ದಿನವಿಡೀ ನಗರದಲ್ಲಿ ಜೆಸಿಬಿ ಘರ್ಜನೆ

 ತುಮಕೂರಿನ ಬಿ.ಎಚ್​.ರಸ್ತೆಯಲ್ಲಿನ ಫುಟ್ ಪಾತ್​ ಒತ್ತುವರಿ ತೆರವು ಕಾರ್ಯಾಚರಣೆ.
ತುಮಕೂರಿನ ಬಿ.ಎಚ್​.ರಸ್ತೆಯಲ್ಲಿನ ಫುಟ್ ಪಾತ್​ ಒತ್ತುವರಿ ತೆರವು ಕಾರ್ಯಾಚರಣೆ.
Published on

ಪ್ರಮುಖ ಮುಖ್ಯಾಂಶಗಳು

  • ಮಹಾನಗರ ಪಾಲಿಕೆ ಬಿರುಸಿನ ಕಾರ್ಯಾಚರಣೆ
  • ಮುಂದುವರೆದ ಫುಟ್ ಪಾತ್​ ಒತ್ತುವರಿ ತೆರವು
  • 3 ಕಿ.ಮೀ., ಫುಟ್ ಪಾತ್ ಅತಿಕ್ರಮಣ

ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರಮುಖ ರಸ್ತೆಗಳಲ್ಲಿ ಏಕಕಾಲದಲ್ಲಿ ಜೆಸಿಬಿಗಳು ಘರ್ಜಿಸಿದವು. ದಿನವಿಡೀ ಅನಧಿಕೃತ ಫುಟ್ ಪಾತ್​ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಪಾಲಿಕೆ ಸಿಬ್ಬಂದಿ ಭಾಗಿಯಾಗಿದ್ದು ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ವೆಂಡರ್​ ಝೊನ್​ಗಳಿಗೆ ಸ್ಥಳಾಂತರಿಸಲಾಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮಾಡಿಕೊಂಡಿದ್ದು ಮಂಗಳವಾರ ಫುಟ್ ಪಾತ್​ ಆಪರೇಷನ್​ ಆರಂಭಿಸಿದ್ದ ಮಹಾನಗರ ಪಾಲಿಕೆ 2ನೇ ದಿನವು ಕಾರ್ಯಾಚರಣೆ ಮುಂದುವರೆಸಿತು. ಪಾಲಿಕೆ ಆಯುಕ್ತೆ ಬಿ.ಶುಭ ನೇತೃತ್ವದಲ್ಲಿ ಪಾಲಿಕೆ ವಲಯವಾರು ಆಯುಕ್ತರ ಮಾರ್ಗದರ್ಶನದಲ್ಲಿ ಫುಟ್ ಪಾತ್​ ಒತ್ತುವರಿ ತೆರವು ಕೈಗೊಳ್ಳಲಾಯಿತು. ಜೆ.ಸಿ.