ವಿಎಒ, ಎಸ್​ಡಿಎ ಪದೋನ್ನತಿಗೆ ಜಿಲ್ಲಾಡಳಿತ ಮೀನಾಮೇಷ

ತುಮಕೂರು ಜಿಲ್ಲಾಧಿಕಾರಿ ಕಚೇರಿ
ತುಮಕೂರು ಜಿಲ್ಲಾಧಿಕಾರಿ ಕಚೇರಿ
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿಎಂ ನೀಡಿದ್ದ ಭರವಸೆ ತವರು ಜಿಲ್ಲೆಯಲ್ಲಿ ಹುಸಿ
  • ಪ್ರತಿಭಟನೆ ನಡೆಸಿದ್ದವರ ಮೇಲೆ ಡಿಸಿ ಸಿಟ್ಟು?
  • ಎಸ್ ಡಿಎ, ಆರ್​ಐ 75 ಹುದ್ದೆಗಳು ಖಾಲಿ
ತುಮಕೂರು: ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು, ದ್ವೀತಿಯ ದರ್ಜೆ ಸಹಾಯಕರಿಗೆ ಪ್ರಥಮ ದರ್ಜೆ ಸಹಾಯಕರಾಗಿ ಹಾಗೂ ರಾಜಸ್ವ ನಿರೀಕ್ಷಕರಾಗಿ ಬಡ್ತಿ ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದ್ದರೂ ತುಮಕೂರು ಜಿಲ್ಲೆಯಲ್ಲಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ.
ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಗ್ರಾಮ ಆಡಳಿತ ಅಧಿಕಾರಿಗಳು ಬಡ್ತಿಗಾಗಿ ಚಾತಕ ಪಯಂತೆ ಕಾಯುತ್ತಿದ್ದು ಉದ್ದೇಶಪೂರ್ವಕವಾಗಿ ಬಡ್ತಿ ಪ್ರಕ್ರಿಯೆಯನ್ನು ಜಿಲ್ಲಾಡಳಿತ ತಡಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿ ಶುಭಕಲ್ಯಾಣ್​ ವಿರುದ್ಧ ಇತ್ತೀಚೆಗೆ ವಿಎಒಗಳು "ತೊಲಗಲಿ ತೊಲಗಲಿ' ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದು ಬಡ್ತಿ ಪ್ರಕ್ರಿಯೆ ತಡವಾಗಲು ನೆಪವಾಗಿದೆ ಎಂಬ ಆರೋಪ ಕೇಳಿಬಂದಿದೆ.
ತುಮಕೂರು ಜಿಲ್ಲೆಯ ಕಂದಾಯ ಘಟಕದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ದ್ವೀತಿಯ ದರ್ಜೆ ಸಹಾಯಕ ವೃಂದದ ಅಂತಿಮ ಸಂಯುಕ್ತ ಜೇಷ್ಟತಾ ಪಟ್ಟಿಯಲ್ಲಿ 700ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದು 75 ಖಾಲಿ ಹುದ್ದೆಗಳಿಗೆ ಬಡ್ತಿ ನೀಡಲು ಅವಕಾಶವಿದೆ. ಜಿಲ್ಲೆಯಲ್ಲಿ ಬಡ್ತಿ ತಡ ಮಾಡುವುದರಿಂದ ಆರ್​ಐ ಮೇಲ್ಪಟ್ಟ ಮುಂಬಡ್ತಿಯಲ್ಲಿ ವಿಭಾಗ ಮಟ್ಟದ ಸೇವಾ ಹಿರಿತನ ಕಳೆದುಕೊಂಡು ಭವಿಷ್ಯದ ಮುಂಬಡ್ತಿಯಲ್ಲಿ ಜಿಲ್ಲೆಯ ಅಧಿಕಾರಿಗಳು ಅನ್ಯಾಯ ಅನುಭವಿಸಲಿದ್ದಾರೆ.
