ತುಮಕೂರು ವಿವಿ ಸಿಂಡಿಕೇಟ್​ ಸಭೆಯಲ್ಲಿ ಜಟಾಪಟಿ?

ತುಮಕೂರು ವಿಶ್ವವಿದ್ಯಾಲಯ
ತುಮಕೂರು ವಿಶ್ವವಿದ್ಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • 51 ಬೋಧಕರ ಸಿಎಎಸ್​ ಬಡ್ತಿ ಅನುಮೋದನೆ.
  • ಹಿಂಪಡೆದ ಸಿಬ್ಬಂದಿ ಪದೋನ್ನತಿ ಆದೇಶ ಸ್ಥೀರಿಕರಣ
  • ಕುಲಪತಿ ವಿರುದ್ಧ ಸಿಂಡಿಕೇಟ್​ ಸದಸ್ಯರ ಆರೋಪ
ತುಮಕೂರು: ತುಮಕೂರು ವಿವಿ ಸಿಂಡಿಕೇಟ್​ ಸಭೆಯಲ್ಲಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹಾಗೂ ಸಿಂಡಿಕೇಟ್​ ಸದಸ್ಯರ ನಡುವೆ ಜಟಾಪತಿಯೇ ನಡೆದಿದೆ. ಗುರುವಾರ ನಡೆದ ಸಿಂಡಿಕೇಟ್​ ಸಭೆಯ ನಡುವೆಯೇ ಸಿಎಎಸ್​ ಬಡ್ತಿ ಅನುಮೋದನೆಗೆ ಅನುಮತಿ ನೀಡಲೇಬೇಕು ಎಂದು ಪಟ್ಟು ಹಾಕಿದ 51 ಬೋಧಕರು ಸಾಮೂಹಿಕ ರಜೆ ಪಡೆದು ತರಗತಿಗೆ ಹಾಜರಾಗದೆ ಪರೋಕ್ಷ ಪ್ರತಿಭಟನೆ ದಾಖಲಿಸಿದ್ದಾರೆ.
ಬಡ್ತಿ ಪಟ್ಟಿಯಲ್ಲಿರುವ ಕೆಲವು ಪ್ರಾಧ್ಯಾಪಕರು ರಜೆ ಹಾಕಿದ್ದರೆ, ಮತ್ತೆ ಕೆಲವರು ರಜೆ ಕೂಡ ಹಾಕದೇ ದಿನಪೂರ್ತಿ ಡಾ.ಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ಸಮಾವೇಶಗೊಂಡು ಸಿಂಡಿಕೇಟ್​ ಸಭೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಕುಲಪತಿ ಕಚೇರಿಯಲ್ಲಿ ಬೆಳಗ್ಗೆ 11ಕ್ಕೆ ಆರಂಭವಾಗಿದ್ದ ಸಿಂಡಿಕೇಟ್​ ಸಭೆ ಸಂಜೆಯವರೆಗೂ ಮುಂದುವರಿದಿದ್ದು ಬಡ್ತಿಯ ಭರವಸೆ ಸಿಕ್ಕಿದೆ ಎಂದು ಕೆಲವರು ತರಗತಿಗೆ ತೆರಳಿ ಹಾಜರಾತಿ ದಾಖಲಿಸಿದರು.
ವಿವಿಯಲ್ಲಿ ವಿದ್ಯಾರ್ಥಿ, ಬೋಧಕ ಸಿಬ್ಬಂದಿಗಳ ಹಿತರಕ್ಷಣೆಗೆ ಸಂಬಂಧಿಸಿದ ಯಾವುದೇ ವಿಷಯಗಳು ಚರ್ಚೆಯಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿರುವ ಪ್ರಾಧ್ಯಾಪಕರು ತರಗತಿ ಭಹಿಷ್ಕರಿಸುವುದಾಗಿ ನೀಡಿದ್ದ ಎಚ್ಚರಿಕೆಯನ್ನು ವಾಪಸ್​ ಪಡೆದು ಸಂಧಾನ ಸೂತ್ರದ ಮೊರೆ ಹೋಗಿ ಸಿಂಡಿಕೇಟ್​
ಸದಸ್ಯರೊಂದಿಗೆ ರಾಜೀ ಮಾತುಕತೆ ನಡೆಸಿ ಶುಭ ಸುದ್ದಿಗಾಗಿ ದಿನವಿಡೀ ಕಾದು ಕುಳಿತಿದ್ದರು.
ತುಮಕೂರು ವಿವಿ ಆಂತರಿಕ ನಿಧಿ ಸಂಪೂರ್ಣ ಖಾಲಿ ಮಾಡಲಾಗಿದೆ ಎನ್ನಲಾಗಿರುವ ನಡುವೆಯೂ ಜ್ಞಾನಸಿರಿ ಕ್ಯಾಂಪಸ್​ನಲ್ಲಿ ಶೈಕ್ಷಣಿಕ ಭವನ&2 ನಿರ್ಮಿಸಲು ಸಿಂಡಿಕೇಟ್​ ಸಭೆಯಲ್ಲಿ ಚರ್ಚಿಸಲಾಗಿದೆ ಜತೆಗೆ ತುಮಕೂರು ನಗರದಲ್ಲಿರುವ ಕ್ಯಾಂಪಸ್​ ರಸ್ತೆಗಳನ್ನು ಸರಿಪಡಿಸಲು ಹಾಗೂ ಕಾಂಪೌಂಡ್​ಗೆ ಬಣ್ಣ ಬಳಿಯಲು ಲಾಂತರ ರೂ. ಖರ್ಚು ಮಾಡಲು ಮುಂದಾಗಿರುವುದು ವಿವಿ ಆರ್ಥಿಕ ಸಂಪನ್ಮೂಲದ ಬಗ್ಗೆ ಕಳವಳ ಮೂಡಿಸಿದೆ.
ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಗೆ ವಿಭಾಗೀಯ ಪರಿಷತ್​ ಹಾಗೂ ವಿಷಯ ಅಧ್ಯಯನ ಮಂಡಳಿ ರಚಿಸಿ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. 19ನೇ ಟಿಕೋತ್ಸವದ ಪೂರ್ವಸಿದ್ಧತೆ ಮಾಡಿಕೊಂಡಿರುವ ವಿವಿ ಅದಕ್ಕೆ ಅಗತ್ಯವಿರುವ ಖರ್ಚುಗಳಿಗೆ ಸಿಂಡಿಕೇಟ್​ ಒಪ್ಪಿಗೆ ಪಡೆದಿದೆ. ತುಮಕೂರು ವಿವಿಯಿಂದ ಮೂವರು ಸಿಬ್ಬಂದಿ ಬೆಂಗಳೂರು ನಗರ ಡಾ.ಮನಮೋಹನ್​ಸಿಂಗ್​ ವಿವಿಗೆ ಅಂತರ್​ ವಿವಿ ವರ್ಗಾವಣೆಯಡಿಯಲ್ಲಿ ಎನ್​ಒಸಿ ಕೇಳಿ ಅರ್ಜಿ ಸಲ್ಲಿಸಿರುವುದು ಸಿಂಡಿಕೇಟ್​ ಸಭೆಯಲ್ಲಿ ಚರ್ಚೆ ಬಂದಿದೆ.
ಸಿಬ್ಬಂದಿ ಪದೋನ್ನತಿ ಹಿಂಪಡೆದ ವಿವಿ:
ತುಮಕೂರು ವಿವಿ ನೇರ ನೇಮಕಾತಿ ನಿಯಮಗಳನ್ನು ಉಲ್ಲಂಘಿಸಿ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ನೀಡಲಾಗಿದ್ದ ಪದೋನ್ನತಿ ಆದೇಶವನ್ನು ಹಿಂಪಡೆದಿರುವ ವಿವಿ ಆದೇಶವನ್ನು ಸಿಂಡಿಕೇಟ್​ ಸಭೆಯ ಸ್ಥೀರಿಕರಣಕ್ಕೆ ತಂದಿತ್ತು. ನೇಮಕಾತಿ ಆದೇಶವನ್ನು ರದ್ದುಪಡಿಸುವಂತೆ ಸರ್ಕಾರದ ನಿರ್ದೇಶನ ಪಾಲಿಸದೇ ಕರ್ತವ್ಯಲೋಪ ಎಸಗಿದ್ದ ಕುಲಪತಿ ಹಾಗೂ ಕುಲಸಚಿವೆ ವಿರುದ್ಧ ಏಕಸದಸ್ಯ ಶೋಧನಾ ಸಮಿತಿಯಿಂದ ವಿಚಾರಣೆಗೆ ರಾಜ್ಯಪಾಲರು ಆದೇಶಿಸಿದ ನಂತರ ಪದೋನ್ನತಿ ಆದೇಶವನ್ನು ವಾಪಸ್​ ಪಡೆಯಲಾಗಿತ್ತು.
ವಿಚಾರಣೆ ಎದುರಿಸುತ್ತಿರುವ ಕುಲಪತಿ ಹಾಗೂ ಕುಲಸಚಿವೆ ಬೋಧಕರ ಪದೋನ್ನತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಾರದು ಎಂದು ಸಿಂಡಿಕೇಟ್​ ಸದಸ್ಯರು ಪಟ್ಟುಹಿಡಿದಿದ್ದು ಸಂರ್ಷ ಹುಟ್ಟುಹಾಕಿತ್ತು. ಕೆಲವು ದಿನಗಳಿಂದ ಎಲ್ಲಾ ಸಿಂಡಿಕೇಟ್​ ಸದಸ್ಯರೊಂದಿಗೆ ರಹಸ್ಯ ಸಭೆ ನಡೆಸಿದ್ದ ಸಹಾಯಕ ಪ್ರಾಧ್ಯಾಪಕರ ಒಂದು ತಂಡ ರಾಜೀ, ಸಂಧಾನದ ಮೂಲಕ ಬಡ್ತಿಗೆ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದ್ದು ಸಭೆಯ ನಡಾವಳಿ ಪ್ರಕಟವಾದ ನಂತರವಷ್ಟೇ ಇದರ ಬಗ್ಗೆ ಸ್ಪಷ್ಟನೆ ಸಿಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net