣ, ಎಂ.ಸಿ.ನರೇಂದ್ರ, ಡಿ.ಆರ್.ಪಾಟೀಲ್, ಗೋವಿಂದರಾಜು, ಕಾಡಶೆಟ್ಟಿಹಳ್ಳಿ ಸತೀಶ್, ಸಿ.ಯತಿರಾಜು, ಡಾ.ಎಚ್.ಮಂಜುನಾಥ್, ರವೀಶ್ ಮತ್ತಿತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗಾಂಧಿ ಸಹಜ ಬೇಸಾಯ ಆಶ್ರಮ
ಮಹಾತ್ಮಗಾಂಧಿ ಪುತ್ಥಳಿ ಅನಾವರಣ
ನಾಡೋಜ ಡಾ. ವೂಡೇ ಪಿ.ಕೃಷ್ಣ
ತುಮಕೂರು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಾತ್ಮಗಾಂಧಿ ಹೆಸರನ್ನು ಕೈಬಿಟ್ಟು ವಿಬಿ-ಜಿ ರಾಮ್ ಜಿ (ವಿಕಸಿತ ಭಾರತ-ಗ್ರಾಮೀಣ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಯೋಜನೆ) ಹೆಸರು ಬದಲಿಸಿದ ಮಾತ್ರಕ್ಕೆ ಗಾಂಧಿ ವಿಚಾರಧಾರೆಗಳನ್ನು ಅಳಿಸಿ ಹಾಕಲು ಸಾಧ್ಯವಿಲ್ಲ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ.ಕೃಷ್ಣ ಹೇಳಿದರು.
ತಾಲೂಕಿನ ದೊಡ್ಡಹೊಸೂರಿನಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಗಾಂಧಿ ಸಹಜ ಬೇಸಾಯ ಆಶ್ರಮದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ಪುತ್ಥಳಿ ಅನಾವರಣ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಗಾಂಧಿ ಕೇವಲ ಹೆಸರಲ್ಲ ಜಗತ್ತಿನ ಆದರ್ಶ. ಅವರ ಚಿಂತನೆ, ಆದರ್ಶಗಳು ಎಲ್ಲಿಯವರೆಗೆ ಜೀವಂತವಾಗಿರುತ್ತೋ ಅಲ್ಲಿಯವರೆಗೆ ಶಾಂತಿ ಮತ್ತು ಅಹಿಂಸೆ ಜೀವಂತವಾಗಿರುತ್ತೆ ಎಂದರು.
ಈ ಬಾರಿಯ ಶೃಂಗಸಭೆಯ ನಂತರ 20 ದೇಶಗಳ ಪ್ರಧಾನಿಗಳು ಬಯಸಿದ್ದು, ಗಾಂಧಿ ಸಮಾಧಿಗೆ ನಮನ ಸಲ್ಲಿಸುವ ಪ್ರಸ್ತಾಪವನ್ನು. ಈ ಮೂಲಕ ಗಾಂಧೀಜಿಯ ಮಹತ್ವ ಎಷ್ಟಿದ ಎಂಬುದನ್ನು ನಾವೆಲ್ಲಾ ಅರ್ಥಮಾಡಿಕೊಳ್ಳಬೇಕಿದೆ. ಗಾಂಧಿಯನ್ನು ಅವರ ತತ್ವಾದರ್ಶಗಳನ್ನು ನಮ್ಮ ನಿರಂತರ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವರೇ ಹೇಳಿದಂತೆ ಗಾಂಧೀಜಿ ಬದುಕೆ ಒಂದು ಸಂದೇಶ. ಸ್ಥಳಿಯ ಉತ್ಪನ್ನಗಳು ಬಳಸುವ ಮತ್ತು ಗ್ರಾಮಗಳ ಅಭಿವೃದ್ಧಿ ಸಂಕಲ್ಪ ಅವರದ್ದಾಗಿತ್ತು. ಅದರಂತೆ ನಾವೆಲ್ಲಾ ನಡೆಯಬೇಕಿದೆ ಎಂದು ತಿಳಿಸಿದರು.
ಗಾಂಧೀಜಿ ಆದರ್ಶ ಕಠಿಣ: ಗಾಂಧಿ ಸ್ವರಾಜ್ಯ ಕಲ್ಪನೆಯನ್ನು ಕಾನೂನಾತ್ಮಕವಾಗಿ ಸಾಕಾರಗೊಳಿಸುವ ಪ್ರಯತ್ನಗಳು ನಡೆದಿವೆ. ಅದು ಯಶಸ್ವಿಯಾಗಿ ಸಾಕಾರಗೊಳಿಸುವ ಕಡೆ ಜನಸಾಮಾನ್ಯರಾದಿಯಾಗಿ ಎಲ್ಲರು ಶ್ರಮಿಸಿದರೆ ಈ ಗ್ರಾಮಭಾರತ ಸಶಕ್ತವಾಗಲು ಸಾಧ್ಯವಿದೆ. ಗಾಂಧೀಜಿಯ ಆದರ್ಶ ಕಠಿಣ ಆದರೆ, ಆ ದಾರಿ ಅನಿವಾರ್ಯ. ನಾವು ಸಂವೇದನೆಗಳನ್ನ ಬೆಳೆಸಿಕೊಳ್ಳಬೇಕಿದೆ. ಸಮಾಜ ಅಸಮಾನತೆ, ಕ್ರೌರ್ಯ, ಅಸಹಿಷ್ಣುತೆ, ಅಸತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಸುತ್ತಲಿನ ತಪ್ಪುಗಳನ್ನು ತಿದ್ದುವ ಮತ್ತು ಸುಧಾರಿಸುವ ಕೆಲಸಗಳು ಆಗಬೇಕು ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ್ ಹೇಳಿದರು.
