ಕಾಂಗ್ರೆಸ್​ ಕಚ್ಚಾಟದಿಂದ ರಾಜ್ಯ ಸರ್ಕಾರ ಪತನ

ಸಿದ್ದಗಂಗಾಮಠದ ಶಿವಕುಮಾರ ಶ್ರೀಗಳ ಗದ್ದುಗೆಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿಶೇಷ ಪೂಜೆ ಸಲ್ಲಿಸಿದರು.
ಸಿದ್ದಗಂಗಾಮಠದ ಶಿವಕುಮಾರ ಶ್ರೀಗಳ ಗದ್ದುಗೆಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿಶೇಷ ಪೂಜೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
  • ಸಿದ್ದಗಂಗಾಮಠಕ್ಕೆ ಭೇಟಿ
  • ಯತ್ನಾಳ್​ ವಿರುದ್ಧ ವಾಗ್ಧಾಳಿ
ತುಮಕೂರು: ಕಾಂಗ್ರೆಸ್​ ಪಕ್ಷದ ಆಂತರಿಕ ಕಚ್ಚಾಟದಿಂದ ರಾಜ್ಯ ಸರ್ಕಾರ ಪತನವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಸಿದ್ದಗಂಗಾ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುರ್ಚಿ ಮೇಲಾಟದಿಂದ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾದಂತಾಗಿದೆ ರಾಜ್ಯದ ಸ್ಥಿತಿ. ಮುಖ್ಯಮಂತ್ರಿ ಮನೆಗೆ ಉಪಮುಖ್ಯಮಂತ್ರಿಗಳು, ಡಿಸಿಎಂ ಮನೆಗೆ ಸಿಎಂ ಉಪಾಹಾರ ಪ್ರವಾಸ ಮಾಡುತ್ತಾ ರಾಜ್ಯದ ಹಿತ ಕಡೆಗಣಿಸಿದ್ದಾರೆ ಎಂದು ಹರಿಹಾಯ್ದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಒಂಭತ್ತು ತಿಂಗಳು ಕಳೆದರೂ ಜನರ ಪಾಲಿಗೆ ಬಂದ ಪುಟ್ಟ, ಹೋದ ಪುಟ್ಟ ಎಂಬಂತಿದೆ. ಎಲ್ಲಾ ಮಂತ್ರಿಗಳು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣಿರುವ ಪರಿಣಾಮ ಆಡಳಿತ ವ್ಯವಸ್ಥೆ ಸಂಪೂರ್ಣ ಸ್ಥಗಿತವಾಗಿದೆ. ರೈತರ ಕಷ್ಟ,ಕಾರ್ಪಣ್ಯಗಳಿಗೆ ಸ್ಪಂದಿಸುವವರೆ ಇಲ್ಲದಂತಾಗಿದ್ದಾರೆ. ಕೇಂದ್ರ ಸರ್ಕಾರ ಭತ್ತ, ಮೆಕ್ಕೆಜೋಳ ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ್ದರು ಸಹ ರಾಜ್ಯ ಸರ್ಕಾರ ಮತ್ತೊಮ್ಮೆ ಕೇಂದ್ರದ ಮೇಲೆ ಗೂಬೆ ಕೂರಿಸಲು ಹೊರಟಿರುವುದು ಖಂಡನೀಯ ಎಂದರು.
ಹೈಕಮಾಂಡ್​ ಸೂಚನೆಗೆ ಬೆಲೆ ಇಲ್ಲ: ಹೈಕಮಾಂಡ್​ ಲಕ್ಷ$್ಮಣ ರೇಖೆಯನ್ನು ಮೀರಿ ರಾಜ್ಯ ಕಾಂಗ್ರೆಸ್​ ಮುಖಂಡರು ವರ್ತಿಸುತ್ತಿದ್ದು, ಎಲ್ಲೋ ಒಂದು ಕಡೆ ಸಿಎಂ ಪುತ್ರ ಮತ್ತು ಅವರ ಬೆಂಬಲಿಗರಿಗೆ ಅಭದ್ರತೆ ಕಾಡುತ್ತಿರುವುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತಿದೆ. ಡಿಕೆಶಿ ಬೆಂಬಲಿಗರು, ಯತ್ರೀಂದ್ರ ಸಿದ್ದರಾಮಯ್ಯ ಬೆಂಬಲಿಗರ ನಡುವಿನ ಪೈಪೋಟಿ ಎಲ್ಲೆ ಮೀರಿದೆ. ಕೊನಗೆ ಕಾಂಗ್ರೆಸ್​ ಹೈಕಮಾಂಡ್​ ಸಿದ್ದರಾಮಯ್ಯ ಬಾಯಿಂದಲೇ ಶಿವಕುಮಾರ್​ ಮುಂದಿನ ಮುಖ್ಯಮಂತ್ರಿ ಹೇಳಿಸಲು ಹೊರಟಂತಿದೆ. ಇದೊಂದು ರೀತಿ ಬೀದಿ ಜಗಳದಂತೆ ಮಾರ್ಪಾಟಾಗಿದೆ ಎಂದು ರೇಣುಕಾಚಾರ್ಯ ಹೇಳಿದರು.
