ಜಿಲ್ಲಾಸ್ಪತ್ರೆ ಶಿಶು ಆರೈಕೆ ಘಟಕದಲ್ಲಿ ಅವ್ಯವಸ್ಥೆ

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ವಿಭಾಗದ ಶಿಶು ಆರೈಕೆ ಕೇಂದ್ರದಲ್ಲಿ ಅವ್ಯವಸ್ಥೆ ಕಂಡ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿತು. ಶಶಿಧರ್​ ಕೋಸಂಬೆ, ಡಾ.ಕೆ.ಟಿ.ತಿಪ್ಪೇಸ್ವಾಮಿ, ಆರ್​.ಜಿ.ಪವಿತ್ರ ಮತ್ತಿತರರು ಇದ್ದರು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ವಿಭಾಗದ ಶಿಶು ಆರೈಕೆ ಕೇಂದ್ರದಲ್ಲಿ ಅವ್ಯವಸ್ಥೆ ಕಂಡ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿತು. ಶಶಿಧರ್​ ಕೋಸಂಬೆ, ಡಾ.ಕೆ.ಟಿ.ತಿಪ್ಪೇಸ್ವಾಮಿ, ಆರ್​.ಜಿ.ಪವಿತ್ರ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ರಕ್ಷಣಾ ಆಯೋಗ ತೀವ್ರ ಅಸಮಾಧಾನ
  • ಜಿಲ್ಲೆಯೆಲ್ಲೆಡೆ ಶುಕ್ರವಾರ ಮಿಂಚಿನ ಸಂಚಾರ
  • 90 ದಿನವಾದರೂ ನಡೆಯದ ಸಮಿತಿ ಸಭೆ
ತುಮಕೂರು: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶುಕ್ರವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಮಿಂಚಿನ ಸಂಚಾರ ನಡೆಸಿತು, ತುಮಕೂರು ಜಿಲ್ಲಾಸ್ಪತ್ರೆ, ಹಾಸ್ಟೆಲ್​ಗಳಿಗೆ ಭೇಟಿ ನೀಡಿ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಎಲ್ಲೆಡೆಯೂ ಅವ್ಯವಸ್ಥೆಯನ್ನು ಕಂಡು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ನವಜಾತ ಶಿಶುಗಳ ತೀವ್ರ ಆರೈಕೆ ಘಟಕದಲ್ಲಿ ಹವಾ ನಿಯಂತ್ರಿತ ವ್ಯವಸ್ಥೆಯಿಲ್ಲದೆ ಮಕ್ಕಳ ಆರೈಕೆ ಮತ್ತು ರೋಗಿಗಳಿಗೆ ಪೌಷ್ಠಿಕ ಆಹಾರ ನೀಡುವಲ್ಲಿ ವಿಫಲತೆ ಸೇರಿದಂತೆ ಜಿಲ್ಲಾಸ್ಪತ್ರೆಯಲ್ಲಿ ತೀವ್ರ ಅವ್ಯವಸ್ಥೆ ಇರುವ ಬಗ್ಗೆ ಆಯೋಗದ ಅಧ್ಯಕ್ಷ ಶಶಿಧರ್​ ಕೋಸಂಬೆ ಹಾಗೂ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ವೈದ್ಯರಿಗೆ ಬೆವರಿಳಿಸಿದರು.
ಮಕ್ಕಳ ವಿಭಾಗದ ಶಿಶು ಆರೈಕೆ ಘಟಕ ಮತ್ತು ಇತ್ಯಾದಿ ಕಡೆಗಳಲ್ಲಿ ಪರಿಶೀಲಿಸಿ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಸಂಬಂಧಿಸಿದ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಹವಾ ನಿಯಂತ್ರಿತ ವ್ಯವಸ್ಥೆಯೇ ಕೆಟ್ಟುಹೋಗಿದ್ದು, ಒಂದೇ ವಾರ್ಡ್​ನಲ್ಲಿ ಇಬ್ಬರು ಮಕ್ಕಳಿಗೆ ಚಿಕಿತ್ಸೆ ನೀಡುವುದರಿಂದ ಒಂದು ಮಗುವಿಗೆ ಇರುವ ರೋಗ ಮತ್ತೊಂದು ಮಗುವಿಗೆ ಹರಡುವ ಸಾಧ್ಯತೆಯಿರುತ್ತದೆ. ಆದರೆ, ಈ ಬಗ್ಗೆ ಆಸ್ಪತ್ರೆ ವೈದ್ಯರು ನಿಗಾವಹಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಶಿಶುಗಳ ಕಳವಿನ ಪ್ರಕರಣಗಳು ರಾಜ್ಯದ ವಿವಿಧೆಡೆ ಅಲ್ಲಲ್ಲಿ ದಾಖಲಾಗುತ್ತಿದ್ದು, ಶಿಶುಗಳ ಆರೈಕೆ ಕೇಂದ್ರದಲ್ಲಿ ಸರಿಯಾದ ದಾಖಲೆಗಳನ್ನು ಹಾಗೂ ಸಿಸಿ ಟಿವಿ ಸೇರಿದಂತೆ ಭದ್ರತೆ ವ್ಯವಸ್ಥೆ ಒದಗಿಸಬೇಕಿದೆ ಎಂದು ಸೂಚಿಸಿದರು. ನಗರದ ಸೈಬರ್​ ಕ್ರೆೃಮ್​ ಪೊಲೀಸ್​ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳ ರಕ್ಷಣೆ ಕುರಿತು ಫಲಕಗಳನ್ನು ಅಳವಡಿಸದಿರುವ ಬಗ್ಗೆ ಠಾಣೆಯ ಸಬ್​ ಇನ್ಸ್​ಪೆಕ್ಟರ್​ಗೆ ತರಾಟೆಗೆ ತೆಗೆದುಕೊಂಡರು.