ದಾವಣಗೆರೆ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿಎಒಗಳಿಗೆ ಬಡ್ತಿ ನೀಡಲಾಗಿದ್ದು ಕಂದಾಯ ಖಾತೆಯನ್ನು ಹೊಂದಿರುವ ಡಿಸಿಎಂ ಡಾ.ಜಿ.ಪರಮೇಶ್ವರ ಸ್ವಂತ ಜಿಲ್ಲೆ ತುಮಕೂರಿನಲ್ಲಿ ಬಡ್ತಿ ತಡಮಾಡಿರುವುದು ಆಚ್ಚರಿಗೆ ಕಾರಣವಾಗಿದೆ. ರಾಜ್ಯ ಸರ್ಕಾರದ ಕಂದಾಯ ಸೇವೆಗಳ ವೃಂದ ಮತ್ತು ನೇಮಕಾತಿ ನಿಯಮ&2026ರಂತೆ ಜಿಲ್ಲೆಯಲ್ಲಿ ಮುಂಬಡ್ತಿಗೆ ಮೀನಾಮೇಷ ಎಣಿಸುತ್ತಿರುವುದು ಕಂದಾಯ ಇಲಾಖೆಯಲ್ಲಿ ಮತ್ತೊಂದು ಸುತ್ತಿನ ಜಿದ್ದಾಜಿದ್ದಿಗೆ ವೇದಿಕೆಯಾಗುತ್ತಿದೆ.
ಇತ್ತೀಚೆಗೆ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಎಒಗಳು ನಡೆಸಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಡಿಸಿಎಂ ಡಾ.ಜಿ.ಪರಮೇಶ್ವರ ಕೂಡ ಶ್ರೀದಲ್ಲಿಯೇ ಬಡ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿ ತಿಂಗಳಾದರೂ ಜಿಲ್ಲಾಡಳಿತ ಸಿಬ್ಬಂದಿ ಮುಂಬಡ್ತಿಗೆ ಹಿಂದೇಟು ಹಾಕಿರುವುದು ವಿಎಒಗಳ ಆಕ್ರೋಶಕ್ಕೆ ಕಾರಣವಾಗಿದೆ.
ಆಡಳಿತದ ಹಿತದೃಷ್ಟಿಯಿಂದ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಪ್ರಕಾರ ಗ್ರಾಮ ಆಡಳಿತ ಅಧಿಕಾರಿ ಹಾಗೂ ದ್ವೀತಿಯ ದರ್ಜೆ ಸಹಾಯಕ ವೃಂದದ ಸಿಬ್ಬಂದಿಗಳಿಗೆ ಪ್ರಥಮ ದರ್ಜೆ ಸಹಾಯಕ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಹುದ್ದೆಗಳಿಗೆ ಕೆಸಿಎಸ್​ಆರ್​ ನಿಯಮ 42ರಡಿ ಪದೋನ್ನತಿ ನೀಡಿ
ಸ್ಥಳನಿಯುಕ್ತಿಗೊಳಿಸಬೇಕು ಎಂಬ ಬೇಡಿಕೆ ಈಡೇರದಿದ್ದರೆ ಆ.6ರ ನಂತರ ಮತ್ತೊಮ್ಮೆ ಪ್ರತಿಭಟನೆಗೆ ವಿಎಒಗಳು ಸಿದ್ಧತೆ ನಡೆಸಿದ್ದಾರೆ ಎಂಬ ಗುಸುಗುಸು ಡಿಸಿ ಕಚೇರಿ ಪಡಸಾಲೆಯಲ್ಲಿಯೇ ಕೇಳಿಬರುತ್ತಿದೆ.
ಪ್ರತಿಭಟನೆ ನಡೆಸಿದ್ದವರ ವಿರುದ್ಧ ಡಿಸಿ ಸಿಟ್ಟು?