ಬಿಜೆಪಿ ಮಾಧ್ಯಮ ಪ್ರಮುಖ ಟಿ.ಆರ್​.ಸದಾಶಿವಯ್ಯ, ಮಧುಗಿರಿ ಮಾಧ್ಯಮ ಪ್ರಮುಖ್​ ಅರುಣ್​, ಗಜೇಂದ್ರ, ಕುಮಾರ್​ ಮತ್ತಿತರರು ಉಪಸ್ಥಿತರಿದ್ದರು.
ಯತ್ನಾಳ್​ ವಿರುದ್ಧ ವಾಗ್ಧಾಳಿ
ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ವ್ಯಕ್ತಿಗೆ ಪಕ್ಷದ ಬಗ್ಗೆ ಮಾತನಾಡುವ ಯಾವ ನೈತಿಕತೆಯು ಇಲ್ಲ. ಪ್ರತಿ ನಿತ್ಯ ಬಿ.ಎಸ್​.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೆಸರು ಹೇಳುವ ಮೂಲಕ ಹೂವಿನ ಜತೆ ನಾರು ಸ್ವರ್ಗಕ್ಕೆ ಹೋಯಿತು ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಯತ್ನಾಳ್​ ವಿರುದ್ಧ ರೇಣುಕಾಚಾರ್ಯ ವಾಗ್ಧಾಳಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿ ಪ್ರವಾಸ ರಾಜ್ಯದ ಸ್ಥಿತಿಗತಿಗಳ ವಿವರ ನೀಡಲಷ್ಟೇ ಬಿಟ್ಟರೆ, ಡಿಕೆಶಿ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವ ಕುರಿತು ಅಲ್ಲ ಎಂಬ ಮಾಹಿತಿ ನನಗಿದೆ. ಬಾಯಿ ಚಪಲಕ್ಕೆ ಸುಳ್ಳು ಸುದ್ದಿ ಹರಡುವುದನ್ನು ಯತ್ನಾಳ್​ ಬಿಡಬೇಕು. ನಾನು ಮುಂದಿನ ಮುಖ್ಯಮಂತ್ರಿ ಎಂದು ಭ್ರಮೆಯಿಂದ ತೇಲುತಿದ್ದಾರೆ ಎಂದರು.
ಮಾಜಿ ಸಿಎಂ ಸದಾನಂದಗೌಡರು ಯಾವ ಉದ್ದೇಶ ಇಟ್ಟುಕೊಂಡು ಡಿಕೆಶಿಗೆ ಬಾಹ್ಯ ಬೆಂಬಲ ಎಂದು ಹೇಳಿದ್ದಾರೋ ಗೊತ್ತಿಲ್ಲ. ನಮ್ಮದು ಹಿಂದುತ್ವ ರಾಜಕಾರಣ, ಡಿಕೆಶಿ ಅವರದ್ದು ಓಲೈಕೆಯ ರಾಜಕಾರಣ. ನಮ್ಮಿಬ್ಬರಿಗು ಸರಿ ಬರುವುದಿಲ್ಲ. ಹಾಗಾಗಿ ಕಾಂಗ್ರೆಸ್​, ಬಿಜೆಪಿ ಸೇರಿ ಅಧಿಕಾರ ಹಂಚಿಕೆ ಕನಸಿನ ಮಾತು. ಬಿಜೆಪಿಯನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ಮೂಲಕ ರಾಜ್ಯದ ಜನತೆ ಬಹುದಿನದ ಕನಸನ್ನು ನನಸು ಮಾಡಿಕೊಳ್ಳಲಿದ್ದಾರೆ ಎಂದರು.
ಹಿಂದು ಶ್ರದ್ಧಾ ಕೇಂದ್ರಗಳ ಮೇಲಿನ ಆರೋಪದ ಹಿಂದೆ ರಾಜ್ಯ ಸರ್ಕಾರದ ಹುನ್ನಾರವೂ ಇದೆ. ತಲೆ ಬರುಡೆ ಹಿಡಿದುಕೊಂಡು ಬಂದಾಗಲೇ ಅದನ್ನು ಪ್ರಶ್ನಿಸಬೇಕಾಗಿತ್ತು. ಎಸ್​ಐಟಿ ತನಿಖೆಯಿಂದ ಪವಿತ್ರ ಧರ್ಮಸ್ಥಳ ಕ್ಷೇತ್ರದ ಪಾವಿತ್ರ$್ಯ ಮತ್ತಷ್ಟು ಗಟ್ಟಿಕೊಂಡಿದೆ. ಎಡಪಂಕ್ತಿಯರ ಹೇಳಿಕೆಗೆ ಮಣಿದು ಎಸ್​ಐಟಿ ರಚಿಸಿ ಕೈಸುಟ್ಟುಕೊಂಡಿದೆ. ಇದು ಸರ್ಕಾರಕ್ಕೆ ಆಗಿರುವ ಕಪಾಳಮೋಕ್ಷ, ಷಡ್ಯಂತ್ರ ಮಾಡಿದ ಬುರುಡೆ ಗ್ಯಾಂಗ್​ನ್ನು ಒದ್ದು ಒಳಗೆ ಹಾಕಬೇಕು.ಇಲ್ಲವೇ ಗುಂಡಿಡಬೇಕು.
ಎಂ.ಪಿ.ರೇಣುಕಾಚಾರ್ಯ
ಮಾಜಿ ಸಚಿವ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net