ಕೃಷಿಯನ್ನು ಲಾಭದಾಯಕ ಕಸುಬನ್ನಾಗಿಸಲು ರಾಸಾಯನಿಕ ಕೃಷಿಯನ್ನು ಪೂರ್ಣಬಿಡಬೇಕಿದೆ. ಇಂತಹ ಬದಲಾವಣೆ ತರುವ ಕೆಲಸಗಳು ನಿರಂತರವಾಗಿ ಆಗಬೇಕು. ತಮಗೆ ಬೇಕಾದ ಸರ್ಕಾರಗಳನ್ನು ರೂಪಿಸುವ ಸಾಮರ್ಥ್ಯ ಜನಸಾಮಾನ್ಯರಿಗೆ ಬರಬೇಕು ಆಗ ಮಾತ್ರ ಗಾಂಧಿ ಕಂಡ ಕನಸು ನನಸಾಗಲಿದೆ ಎಂದರು.
ಪೋಷಕರಾದಿಯಾಗಿ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸುವ ಕಡೆ ಹೆಚ್ಚು ಗಮನಕೊಡಬೇಕಿದೆ. ಕೇವಲ ಅಂಕಪಟ್ಟಿ ಸುತ್ತ ತಿರುಗುವ ಮಸ್ಥಿತಿಯನ್ನು ಬಿಡಬೇಕು. ತಮ್ಮ ಮಕ್ಕಳಿಗೆ ಶ್ರಮ ಮೌಲ್ಯವನ್ನು ಅರ್ಥಮಾಡಿಸಬೇಕಿದೆ. ಮಾಹಿತಿ ಯುಗದಲ್ಲಿ ತಂತ್ರಜ್ಞಾನದ ಸದ್ಭಳಕೆ ಮಾಡಿಕೊಳ್ಳುವುದರ ಬಗ್ಗೆ ಮಾರ್ಗದರ್ಶನಬೇಕಿದೆ. ಕಳೆದ 25 ವರ್ಷಗಳಿಂದ ಶಿಕ್ಷಣ ವ್ಯವಸ್ಥೆಯಲ್ಲಿದ್ದ ನನಗೆ ಒಬ್ಬೇ ಒಬ್ಬ ಪೋಷಕರು ತಮ್ಮ ಮಕ್ಕಳು ಶಾಲೆಯಲ್ಲಿ ಬಿಟ್ಟುಹೋದ ಬೆಲೆಬಾಳುವ ವಸ್ತುಗಳ ಕುರಿತು ವಿಚಾರಿಸಲು ಕರೆ ಮಾಡಿಲ್ಲ. ಆದರ್ಶ ಗ್ರಾಮ ಕಲ್ಪನೆ ಅಸಾಧ್ಯ ಅಂತ ಹೇಳಿದ ಜನಕ್ಕೆ ಈಗ ಮನವರಿಕೆಯಾಗಿದೆ ಗಾಂಧಿ ಶಿಕ್ಷಣಇಂದಿನ ಅಗತ್ಯ ಎಂದು ಗ್ರಾಪಂ ಸದಸ್ಯರ ಮಹಾಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಡಶೆಟ್ಟಿಹಳ್ಳಿ ಸತೀಶ್ ಹೇಳಿದರು.
ವಿದ್ಯೆ ಕಲಿತನಂತರ ಅದು ಸಮಾಜ ಮುಖಿಯಾಗಿ ಹೊರಹೊಮ್ಮಬೇಕಿದೆ. ಕೇವಲ ಹಣಗಳಿಕೆಯ ದೃಷ್ಟಿಕೋನದ ಶಿಕ್ಷಣದಿಂದ ಏನೂ ಉಪಯೋಗವಿಲ್ಲ. ಜಗತ್ತಿನ ದೊಡ್ಡ ಜವಾಬ್ದಾರಿ ಪ್ರಾಥಮಿಕ ಶಿಕ್ಷಣವನ್ನು ಗಟ್ಟಿಕೊಳಿಸುವುದು. ಇದರ ಜತೆಗೆ ಸ್ಥಳಿಯವಾದ ಕೌಶಲಗಳ ಕಡೆ ಗಮನಕೊಡಬೇಕು ಮತ್ತು ಶಿಕ್ಷಣವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಎಂ.ಸಿ.ನರೇಂದ್ರ ಅವರು ಗಾಂಧಿ ಪುತ್ಥಳಿ ಅನಾವರಣಗೊಳಿಸಿದರು.
ರಾಜ್ಯ ರೈತ ಸಂಟದ ಅಧ್ಯಕ್ಷ ಗೋವಿಂದರಾಜು, ಕೃಷಿ ತಜ್ಞ ಡಾ.ಎಚ್.ಮಂಜುನಾಥ್, ಪ್ರೊ.ಶಿವರಾಜ್, ಸಿ.ಯತಿರಾಜು, ರವೀಶ್ ಮತ್ತಿತರರು ಉಪಸ್ಥಿತರಿದ್ದರು.