ವೆಂಕಟರಮಣಪ್ಪ ಅಂತ್ಯಸಂಸ್ಕಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಚಿವ ವೆಂಕಟರಮಣಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಚಿವ ವೆಂಕಟರಮಣಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ಅಹಿಂದ ವರ್ಗದ ಧ್ವನಿಯಾಗಿದ್ದ ವೆಂಕಟರಮಣಪ್ಪ
  • ಅಗಲಿದ ಮುತ್ಸದ್ಧಿಗೆ ಸಿದ್ದರಾಮಯ್ಯ ನಮನ
  • ಗಳಗಳನೆ ಅತ್ತ ಕೆಎನ್ನಾರ್​, ಎಸ್ಪಿಎಂ
ಪಾವಗಡ/ವೈ.ಎನ್​.ಹೊಸಕೋಟೆ: ಹಿರಿಯ ಕಾಂಗ್ರೆಸ್ಸಿಗ, ಮಾಜಿ ಸಚಿವ ವೆಂಕಟರಮಣಪ್ಪ ಅವರ ಅಂತಿಮ ವಿಧಿ ವಿಧಾನವು ಶನಿವಾರ ಅವರ ಹುಟ್ಟೂರಾದ ಹನುಮಂತನಹಳ್ಳಿ ತೋಟದ ಮನೆ ಆವರಣದಲ್ಲಿ ನೆರವೇರಿಸಲಾಯಿತು. ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಕೆ.ಜೆ.ಜಾರ್ಜ್​, ಕೆ.ಎನ್​.ರಾಜಣ್ಣ, ಜಮೀರ್​ ಅಹ್ಮದ್​ ಸೇರಿದಂತೆ ಸಹಸ್ರಾರು ಮಂದಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಅಂತಿಮ ಗೌರವ ಸಲ್ಲಿಸಿದರು. ಮೂರು ಸುತ್ತು ಕುಶಾಲು ತೋಪು ಆರಿಸಿ ಜಿಲ್ಲಾಡಳಿತದ ವತಿಯಿಂದ ಅಂತಿಮ ನಮನ ಸಲ್ಲಿಸಲಾಯಿತು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ಸಾವನ್ನಪ್ಪಿದ್ದ ವೆಂಕಟರಮಣಪ್ಪ ಅಂತ್ಯಸಂಸ್ಕಾರವು ಬೋವಿ ಸಮುದಾಯದ ಸಂಪ್ರದಾಯದಂತೆ ಶನಿವಾರ ನೆರವೇರಿತು. ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಈ ಭಾಗವಹಿಸಿದ್ದರು. ಪುತ್ರರಾದ ಎಚ್​.ವಿ.ಕುಮಾರಸ್ವಾಮಿ, ಶಾಸಕ ಎಚ್​.ವಿ.ವೆಂಕಟೇಶ್​ ಹಾಗೂ ಮೊಮ್ಮಕ್ಕಳೂ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಮುತ್ಸದ್ಧಿ ವೆಂಕಟರಮಣಪ್ಪ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಈ ವೇಳೆ "ಜೋಹಾರ್​ ವೆಂಕಟರಮಣಪ್ಪ ' , "ಮತ್ತೆ ಹುಟ್ಟಿ ಬಾ ಪೆದ್ದಯ್ಯ(ದೊಡ್ಡಪ್ಪ)' ಎಂಬ ೂಷಣೆಗಳನ್ನು ಕೂಗಿ ಕಣ್ಣೀರಿಟ್ಟರು.
ಅಹಿಂದ ವರ್ಗದ ಧ್ವನಿ! ಅಹಿಂದ ವರ್ಗದ ಧ್ವನಿಯಾಗಿದ್ದ ವೆಂಕಟರಮಣಪ್ಪ ಅವರು ಸಮಾಜದ ತಳಸಮುದಾಯ ಹಾಗೂ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಧ್ಯಾಹ್ನ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದ ವೆಂಕಟರಮಣಪ್ಪ ಅವರು ಇತ್ತೀಚಿಗಷ್ಟೇ ನನ್ನನ್ನು ಭೇಟಿಯಾಗಿ ವೈ.ಎನ್​.ಹೊಸಕೋಟೆ ಬೀರಲಿಂಗೇಶ್ವರ ದೇವಸ್ಥಾನದ ಜೀಣೋರ್ದ್ಧಾರಕ್ಕೆ ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಲು ಬಂದಿದ್ದರು. 4 ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು, ಅಹಿಂದ ವರ್ಗದ ಧ್ವನಿಯಾಗಿದ್ದ ಅವರು ಸಮಾಜದಲ್ಲಿ ತಳ ವರ್ಗಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದರು ಎಂದು ಸ್ಮರಿಸಿದರು.
