3.36 ಲಕ್ಷ ಇ ಪೌತಿ ಖಾತೆ ಖಾತೆಗಳ ಸೃಜನೆ ಗುರಿ

 ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿಯ ಬುಗುಡನಹಳ್ಳಿಗೆ ಭೇಟಿ ನೀಡಿ, ಇ-ಪೌತಿ ಅರ್ಜಿಗಳ ಸ್ವೀಕೃತಿ ಹಾಗೂ ವಿಲೇವಾರಿ ಪ್ರಕ್ರಿಯೆ ಪ್ರಗತಿಯನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಪರಿಶೀಲಿಸಿದರು. ನಾಹಿದಾ ಜಮ್​ ಜಮ್​, ರಾಜೇಶ್ವರಿ ಮತ್ತಿತರರು ಇದ್ದರು.
ತುಮಕೂರು ತಾಲೂಕಿನ ಬೆಳ್ಳಾವಿ ಹೋಬಳಿಯ ಬುಗುಡನಹಳ್ಳಿಗೆ ಭೇಟಿ ನೀಡಿ, ಇ-ಪೌತಿ ಅರ್ಜಿಗಳ ಸ್ವೀಕೃತಿ ಹಾಗೂ ವಿಲೇವಾರಿ ಪ್ರಕ್ರಿಯೆ ಪ್ರಗತಿಯನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಪರಿಶೀಲಿಸಿದರು. ನಾಹಿದಾ ಜಮ್​ ಜಮ್​, ರಾಜೇಶ್ವರಿ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇ -ಪೌತಿ ಖಾತಾ ಆಂದೋಲನ-2
  • ಜನರ ಸಹಕಾರ ಅಗತ್ಯ
  • ಜಿಲ್ಲಾಧಿಕಾರಿ ಶುಭಕಲ್ಯಾಣ್​
ತುಮಕೂರು: ಇ -ಪೌತಿ ಖಾತಾ ಆಂದೋಲನ-2 ಇಂದಿನಿಂದ ರಾಜ್ಯಾದ್ಯಂತ ಆರಂಭಗೊಂಡಿದ್ದು, ಗ್ರಾಮೀಣ ಪ್ರದೇಶಗಳ ಜನರಿಗೆ ಭೂ ದಾಖಲೆಗಳಿಗೆ ಸಂಬಂಧಿಸಿದ ಸೇವೆಗಳನ್ನು ಸುಲಭವಾಗಿ ಹಾಗೂ ತ್ವರಿತವಾಗಿ ಒದಗಿಸುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆ ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವ ಮೂಲಕ ಆಂದೋಲನ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಕರೆನೀಡಿದರು.
ತಾಲೂಕಿನ ಬೆಳ್ಳಾವಿ ಹೋಬಳಿಯ ಬುಗುಡನಹಳ್ಳಿ ಹಾಗೂ ಕೋರ ಹೋಬಳಿಯ ಸಿ.ಟಿ.ಕೆರೆ ಗ್ರಾಮಗಳಿಗೆ ಭೇಟಿ ನೀಡಿ, ಇ-ಪೌತಿ ಅರ್ಜಿಗಳ ಸ್ವೀಕೃತಿ ಹಾಗೂ ವಿಲೇವಾರಿ ಪ್ರಕ್ರಿಯೆಯ ಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 3,36,000 ಇ-ಪೌತಿ ಖಾತೆಗಳನ್ನು ಸೃಜಿಸಬೇಕಾಗಿದ್ದು, ಸಾರ್ವಜನಿಕರು ಸೂಕ್ತ ದಾಖಲಾತಿಗಳನ್ನು ಪಡೆದು ತ್ವರಿತ ಹಾಗೂ ಪಾರದರ್ಶಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಜನಸಾಮಾನ್ಯರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮವಹಿಸುವಂತೆ ತಿಳಿಸಿದರು.