ನಗರದಲ್ಲಿ ಸ್ವಯಂಪ್ರೇರಿತರಾಗಿ ಕೆಲವು ಬೀದಿಬದಿ ವ್ಯಾಪಾರಿಗಳು ಒತ್ತುವರಿ ತೆರವು ಮಾಡಿಕೊಂಡಿದ್ದು ಬುಧವಾರ ಪಾಲಿಕೆ ಸಿಬ್ಬಂದಿ ಜೆಸಿಬಿ ಸಮೇತ ಕೆಲವು ಕಡೆ ಕಾರ್ಯಾಚರಣೆ ಮುಂದುವರೆಸಿ ಫುಟ್ ಪಾತ್​ ಮೇಲಿನ ಅತಿಕ್ರಮಣ ತೆರವು ನಡೆಸಿತು. ಫುಟ್ ಪಾತ್ ಅತಿಕ್ರಮಿಸಿಕೊಂಡಿದ್ದ ದೊಡ್ಡ ದೊಡ್ಡ ಅಂಗಡಿಗಳ ಮುಂದಿನ ನಾಮಲಕ, ಮೆಟ್ಟಿಲುಗಳು, ಕಬ್ಬಿಣದ ರೈಲಿಂಗ್ಸ್​ ಅನ್ನು ಜೆಸಿಬಿಗಳು ಕಿತ್ತೆಸೆದವು.
150 ಬೀದಿಬದಿ ವ್ಯಾಪಾರಿಗಳ ಶಿಫ್ಟ್ : ಜೆ.ಸಿ.ರಸ್ತೆಯಲ್ಲಿನ ಫುಟ್ ಪಾತ್​ ಒತ್ತುವರಿ ತೆರವು ಅತಿಸೂಕ್ಷ$್ಮವೆನಿಸಿದ್ದು ಮುಂಚೆಯೇ ಎಲ್ಲಾ ಬೀದಿಬದಿ ವ್ಯಾಪಾರಿಗಳಿಗು ಸ್ವಯಂಪ್ರೇರಿತವಾಗಿ ತೆರವು ಮಾಡಲು ಸೂಚನೆ ಕೊಡಲಾಗಿತ್ತು. ಅದರಂತೆ ಬಹುತೇಕರು ಸ್ವಯಂಪ್ರೇರಿತರಾಗಿ ತೆರವು ಮಾಡಿದ್ದರು. ಬುಧವಾರ ಜೆಸಿಬಿ ಸಮೇತ ಆಗಮಿಸಿದ ಪಾಲಿಕೆ ಸಿಬ್ಬಂದಿ ಪಾದಚಾರಿ ಮಾರ್ಗಗಳಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್​ಗಳನ್ನು, ಪೆಟ್ಟಿ ಅಂಗಡಿಗಳನ್ನು ತೆರವುಗೊಳಿಸಿದರು.
ಬಹುವರ್ಷಗಳಿಂದ ಯಾವುದೇ ಕ್ರಮಕ್ಕು ಬಗ್ಗದೆ ನೆಲೆಯೂರಿದ್ದ 150 ಬೀದಿಬದಿ ವ್ಯಾಪಾರಿಗಳನ್ನು ಮನವೊಲಿಸಿದ ಆಯುಕ್ತೆ ಬಿ.ಶುಭ, ಮಾರಿಯಮ್ಮ ನಗರದ ಬಳಿಯ ವ್ಯಾಪಾರ ವಲಯ (ವೆಂಡರ್​ ಝೊನ್​)ಕ್ಕೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾದರು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಸುಪ್ರೀಂಕೋರ್ಟ್​ ಆದೇಶವನ್ನು ಪಾಲಿಸಿದರು.
ಮಂಡಿಪೇಟೆಯಲ್ಲಿ ಬಹುತೇಕ ಅಂಗಡಿಗಳವರು

