ಖಾಲಿ ಇರುವ ಹುದ್ದೆ ಭರ್ತಿ ಮಾಡಿ

Fill the vacant position.
Fill the vacant position.
Published on
ಶಿರಾ: ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತ್ವಿಕ್​ ರಂಜನ್​ ಪಾಂಡೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಯ ವಿವಿಧ ಕಾರ್ಯಕ್ಷಮತಾ ಸೂಚ್ಯಂಕಗಳನ್ನು ಸಮಗ್ರವಾಗಿ ಪರಿಶೀಲಿಸಿ, ಡಯಾಲಿಸಿಸ್​ ಘಟಕದ ದಾಖಲೆಗಳು ಹಾಗೂ ಅದರ ಕಾರ್ಯನಿರ್ವಹಣೆಯ ಪ್ರಗತಿಯನ್ನು ವೀಕ್ಷಿಸಿದರು. ಆಸ್ಪತ್ರೆಯ ದುರಸ್ತಿ ಹಾಗೂ ನವೀಕರಣ ಕಾಮಗಾರಿಗಳಿಗಾಗಿ ಕರ್ನಾಟಕ ಆರೋಗ್ಯ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯಿಂದ 1.5 ಕೋಟಿ ಅಂದಾಜು ಮೊತ್ತದ ಸಿದ್ಧಪಡಿಸಲಾದ ಯೋಜನೆಯನ್ನು ಪರಿಶೀಲಿಸಿ ತಕ್ಷಣವೇ ಇಲಾಖೆಯ ಇಂಜಿನಿಯರ್​ ಅವರಿಗೆ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಲು ಆದೇಶಿಸಿದರು.
ಆಸ್ಪತ್ರೆಯಲ್ಲಿ ನಾಲ್ಕು ವೈದ್ಯರ ಹುದ್ದೆಗಳು ಖಾಲಿ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವೈದ್ಯರ ಖಾಲಿ ಹುದ್ದೆಗಳ ಕುರಿತು ಸಾಮಾನ್ಯ ವರ್ಗಾವಣೆ ಕೌನ್ಸೆಲಿಂಗ್​ನಲ್ಲಿ ಭರ್ತಿಯಾಗದಿದ್ದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಗೆ ಹೆಚ್ಚುವರಿ ಟ್ರಾಮಾ ಕೇರ್​ ಹಾಸಿಗೆಗಳ ಅಗತ್ಯತೆ ಬಗ್ಗೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಭರವಸೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಡಾ.ಸಿದ್ದೇಶ್​, ಡಾ.ಪ್ರಭಾ, ಡಾ.ರಾಮೇಗೌಡ, ಡಾ.ಮೋಹನ್​, ಡಾ.ಮೋಹನ್​ ದಾಸ್​, ಡಾ.ರವೀಂದ್ರ ನಾಯಕ್​, ಡಾ.ಶ್ರೀನಾಥ್​, ಡಾ.ಅಪೂರ್ವಾ, ಡಾ.ಶ್ರೀಧರ್​, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net