ಕಳೆದ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಪುತ್ರನಿಗೆ ಟಿಕೆಟ್​ ನೀಡುವಂತೆ ಕೇಳಿಕೊಂಡಿದ್ದರು. ಪುತ್ರನನ್ನು ಶಾಸಕರಾಗಿ ಗೆಲ್ಲಿಸಿಕೊಂಡಿದ್ದರು. ಈಗ ಪುತ್ರ ವೆಂಕಟೇಶ್​ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಅವರ ತಂದೆಯವರ ಆದರ್ಶಗಳ ಹಾದಿಯಲ್ಲಿ ನಡೆದು ತಾಲೂಕಿನ ಜನರ ಪ್ರೀತಿ,ವಿಶ್ವಾಸ ಹಾಗೂ ನಂಬಿಕೆಯನ್ನು ತಂದೆಯಂತೆ ಗಳಿಸಿವರೆಂಬ ವಿಶ್ವಾಸವಿದೆ. ಇನ್ನೂ 10 ವರ್ಷ ನಮ್ಮ ಜತೆ ಇರುತ್ತಾರೆಂದು ಕೊಂಡಿದ್ದೆ ಅವರ ನಿಧನದಿಂದ ರಾಜ್ಯಕ್ಕೆ ಅಪಾರ ನಷ್ಟವಾಗಿದೆ. ಅವರ ಅಗಲಿಕೆಯ ದು:ಖ ಭರಿಸುವ ಶಕ್ತಿಯನ್ನು ಭಗವಂತನು ಎಲ್ಲರಿಗೂ ನೀಡಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಗಳಗಳನೆ ಅತ್ತ ಕೆಎನ್ನಾರ್​, ಎಸ್ಪಿಎಂ
ವೆಂಕಟರಮಣಪ್ಪ ಅವರ ಅತ್ಯಂತ ಆತ್ಮೀಯರಾಗಿದ್ದ ಮಾಜಿ ಸಚಿವ ಕೆ.ಎನ್​.ರಾಜಣ್ಣ, ಮಾಜಿ ಸಂಸದ ಎಸ್​.ಪಿ. ಮುದ್ದಹನುಮೇಗೌಡ ಹಾಗೂ ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಪಾರ್ಥೀವ ಶರೀರ ಕಂಡೊಂಡನೆ ಗಳಗಳನೇ ಕಣ್ಣೀರಿಟ್ಟರು. ಹಿರಿಯ ಪುತ್ರ ಎಚ್​.ವಿ.ಕುಮಾರಸ್ವಾಮಿ ಹಾಗೂ ಶಾಸಕ ಎಚ್​.ವಿ.ವೆಂಕಟೇಶ್​ಗೆ ನಿಮ್ಮ ತಂದೆಯ ಹೆಸರು ಉಳಿಸುವಂತ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಮತ್ತೆ ಹುಟ್ಟಿ ಬಾ ಪೆದ್ದಯ್ಯ
ಕಳೆದ 40 ವರ್ಷಗಳಿಂದ ಪಾವಗಡ ರಾಜಕೀಯ ೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ವೆಂಕಟರಮಣಪ್ಪ ಅವರು ತಾಲೂಕಿನಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಏನೇ ಸಮಸ್ಯೆ ಇದ್ದರು ತೋಟದ ಮನೆಗೆ ನಿಮ್ಮನ್ನು ಹುಡುಕಿಕೊಂಡು ಬರುತ್ತಿದ್ದೆವು, ಇನ್ನು ಮುಂದೆ ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕೆಂದು ಗೋಳಾಡಿ ಪಾರ್ಥಿವ ಶರೀರದ ಮುಂದೆ 'ಜೋಹಾರ್​ ವೆಂಕಟರವಣಪ್ಪ' , "ಮತ್ತೆ ಹುಟ್ಟಿ ಬಾ ಪೆದ್ದಯ್ಯ(ದೊಡ್ಡಪ್ಪ)' ಎಂಬ ೂಷಣೆಗಳನ್ನು ಕೂಗಿ ಕಣ್ಣೀರಿಟ್ಟು ಚೀರಾಡಿದರು. ಈ ದೃಷ್ಯ ಕಂಡು ನೆರೆದಿದ್ದ ಜನರ ಕಣ್ಣುಗಳು ಒದ್ದೆಯಾದವು.
