ಎತ್ತಿನಹೊಳೆ ಯೋಜನೆ ದೆಹಲಿಗೆ ಡಿ.14 ರಂದು ರಾಜ್ಯ ನಿಯೋಗ

ತುಮಕೂರಿನಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರಹಾಲಪ್ಪ ಎತ್ತಿನಹೊಳೆ ಯೋಜನೆ ವಿಳಂಬ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೇವಣಸಿದ್ದಯ್ಯ, ಅಶೋಕ್​ ರಾಜವರ್ಧನ್​, ರಾಚಪ್ಪ, ಗೀತಾರಾಜಣ್ಣ ಮತ್ತಿತರರು ಇದ್ದರು.
ತುಮಕೂರಿನಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರಹಾಲಪ್ಪ ಎತ್ತಿನಹೊಳೆ ಯೋಜನೆ ವಿಳಂಬ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೇವಣಸಿದ್ದಯ್ಯ, ಅಶೋಕ್​ ರಾಜವರ್ಧನ್​, ರಾಚಪ್ಪ, ಗೀತಾರಾಜಣ್ಣ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ
  • ಯೋಜನೆಗಿಲ್ಲ ಹಸಿರುಪೀಠದ ಅನುಮತಿ ಕೇಂದ್ರದ ತಗಾದೆ
  • ಶೇ.90ರಷ್ಟು ಕಾಮಗಾರಿ ಪೂರ್ಣ
ತುಮಕೂರು: ಎತ್ತಿನಹೊಳೆ ಯೋಜನೆಗೆ ಹಸಿರುಪೀಠದ ಅನುಮತಿ ಪಡೆದಿಲ್ಲವೆಂಬ ನೆಪ ಹೇಳುತ್ತಿದ್ದು ಡಿ.13&14 ರಂದು ಕೇಂದ್ರ ಜಲಸಂಪನ್ಮೂಲ ಸಚಿವರ ಜತೆ ಚರ್ಚಿಸಲು ರಾಜ್ಯ ಸರ್ಕಾರವು ದೆಹಲಿಗೆ ನಿಯೋಗ ಕೊಂಡೊಯ್ಯಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಕೌಶಲ್ಯಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮುರಳೀಧರಹಾಲಪ್ಪ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆ ಸೇರಿದಂತೆ ಬಯಲುಸೀಮೆಯ 7 ಜಿಲ್ಲೆಗಳ ಕುಡಿಯುವ ನೀರಿನ ಬವಣೆ ತೀರಿಸುವ ಎತ್ತಿನಹೊಳೆ ಯೋಜನೆಯ ಶೇ.90ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು ಈಗ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಿ ಪಡಿಸುತ್ತಿದೆ. ರಾಜ್ಯ ಸರ್ಕಾರದ ಮಹತ್ವಾಕಾಂೆ ಯೋಜನೆಗೆ ಸಹಕಾರ ನೀಡುವ ಬದಲು,
ತಡೆಯಲು ಯತ್ನಿಸುತ್ತಿರುವುದು ಸರಿಯಲ್ಲ. ಇದರ ವಿರುದ್ಧ ರಾಜ್ಯದ ಎಲ್ಲಾ ಸಂಸದರು ದ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಲ್ಲಿ ಹೇಮಾವತಿ, ಭದ್ರ ಮೇಲ್ದಂಡೆ ಹಾಗೂ ಎತ್ತಿನಹೊಳೆ ಮಹತ್ವದ ಪಾತ್ರ ವಹಿಸುತ್ತವೆ. ಕೇಂದ್ರ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ, 5300 ಕೋಟಿ ರೂ., ಬಿಡುಗಡೆ ಮಾಡುವುದಾಗಿ 2023-24ನೇ ಸಾಲಿನ ಬಜೆಟ್​ನಲ್ಲಿ ಹಣಕಾಸು ಸಚಿವರು ಘೋಷಣೆ ಮಾಡಿದ್ದರು. ಆದರೆ, ಇದುವರೆಗೂ ಒಂದು ನಯಾಪೈಸೆ ನೀಡಿಲ್ಲ.ಯೋಜನೆಯನ್ನು ರಾಜ್ಯ ಸರ್ಕಾರವೇ ತನ್ನ ಸಂಪನ್ಮೂಲದಲ್ಲಿಯೇ ನಡೆಸುತ್ತಿದೆ ಎಂದರು.
ಮಲತಾಯಿಧೋರಣೆ: ಎತ್ತಿನ ಹೊಳೆ ಯೋಜನಾ ವೆಚ್ಚ ಸುಮಾರು 23,252 ಕೋಟಿ ರೂ., ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ ನಂತರ, ಕೇಂದ್ರ ಸರ್ಕಾರ ಈ ರೀತಿಯ ತಕರಾರು ತೆಗೆದಿದೆ. ಅನಗತ್ಯವಾಗಿ ತನಿಖಾ ಸಮಿತಿಗಳನ್ನು ಕಳುಹಿಸಿ, ಇನ್ನಿಲ್ಲದ ಕಿರಿಕಿರಿ ಉಂಟು ಮಾಡಿ, ಕರ್ನಾಟಕದ ಬಗೆಗಿನ ತನ್ನ ಮಲತಾಯಿ ಧೋರಣೆಯನ್ನು ಮುಂದುವರೆಸಿದೆ. ಇದರ ವಿರುದ್ಧ ಯೋಜನಾ ವ್ಯಾಪ್ತಿಗೆ ಬರುವ ಎಲ್ಲಾ ಜಿಲ್ಲೆಗಳ ಜನರು ಒಗ್ಗೂಡಿ ಹೋರಾಟ ರೂಪಿಸುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಅಗತ್ಯವಿದೆ ಎಂದು ಮುರುಳೀಧರ ಹಾಲಪ್ಪ ತಿಳಿಸಿದರು.