ಫುಟ್ ಪಾತ್

3 ಕಿ.ಮೀ., ಫುಟ್ ಪಾತ್

​ ಒತ್ತುವರಿ

ಮಹಾನಗರ ಪಾಲಿಕೆಯ 35 ಕಿ.ಮೀ., ರಸ್ತೆಯಲ್ಲಿ 3 ಕಿ.ಮೀ., ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಸುಪ್ರೀಂ ಕೋರ್ಟ್​ ಆದೇಶ ಹಿನ್ನೆಲೆ ಅನಧಿಕೃತ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುರತ ಓಡಾಟಕ್ಕೆ ಪಾಲಿಕೆ ಕ್ರಮವಹಿಸಿದೆ. 2 ದಿನಗಳಲ್ಲಿ ಬಹುತೇಕ 2 ಕಿ.ಮೀ.,ಯಷ್ಟು ಫುಟ್ ಪಾತ್​ ಒತ್ತುವರಿ ತೆರವು ಕೈಗೊಳ್ಳಲಾಗಿದೆ.
ಡಿಪೋ ಸಮೀಪ ಶಿಫ್ಟ್
ಶಿರಾಗೇಟ್​ ಬಳಿ ರಸ್ತೆಯ ಎರಡುಬದಿಗಳಲ್ಲಿ ತಲೆಎತ್ತಿದ್ದ ಪೆಟ್ಟಿ ಅಂಗಡಿಗಳು, ಬೀದಿಬದಿ ವ್ಯಾಪಾರಿಗಳನ್ನು ಪಾಲಿಕೆ ಸಿಬ್ಬಂದಿ ನಿರ್ದಾಕ್ಷಣ್ಯವಾಗಿ ತೆರವುಗೊಳಿಸಿದರು. ಈಗಾಗಲೇ ಸೂಚನೆ ಕೊಟ್ಟಿದ್ದರು ತೆರವುಗೊಳಿಸಲು ಮೀನಮೇಷ ಎಣಿಸುತ್ತಿದ್ದವರಿಗೆ ಕಾಲಾವಕಾಶವು ಕೊಡದೆ ತೆರವುಗೊಳಿಸಲಾಯಿತು. ಈಭಾಗದ ಅಧಿಕೃತ ಬೀದಿಬದಿವ್ಯಾಪಾರಿಗಳನ್ನು ಅಂತರಸನಹಳ್ಳಿ ಕೆಎಸ್​ಆರ್​ಟಿಸಿ ಡಿಪೋ ಬಳಿಯ ವೆಂಡರ್​ ಝೊನ್​ಗೆ ಶಿಫ್ಟ್ ಮಾಡಲಾಯಿತು.
ಬಿ.ಎಚ್​.ರಸ್ತೆಯಲ್ಲು ಆಪರೇಷನ್​
ಬಿ.ಎಚ್​.ರಸ್ತೆಯಲ್ಲಿ ಫುಟ್ ಪಾತ್​ ವ್ಯಾಪಾರಿಗಳ ಅತಿಕ್ರಮಣದಿಂದ ಪಾದಚಾರಿಗಳ ಸಂಚಾರ ಕಷ್ಟವೆನಿಸಿತ್ತು. ಈ ಹಿನ್ನೆಲೆಯಲ್ಲಿ ತುಮಕೂರು ವಿಶ್ವವಿದ್ಯಾಲಯ ಮುಂಭಾಗದಿಂದ ಬಟವಾಡಿವರೆಗೆ ಜೆಸಿಬಿಗಳ ನೆರವಿನಿಂದ ಫುಟ್ ಪಾತ್ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಅಂಗಡಿ ಮಾಲೀಕರು ಪ್ರತಿರೋಧ ತೋರಿದರಾದರು ಪಾಲಿಕೆ ಸಿಬ್ಬಂದಿ ಯಾವುದಕ್ಕು ಜಗ್ಗದೇ ಕ್ರಮಕೈಗೊಂಡು ಸಾರ್ವಜನಿಕರಿಂದ ಶಬ್ಬಾಸ್​ ಗಿರಿ ಪಡೆದುಕೊಂಡರು. ಬಿ.ಎಚ್​.ರಸ್ತೆ, ಎಸ್​ಐಟಿ ಮುಖ್ಯರಸ್ತೆ ಬೀದಿಬದಿ ವ್ಯಾಪಾರಿಗಳನ್ನು ದೋಬಿಘಾಟ್​ ವೆಂಡರ್​ ಝೊನ್​ಗೆ ಸ್ಥಳಾಂತರಿಸಲಾಯಿತು.
2300ಕ್ಕು ಹೆಚ್ಚು ಅಧಿಕೃತ ಬೀದಿಬದಿ ವ್ಯಾಪಾರಿಗಳು
ಮಹಾನಗರ ಪಾಲಿಕೆಯಲ್ಲಿ 2300ಕ್ಕು ಹೆಚ್ಚು ಅಧಿಕೃತ ಬೀದಿಬದಿ ವ್ಯಾಪಾರಿಗಳು ನೊಂದಣಿ ಮಾಡಿಸಿಕೊಂಡಿದ್ದು ಇವರಿಗೆ ಪಾಲಿಕೆ ವತಿಯಿಂದ ವೆಂಡರ್​ಝೊನ್​ಗಳನ್ನು ನಿರ್ಮಿಸಿಕೊಡಲಾಗಿದೆ. ಆದರೂ, ಬೀದಿಬದಿಯಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿದ್ದು ಎಲ್ಲರನ್ನೂ ಇನ್ನೊಂದುವಾರದೊಳಗೆ ವ್ಯಾಪಾರ ವಲಯಗಳಿಗೆ ಸ್ಥಳಾಂತರಿಸಲು ಕ್ರಮವಹಿಸಲಾಗಿದೆ.