ಅಂತಿಮ ದರ್ಶನ ಪಡೆದ ಗಣ್ಯರು
ಮಾಜಿ ಸಚಿವರಾದ ಕೆ.ಜೆ.ಜಾರ್ಜ್​, ಜಮೀರ್​ ಅಹಮ್ಮದ್​, ಕೆ.ಎನ್​.ರಾಜಣ್ಣ, ಎಂಎಲ್ಸಿಗಳಾದ ಡಾ.ಯತೀಂದ್ರ ಸಿದ್ದರಾಮಯ್ಯ, ರಾಜೇಂದ್ರರಾಜಣ್ಣ, ಬಿಜೆಪಿ ಶಾಸಕ ಬಿ.ಸುರೇಶಗೌಡ, ಪರಿಟಾಲ ಸುನೀತಮ್ಮ, ಕಲ್ಯಾಣದುರ್ಗಂ ಶಾಸಕ ಅಮಲಿನೇನಿ ಸುರೇಂದ್ರಬಾಬು, ಮಾಜಿ ಸಂಸದರಾದ ಎಸ್​.ಪಿ.ಮುದ್ದುಹನುಮೇಗೌಡ, ಜನಾರ್ದನಸ್ವಾಮಿ, ಮುಖಂಡರಾದ ಗೂಳಿಹಟ್ಟಿ ಶೇಖರ್​, ರಘುವೀರಾರೆಡ್ಡಿ, ವೈ.ಎ.ನಾರಾಯಣಸ್ವಾಮಿ, ಎಚ್​.ನಿಂಗಪ್ಪ, ಶಾಂತಲಾ ರಾಜಣ್ಣ, ಸೂರನಹಳ್ಳಿ ಶ್ರೀನಿವಾಸ ಸೇರಿದಂತೆ ವಿವಿಧ ಮುಖಂಡರು ಅಂತಿಮ ದರ್ಶನ ಪಡೆದರು. ಜಿಲ್ಲಾಧಿಕಾರಿ ಶುಭಾ ಕಲ್ಯಾಣ್​, ಎಸ್ಪಿ ಕೆ.ವಿ.ಅಶೋಕ್​, ಜಿಪಂ ಸಿಇಒ ಬಿ.ವಿ.ಅಶ್ವಿಜ, ತಹಸೀಲ್ದಾರ್​ ವೈ.ರವಿ ಇದ್ದರು.
ನನ್ನ ಮೇಲೆ ಅಪಾರ ಪ್ರೀತಿ, ವಿಶ್ವಾಸ. ಅಭಿಮಾನ ಇಟ್ಟುಕೊಂಡ್ಡಿದ್ದ ವೆಂಕಟರಮಣಪ್ಪ ಸದಾ ಅಹಿಂದ ವರ್ಗಗದ ಪರವಾಗಿದ್ದವರು. ನನ್ನೊಂದಿಗೆ ಉತ್ತಮ ಒಡನಾಟ, ಅಪಾರ ಸ್ನೇಹಾಭಿಮಾನ ಹೊಂದಿದ್ದರು. ಸಾಮಾಜಿಕ ನ್ಯಾಯದ ಬದ್ಧತೆ, ರೈತಪರ, ಜನಪರ ಕಾಳಜಿ ಹೊಂದಿದ್ದ ಅವರ ನಿಧನದಿಂದ ರಾಜ್ಯಕ್ಕೆ ನಷ್ಟವಾಗಿದೆ.
ಸಿದ್ದರಾಮಯ್ಯ
ಸಿಎಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net