ಜಿಲ್ಲೆಯಲ್ಲಿ ಕಂದಾಯ ವಿಎಒ, ಎಸ್​ಡಿಒ ಮುಂಬಡ್ತಿ ತಡಮಾಡುತ್ತಿರುವ ವಿಷಯ ತರಹೇವಾರಿ ಚರ್ಚೆಗೆ ಕಾರಣವಾಗುತ್ತಿದೆ. ಜಿಲ್ಲೆಯ ಇತಿಹಾಸದಲ್ಲಿಯೇ ಎಐಎಸ್​ ಅಧಿಕಾರಿಯೊಬ್ಬರ ವಿರುದ್ಧ ಇಲಾಖೆಯ ಕೆಳ ಹಂತದ ಸಿಬ್ಬಂದಿ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದ್ದನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ ಎಂಬ ಅನುಮಾನ ಮೂಡಲಾರಂಭಿಸಿದೆ.
ಸರ್ಕಾರದಿಂದ ಜಿಲ್ಲೆಯಲ್ಲಿ ನಡೆದಿರುವ ಇವೆಂಟ್​ಗಳಿಗೆ ಹಣ ನೀಡಿರುವ ಬಗ್ಗೆಯೂ ವಿಎಒಗಳು ಪ್ರತಿಭಟನೆಯಲ್ಲಿ ಪ್ರಸ್ತಾಪಿಸಿದ್ದು ಜಿಲ್ಲಾಡಳಿತದ ಕೆಂಗಣ್ಣಿಗೆ ಗುರಿಯಾಗಿದ್ದು ಚುನಾವಣಾ ಆಯೋಗದ ಎಸ್​ಐಆರ್​ ನೆಪ ಮಾಡಿಕೊಂಡು ಬಡ್ತಿಯನ್ನು ಉದ್ದೇಶಪೂರ್ವಕವಾಗಿಯೇ ತಡಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ವಿಎಒ ಭುವನಾ ಅಪಘಾತದ ನಂತರ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯಿಂದ ಕಂದಾಯ ಇಲಾಖೆಯಲ್ಲಿ ಮೇಲಾಧಿಕಾರಿಗಳು ಹಾಗೂ ಕೆಳಹಂತದ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಉಂಟಾಗಿದ್ದು ಎಸ್​ಐಆರ್​ ಪ್ರಕ್ರಿಯೆಗೆ ಮಾತ್ರ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯ ಇನ್ಯಾವುದೇ ಕೆಲಸಗಳು ಸಕಾಲದಲ್ಲಿ ಪೂರ್ಣವಾಗದೆ ನೆನೆಗುದಿಗೆ ಬಿದ್ದಿವೆ.
ತುಮಕೂರು ಜಿಲ್ಲೆಯಲ್ಲಿ ಕಂದಾಯ ಇಲಾಖೆಯ 75 ಹುದ್ದೆಗಳಿಗೆ ಪದೋನ್ನತಿ ನೀಡಲು ಅವಕಾಶವಿದ್ದು ಶ್ರೀದಲ್ಲಿಯೇ ಪ್ರಕ್ರಿಯೆ ನಡೆಯಲಿದೆ ಎಂಬ ವಿಶ್ವಾಸವಿದೆ. ಎಸ್​ಐಆರ್​ ಪ್ರಕ್ರಿಯೆಯಲ್ಲಿ ಎಲ್ಲಾ ಸಿಬ್ಬಂದಿ ತೊಡಗಿರುವ ಕಾರಣದಿಂದ ಪದೋನ್ನತಿ ಪ್ರಕ್ರಿಯೆ ತಡವಾಗಿದ್ದು ಆ.6ರ ನಂತರ ಚಾಲನೆ ಸಿಗಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ನಂತರವೂ ತಡವಾದರೆ ಎಲ್ಲರೂ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ.
ದೇವರಾಜು
ಜಿಲ್ಲಾಧ್ಯಕ್ಷ, ಗ್ರಾಮ ಆಡಳಿತ ಅಧಿಕಾರಿಗಳ ಸಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net