ತುಮಕೂರು ವಿವಿ ಕ್ಯಾಂಪಸ್​ನಲ್ಲಿ ಮಹಿಳಾ ಪಿಜಿ

ತುಮಕೂರು ತಾಲೂಕು ವಸಂತನರಸಾಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉದ್ಯೋಗಿತ ಮಹಿಳಾ ವಸತಿ ಸಂಕೀರ್ಣ ಶಂಕಸ್ಥಾಪನೆ ಸಮಾರಂಭವನ್ನು  ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿಗಣೇಶ್​, ಡಾ.ಎಂ.ಮಹೇಶ್​, ಹರೀಶ್​, ಎಚ್​.ಎಸ್​.ರವಿಶಂಕರ್​ ಮತ್ತಿತರರು ಇದ್ದರು.
ತುಮಕೂರು ತಾಲೂಕು ವಸಂತನರಸಾಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉದ್ಯೋಗಿತ ಮಹಿಳಾ ವಸತಿ ಸಂಕೀರ್ಣ ಶಂಕಸ್ಥಾಪನೆ ಸಮಾರಂಭವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿಗಣೇಶ್​, ಡಾ.ಎಂ.ಮಹೇಶ್​, ಹರೀಶ್​, ಎಚ್​.ಎಸ್​.ರವಿಶಂಕರ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಸಂತನರಸಾಪುರದಲ್ಲಿ 20 ಕೋಟಿ ವೆಚ್ಚದ 7 ಅಂತಸ್ತಿನ ಮಹಿಳಾ ಪಿಜಿ
  • ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ
  • ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೆಐಎಡಿಬಿ ಸಹಯೋಗ
ತುಮಕೂರು: ತುಮಕೂರು ವಿಶ್ವವಿದ್ಯಾಲಯ ಕ್ಯಾಂಪಸ್​ನಲ್ಲಿ ಉದ್ಯೋಗಿತ ಮಹಿಳಾ ವಸತಿ ನಿಲಯ ನಿಮಾರ್ಣಕ್ಕಾಗಿ ಇನ್ನೊಂದು ತಿಂಗಳಲ್ಲಿ 40 ಕೋಟಿ ರೂ., ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ತಾಲೂಕಿನ ತಿಮ್ಮರಾಜನಹಳ್ಳಿ ಗ್ರಾಪಂ ವ್ಯಾಪ್ತಿಯ ವಸಂತನರಸಾಪುರ ಕೈಗಾರಿಕಾ ಪ್ರದೇಶದ 1ನೇ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೆಐಎಡಿಬಿ ಸಹಯೋಗದಲ್ಲಿ 20 ಕೋಟಿ ರೂ., ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ "ಉದ್ಯೋಗಿತ ಮಹಿಳಾ ವಸತಿ ಸಂಕೀರ್ಣ' ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ದೇಶದ 490 ಕಡೆ 5 ಲಕ್ಷ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳನ್ನು ಕೇಂದ್ರ ಸರ್ಕಾರವು ನಿರ್ಮಿಸಿದೆ. ಇಂತಹ ಕಾರ್ಯಕ್ರಮಗಳು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹಿಳಾ ಸಬಲೀಕರಣದ ಹೊಸ ಸಂದೇಶವಾಗಿದೆ ಎಂದರು.
ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗ ಮಾಡುವ ಹೆಣ್ಣುಮಕ್ಕಳಿಗೆ ವಸತಿ ಕಲ್ಪಿಸಲು ಸುಸಜ್ಜಿತ ವಸತಿ ನಿಲಯ ನಿಮಾರ್ಣ ಮಾಡಲು ಉದ್ದೇಶಿಸಲಾಗಿದೆ. 20 ಕೋಟಿ ರೂ. ವೆಚ್ಚದಲ್ಲಿ ನೆಲ ಮಹಡಿ ಹಾಗೂ 6 ಅಂತಸ್ತುಗಳ ಒಳಗೊಂಡ 480 ಹಾಸಿಗೆಗಳುಳ್ಳ ಕಟ್ಟಡ ನಿಮಾರ್ಣದ ಜತೆಗೆ ಉದ್ಯೋಗಿತ ಮಹಿಳೆಯರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ. 2027ಕ್ಕೆ ಜ.14ಕ್ಕೆ ಪೂರ್ಣಗೊಳಿಸಲು ಗುರಿ ಹೊಂದಲಾಗಿದ್ದು ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಉದ್ಯೋಗ ಮಾಡುವ ಹೆಣ್ಣುಮಕ್ಕಳಿಗೆ ವಸತಿ ಕಲ್ಪಿಸಲಾಗುವುದು ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್​ಗೌಡ ಭರವಸೆ ನೀಡಿದರು.