ಕೇಂದ್ರ ಸರ್ಕಾರ ಎತ್ತಿರುವ ಕೆಲವು ಪ್ರಶ್ನೆಗಳಿಗೆ ಈಗಾಗಲೇ ವಿಶ್ವೇಶ್ವರಯ್ಯ ಜಲ ನಿಗಮವು ಸಮರ್ಪಕ ಉತ್ತರವನ್ನು ನೀಡಿದ್ದರೂ ಸಹ,ಯೋಜನೆಗೆ ಅನುಮತಿ ನೀಡದೆ ಅನಗತ್ಯ ವಿಳಂಬ ಮಾಡುತ್ತಿದೆ.ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರು ರಾಜ್ಯದ ಎಲ್ಲಾ ಸಂಸದರ ಸಭೆ ಕರೆದಾಗ, ಇಲ್ಲಸಲ್ಲದ ಕಾರಣ ಹೇಳಿ ಯಾವೊಬ್ಬ ಬಿಜೆಪಿ ಸಂಸದರು ಸಭೆಗೆ ಹಾಜರಾಗಲಿಲ್ಲ. ಇದು ರಾಜ್ಯದ ಬಗ್ಗೆ ಬಿಜೆಪಿ ಪಕ್ಷಕ್ಕೆ ಇರುವ ಕಾಳಜಿಯನ್ನು ತೋರಿಸುತ್ತದೆ.ಈಗಲಾದರೂ ಬಿಜೆಪಿ ಸಂಸದರು, ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು,ಎತ್ತಿನಹೊಳೆ ಯೋಜನೆಗೆ ಇರುವ ಅಡ್ಡಿ, ಆತಂಕಗಳನ್ನು ನಿವಾರಿಸಬೇಕು. ಈ ಯೋಜನೆ ಪೂರ್ಣಗೊಳ್ಳಲು ಸಹಕಾರ ನೀಡಬೇಕು.ಇಲ್ಲದಿದ್ದಲ್ಲಿ ಯೋಜನಾ ವ್ಯಾಪ್ತಿಗೆ ಒಳಪಡುವ ಎಲ್ಲಾ ಜಿಲ್ಲೆಗಳ ಜನರು ಅನಿವಾರ್ಯವಾಗಿ ಬೀದಿಗಿಳಿದು, ಕೇಂದ್ರದ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್​ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಗೀತಾ ರಾಜಣ್ಣ ಮಾತನಾಡಿ,ಬಯಲು ಸೀಮೆಗೆ ಸೇರಿದ ತುಮಕೂರು,ಹಾಸನ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ ಜಿಲ್ಲೆಗಳಿಗೆ ಎತ್ತಿನ ಹೊಳೆ ಕುಡಿಯುವ ನೀರಿನ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.ಹಾಗಾಗಿ ಕೇಂದ್ರ ಸರ್ಕಾರ ಈ ಯೋಜನೆಗೆ ಕಲ್ಲು ಹಾಕುವ ಕೆಲಸ ಮಾಡಬಾರದು. ಪರಿಸರ ಇಲಾಖೆಯಿಂದ ಎನ್​ಒಸಿ ಪಡೆದಿಲ್ಲ. ಹೆಚ್ಚು ಭೂಮಿ ಬಳಕೆ ಎಂದು ತಕರಾರು ತೆಗೆಯುವ ಕೇಂದ್ರ ಸರ್ಕಾರ 12 ವರ್ಷದಿಂದ ಏನು ಮಾಡುತ್ತಿತ್ತು. ಈ ರೀತಿಯ ಮಲತಾಯಿ ಧೋರಣೆ ಸರಿಯಲ್ಲ. ಕೂಡಲೇ ಕೇಂದ್ರ ಸರ್ಕಾರ ಎತ್ತಿನಹೊಳೆ ಯೋಜನೆಗೆ ಅನುಮೋಧನೆ ನೀಡುವ ಜತೆಗೆ, ಅನುಧಾನವನ್ನು ನೀಡುವ ಮೂಲಕ ಸಹಕಾರ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿರಿಯರಾದ ರೇವಣಸಿದ್ದಯ್ಯ, ಅಶೋಕ್​ ರಾಜವರ್ಧನ್​, ರೈತ ಮುಖಂಡರಾದ ರಾಚಪ್ಪ, ಕೆ.ಆರ್​.ವೆಂಕಟೇಶ್​, ಜಯಮ್ಮಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net