ಮಕ್ಕಳ ರಕ್ಷಣೆಗೆ ಇರುವ ಕಾನೂನುಗಳು, ಪೋಕ್ಸೋ ಕಾಯ್ದೆ ಸೇರಿದಂತೆ ಈಗಾಗಲೇ ಪೊಲೀಸ್​ ಇಲಾಖೆಗೆ ತರಬೇತಿ ನೀಡಿದ ನಂತರವೂ ಪೊಲೀಸ್​ ಠಾಣೆಯಲ್ಲಿ ಫಲಕ ಹಾಕದಿರುವ ಬಗ್ಗೆ ಆಯೋಗ ಅಸಮಧಾನ ವ್ಯಕ್ತಪಡಿಸಿತು.
ನಂತರ ತುಮಕೂರು ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಪದವಿಪೂರ್ವ ಕಾಲೇಜು, ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್​ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವಿದ್ಯಾರ್ಥಿನಿಯರಿಗೆ ಆರೋಗ್ಯ ಇಲಾಖೆಯಿಂದ ಸೂಕ್ತ ತಪಾಸಣೆ ನಡೆಯುತ್ತಿದೆಯೇ? ಪೌಷ್ಠಿಕ ಆಹಾರ ಸರಿಯಾಗಿ ನೀಡಲಾಗುತ್ತಿದೆಯೇ ಎಂಬ ಇತ್ಯಾದಿ ವಿವರಗಳನ್ನು ವಿದ್ಯಾರ್ಥಿಗಳಿಂದ ಪಡೆದರು. ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿ ಅಸಮಧಾನ ವ್ಯಕ್ತಪಡಿಸಿದ ನಿಯೋಗವು ಸಂಬಂಧಿಸಿದ ಅಧಿಕಾರಿಗಳಿಗೆ ನೋಟೀಸ್​ ನೀಡುವಂತೆ ಸೂಚಿಸಿತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಆರ್​.ಜಿ.ಪವಿತ್ರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಅಸ್ಗರ್​ ಬೇಗ್​, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಳಾ ಅಧಿಕಾರಿ ಸೋನಿಯಾ ವರ್ಣೇಕರ್​ ಇದ್ದರು.
90 ದಿನವಾದರೂ ನಡೆಯದ ಸಮಿತಿ ಸಭೆ:
ಕಳೆದ ಮೂರು ತಿಂಗಳಿನಿಂದ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಭೆ ನಡೆಯದಿರುವ ಬಗ್ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್​ ಕೋಸಂಬೆ ತೀವ್ರ ಬೇಸರ ವ್ಯಕ್ತಪಡಿಸಿ, ಮುಂದಿನ ಒಂದು ವಾರದೊಳಗೆ ಸಭೆ ನಡೆಸಿ ಆಯೋಗಕ್ಕೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ಪೋಕ್ಸೋ ಕಾಯ್ದೆ ಹಾಗೂ ಸಮಗ್ರ ಮಕ್ಕಳ ರಕ್ಷಣಾ ವ್ಯವಸ್ಥೆಯ ಅನುಷ್ಟಾನದ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯನ್ನು ರ್ನಿರ್ಲಸಿರುವ ಬಗ್ಗೆ ಸರ್ಕಾರ ಕಚೇರಿಗಳಲ್ಲಿನ ಸ್ಥಿತಿಗತಿಗಳ ಸಮೇತವಾಗಿ ತಿಳಿಸಿದರು.
ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಆಯೋಗ ಈ ಬಗ್ಗೆ ಪೊಲೀಸ್​ ಠಾಣೆಗಳಲ್ಲಿ ನಿಯಮಾನುಸಾರ ಕೇಸು ದಾಖಲಿಸಬೇಕು. ಇದರಿಂದ ಬಾಲ್ಯ ವಿವಾಹ ಅಥವಾ ನಿಯಮಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ, ಕಾನೂನು ಬಗ್ಗೆ ದುಷ್ಕರ್ಮಿಗಳಿಗೆ ಭಯ ಇರುತ್ತದೆ ಎಂದು ಸೂಚನೆ ನೀಡಿತು.
ಗ್ರಾಪಂಗಳಲ್ಲಿ ಮಕ್ಕಳ ಕಲ್ಯಾಣಕ್ಕಾಗಿ ಇರುವ ಅನುದಾನದಲ್ಲಿ ನಯಾ ಪೈಸೆ ಕೂಡ ರ್ಖಚಾಗದಿರುವ ಬಗ್ಗೆ ಆಯೋಗ ಅಚ್ಚರಿ ವ್ಯಕ್ತಪಡಿಸಿತು, ಈ ಬಗ್ಗೆ ಜಿಪಂ ಸಿಇಒ ಕ್ರಮವಹಿಸಬೇಕು ಎಂದು ಸೂಚಿಸಿತು.
ಸಭೆಯಲ್ಲಿ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ, ವೆಂಕಟೇಶ್​, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ. ಅಶೋಕ್​, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಸೌಮ್ಯ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net