ವಸಂತನರಸಾಪುರದಲ್ಲಿ ಕೈಗಾರಿಕೆ ಸ್ಥಾಪನೆಗೆ 13 ಸಾವಿರ ಎಕರೆ ಭೂಮಿ ಸ್ವಾಧಿನಪಡಿಸಿಕೊಳ್ಳಲಾಗಿದೆ. ಕೇಂದ್ರ ಬೃಹತ್​ ಕೈಗಾರಿಕಾ ಸಚಿವ ಎಚ್​.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್​ ಅವರು ಮನಸು ಮಾಡಿ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕಗಳ ಸ್ಥಾಪನೆಗೆ ಪ್ರಯತ್ನಿಸಿ, ಕನಿಷ್ಠ 10 ಸಾವಿರ ಜನರಿಗೆ ಉದ್ಯೋಗ ದೊರೆಯಲು ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್​, ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​, ದಿಶಾ ಸಮಿತಿ ಸದಸ್ಯ ವೈ.ಎಚ್​.ಹುಚ್ಚಯ್ಯ, ಕೆಐಎಡಿಬಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಮಹೇಶ್​, ವಸಂತನರಸಾಪುರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹರೀಶ್​, ಬಿಜೆಪಿ ಮುಖಂಡ ರಾಜಶೇಖರ್​ ಮತ್ತಿತರರು ಉಪಸ್ಥಿತರಿದ್ದರು.
ಅಭಿವೃದ್ಧಿಯಲ್ಲಿ ರಾಜಕಾರಣ ಬೇಡ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಒಂದಾಗಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ, ಈ ನಿಟ್ಟಿನಲ್ಲಿ ನಾನೂ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಒಂದಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇವೆ. ರಾಜಕೀಯ ಮುಳ್ಳಿನ ಹಾಸಿಗೆ ಇದ್ದಂತೆ. ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಅನ್ನುವುದಕ್ಕಿಂತ ಜನರ ಜತೆ ಹೇಗೆ ಬೆರೆಯುತ್ತೇವೆ ಅನ್ನುವುದು ಮುಖ್ಯವಾಗಲಿದೆ. ಕೇಂದ್ರ ಸರ್ಕಾರದ ಜತೆ ನೀವು ಎಷ್ಟು ದೂರ ಹೋಗುವಿರೊ ಸರ್ಕಾರ ಅಷ್ಟು ದೂರವಾಗಲಿದೆ. ನೀವು ಎಷ್ಟು ಹತ್ತಿರಬರುವಿರೋ ಅಷ್ಟು ಹತ್ತಿರ ಕೇಂದ್ರ ಸರ್ಕಾರ ಬರುತ್ತದೆ ಎಂದು ಸೂಚ್ಯವಾಗಿ ಡಿಸಿ, ಜಿಪಂ ಸಿಇಒಗೆ ಸಚಿವ ವಿ.ಸೋಮಣ್ಣ ಹೇಳಿದರು.
7 ಅಂತಸ್ತಿನ ಪಿಜಿ !
ವಸಂತನರಸಾಪುರ ಕೈಗಾರಿಕಾ ಪ್ರದೇಶದ 1ನೇ ಹಂತದಲ್ಲಿ 7 ಅಂತಸ್ತಿನ "ಉದ್ಯೋಗಿತ ಮಹಿಳಾ ವಸತಿ ಸಂಕೀರ್ಣ'ವನ್ನು 20 ಕೋಟಿ ರೂ., ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು 480 ಹಾಸಿಗೆಗಳ ಸುಸಜ್ಜಿತ ವಸತಿ ನಿಲಯ ಇದಾಗಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ವಸತಿ ನಿಲಯ ನಿರ್ಮಿಸಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net