ನಗರದಲ್ಲಿ 3 ಕಿ.ಮೀ., ಯಷ್ಟು ಪಾದಚಾರಿ ಮಾರ್ಗ ಒತ್ತುವರಿಯಾಗಿದೆ. ಅನಧಿಕೃತ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದು ಜೆಸಿ ರಸ್ತೆಯ 150 ವ್ಯಾಪಾರಿಗಳನ್ನು ಮಾರಿಯಮ್ಮ ವೆಂಡರ್​ ಝೊನ್​ಗೆ ಸ್ಥಳಾಂತರಿಸಲಾಗಿದೆ. ಬಿ.ಎಚ್​.ರಸ್ತೆ, ಎಸ್​ಐಟಿ ಮುಖ್ಯರಸ್ತೆ ಬೀದಿಬದಿ ವ್ಯಾಪಾರಿಗಳನ್ನು ಡೋಬಿಘಾಟ್​ ವಲಯಕ್ಕೆ ಶಿಫ್ಟ್ ಮಾಡಲಾಗಿದೆ. ಜೂನಿಯರ್​ ಕಾಲೇಜು ಮೈದಾನದ ಮುಂಭಾಗದ ವ್ಯಾಪಾರಿಗಳನ್ನು ಉಪ್ಪಾರಹಳ್ಳಿ ಮೇಲ್ಸೇತುವೆ ಕೆಳಭಾಗಕ್ಕೆ ತೆರಳಲು ಸೂಚನೆ ಕೊಡಲಾಗಿದೆ.
ಬಿ.ಶುಭ
ಆಯುಕ್ತೆ, ಮಹಾನಗರ ಪಾಲಿಕೆ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ
ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ ಮತ್ತು ಜೀವನೋಪಾಯ ನಿಯಂತ್ರಣ ಕಾಯ್ದೆ, 2014ರ ಅನ್ವಯ ಸಮೀಕ್ಷೆ ನಡೆಸಿ, ವ್ಯಾಪಾರ ವಲಯಗಳನ್ನು ಗುರುತಿಸಿ, ಮಹಾನಗರ ಪಾಲಿಕೆಯಿಂದ ಗುರುತಿನ ಚೀಟಿ ನೀಡಲಾಗಿರುವ ಅರ್ಹ ಎಲ್ಲಾ ಬೀದಿಬದಿ ವ್ಯಾಪಾರಿಗಳಿಗೆ ಸ್ಥಳಾಂತರಕ್ಕು ಮುನ್ನ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾ ಫುಟ್​ಪಾತ್​ ವ್ಯಾಪಾರಿಗಳ ಸಂಘ ಹಾಗೂ ಪಾಲಿಕೆ ವೆಂಡಿಂಗ್​ ಕಮಿಟಿ ಸದಸ್ಯರು ಈ ಕುರಿತು ಮಹಾನಗರ ಪಾಲಿಕೆಯ ಸಭೆಯಲ್ಲಿ ಒತ್ತಾಯಿಸಿದರು.
ವ್ಯಾಪಾರಕ್ಕೆ ಯಾವುದೇ ರೀತಿಯ ತೊಂದರೆಯಾಗುವಂತಹ ದೂರದ ಅಥವಾ ಗ್ರಾಹಕರಿಲ್ಲದ ಪ್ರದೇಶಗಳಿಗೆ ಸ್ಥಳಾಂತರಿಸುವುದರಿಂದ ಬೀದಿಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ. ಹೊಸ ವ್ಯಾಪಾರ ವಲಯಗಳನ್ನು ಗುರುತಿಸುವಾಗ ಆ ಪ್ರದೇಶದಲ್ಲಿರುವ ವ್ಯಾಪಾರಿಗಳ ಸಾಂದ್ರತೆ, ಗ್ರಾಹಕರ ಸಂಚಾರ, ವ್ಯಾಪಾರದ ಸ್ವರೂಪ ಹಾಗೂ ವ್ಯಾಪಾರಿಗಳ ಜೀವನೋಪಾಯದ ಅಗತ್ಯಗಳನ್ನು ಪರಿಗಣಿಸಿ ವೈಜ್ಞಾನಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಘವು ಆಗ್ರಹಿಸಿದೆ.
ಅರ್ಹ ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಸ್ಥಳಾಂತರಿಸುವ ಕ್ರಮವನ್ನು ಕೈಗೊಳ್ಳಬಾರದು. ಕಾನೂನಿನ ಆಶಯದಂತೆ ಬೀದಿಬದಿ ವ್ಯಾಪಾರಿಗಳ ಜೀವನೋಪಾಯವನ್ನು ಸಂರಕ್ಷಿಸಿ, ಅವರೊಂದಿಗೆ ಸಮಾಲೋಚನೆ ನಡೆಸಿ, ಸೂಕ್ತ ಪರ್ಯಾಯ ಸ್ಥಳ ಒದಗಿಸಿದ ನಂತರವೇ ಯಾವುದೇ ಸ್ಥಳಾಂತರ ಕ್ರಮ ಕೈಗೊಳ್ಳಬೇಕು.
ಎನ್​.ಕೆ.ಸುಬ್ರಮಣ್ಯ
ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಫುಟ್​ಪಾತ್​ ವ್ಯಾಪಾರಿಗಳ ಸಂಘ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net