ಇಂದಿನಿಂದ ಇ-ಪೌತಿ ಖಾತಾ ಆಂದೋಲನ-2 ಪ್ರಾರಂಭಿಸಲಾಗಿದ್ದು, ಇದರ ಭಾಗವಾಗಿ ಗ್ರಾಮಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸ್ಥಳಿಯ ಕಂದಾಯ ಮತ್ತು ಮೋಜಿಣಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರನ್ನು ಭೇಟಿ ಮಾಡಿ, ಇ-ಪೌತಿ ಅರ್ಜಿಗಳ ಸ್ವೀಕೃತಿ, ದಾಖಲೆಗಳ ಪರಿಶೀಲನೆ, ಅರ್ಜಿಗಳ ವಿಲೇವಾರಿ ಹಾಗೂ ಖಾತಾ ಬದಲಾವಣೆ ಪ್ರಕ್ರಿಯೆಗಳ ಕುರಿತು ಸಮಗ್ರವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್​. ತಿಪ್ಪೇಸ್ವಾಮಿ, ತುಮಕೂರು ಉಪವಿಭಾಗಾಧಿಕಾರಿ ನಾಹೀದಾ ಜಮ್​ ಜಮ್​, ತಹಸೀಲ್ದಾರ್​ ರಾಜೇಶ್ವರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
13435 ಅರ್ಜಿ ಬಾಕಿ
ಕಂದಾಯ ಇಲಾಖೆಯ ವಿವಿಧ ಸೇವೆಗಳ ಪ್ರಗತಿ ಪರಿಶೀಲಿಸಿದ ಅವರು, ಕಂದಾಯ ಅದಾಲತ್​ಗಳನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ತಹಸೀಲ್ದಾರ್​ಗಳಿಗೆ ಈಗಾಗಲೇ ಅಧಿಕಾರ ಪ್ರತ್ಯಾಯೋಜನೆ ಮಾಡಲಾಗಿದೆ. ಸರ್ಕಾರವು ಜಾರಿಗೆ ತಂದಿರುವ ರೆವಿನ್ಯೂ ಮಾಡ್ಯೂಲ್​ ತಂತ್ರಾಂಶದ ಮೂಲಕ ಪಹಣಿ ತಿದ್ದುಪಡಿ ಕಾರ್ಯಗಳನ್ನು ವೇಗಗೊಳಿಸುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿಸೆಂಬರ್​-2026ರ ಅಂತ್ಯದೊಳಗೆ ಎಲ್ಲಾ ಬಾಕಿ ಇ- ಪೌತಿ ಅರ್ಜಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದು ತುಮಕೂರು ಜಿಲ್ಲೆಯಲ್ಲಿ ವಿಷಯ ನಿರ್ವಾಹಕರ ಹಂತದಲ್ಲಿ ಒಟ್ಟು 13,435 ಅರ್ಜಿಗಳು ಬಾಕಿಯಿದ್ದು, ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಕರಣಗಳು ಬಾಕಿ ಇರುವುದರಿಂದ, ಈ ಅರ್ಜಿಗಳನ್ನು ತಕ್ಷಣ ಗ್ರಾಮ ಆಡಳಿತಾಧಿಕಾರಿಗಳ ಲಾಗಿನ್​ಗೆ ಕಳಿಸಿ, ಆರ್​ಆರ್​ಟಿ ಶಿರಸ್ತೇದಾರರು ಹಾಗೂ ಎಡಿಎಲ್​ಆರ್​ ಅಧಿಕಾರಿಗಳ ಸಮನ್ವಯದೊಂದಿಗೆ ಆದ್ಯತೆ ಮೇರೆಗೆ ವಿಲೇವಾರಿ ಮಾಡುವಂತೆ ಆದೇಶಿಸಿದರು.
ಇ-ಪೌತಿ ಅರ್ಜಿಗಳ ವಿಲೇವಾರಿ ಪ್ರಗತಿ ಪರಿಶೀಲನೆ ವೇಳೆ, ಜಿಲ್ಲೆಯಲ್ಲಿ ಒಟ್ಟು 3,36,847 ಅರ್ಜಿಗಳು ಬಾಕಿಯಿದ್ದು, ಬಾಕಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಪ್ರತಿಯೊಬ್ಬ ಗ್ರಾಮ ಆಡಳಿತಾಧಿಕಾರಿಯು ಪ್ರತಿದಿನ ಕನಿಷ್ಠ ಎರಡು ಪೌತಿ ಖಾತೆಗಳನ್ನು ಪೂರ್ಣಗೊಳಿಸಬೇಕು. ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದರು.
ಎಲ್ಲಾ ತಾಲೂಕು ಹಂತದಲ್ಲಿ ಕುಡಿಯುವ ನೀರಿನ ಪರೀಕ್ಷೆ ಕಡ್ಡಾಯವಾಗಿ ನಡೆಸಬೇಕು. ಪ್ರಸ್ತುತ ಮುಂಗಾರು ಮಳೆ ಹಿನ್ನೆಲೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳು ಇರುತ್ತವೆ. ಈ ಹಿನ್ನೆಲೆಯಲ್ಲಿ ತಾಪಂ ಮುಖ್ಯಾಧಿಕಾರಿಗಳು ರ್ನಿದಿಷ್ಟಪಡಿಸಿದ ಪ್ರದೇಶಗಳಲ್ಲಿ ನೀರಿನ ಪರೀಕ್ಷೆ ಮುಂದುವರೆಸಬೇಕು. ಮಳೆಯಿಂದ ಉಂಟಾಗಿರುವ ಬೆಳೆ ಹಾನಿ ಸಂಬಂಧಿಸಿದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೇ ಮೌಲ್ಯೀಕರಣ ಮಾಡಬೇಕು ಹಾಗೂ ಪರಿಹಾರ ಕೊಡಿಸಲು ನೆರವಾಗಬೇಕು.
ಶುಭಕಲ್ಯಾಣ್​
ಜಿಲ್ಲಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net