ಜ.21ಕ್ಕೆ ಸಿದ್ದಗಂಗೆಗೆ ಉಪರಾಷ್ಟ್ರಪತಿ

ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ 7ನೇ ಪುಣ್ಯ ಸಂಸ್ಮರಣೋತ್ಸವ ಹಿನ್ನೆಲೆ  ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ಭೇಟಿ ಮಾಡಿ  ವಿ.ಸೋಮಣ್ಣ ಆಶೀರ್ವಾದ ಪಡೆದರು.
ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ 7ನೇ ಪುಣ್ಯ ಸಂಸ್ಮರಣೋತ್ಸವ ಹಿನ್ನೆಲೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ಭೇಟಿ ಮಾಡಿ ವಿ.ಸೋಮಣ್ಣ ಆಶೀರ್ವಾದ ಪಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಕುಮಾರ ಸ್ವಾಮೀಜಿ 7ನೇ ಪುಣ್ಯಸಂಸ್ಮರಣೋತ್ಸವ
  • ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ
  • ಕೇಂದ್ರ ಸಚಿವ ಸೋಮಣ್ಣ ಭಾಗಿ
ತುಮಕೂರು: ಶ್ರೀ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಜ.21 ರಂದು ನಡೆಯಲಿದ್ದು ಈ ಬಾರಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್​ ಭಾಗವಹಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಶನಿವಾರ ಸಿದ್ದಗಂಗಾ ಮಠದಲ್ಲಿ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆದ ಶ್ರೀಗಳ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗಹಿಸಿ ಮಾತನಾಡಿದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಜ. 21 ರಂದು ನಡೆಯಲಿರುವ ಶ್ರೀಗಳ ಪುಣ್ಯ ಸಂಸ್ಮರಣೋತ್ಸವದಲ್ಲಿ ದೇಶದ ಉಪರಾಷ್ಟ್ರಪತಿಗಳು ಭಾಗವಹಿಸಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಬೆಳಗ್ಗೆ 11ಕ್ಕೆ ಶ್ರೀಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಪುಣ್ಯ ಸಂಸ್ಮರಣೋತ್ಸವ ಸಮಾರಂಭ ನಡೆಯಲಿದ್ದು ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ಅಧ್ಯಕ್ಷತೆವಹಿಸುವರು. ಸಮಾರಂಭದ ದಿವ್ಯ ನೇತೃತ್ವವನ್ನು ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ವಹಿಸುವರು. ದಿವ್ಯ ಸಾನ್ನಿಧ್ಯವನ್ನು ಸದ್ಗುರು ಮಧುಸೂದನ ಸಾಯಿ ಹಾಗೂ ಶ್ರೀಮಠದ ಉತ್ತರಾಧಿಕಾರಿಗಳಾ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ವಹಿಸುವರು ಎಂದರು.
ಇದೇ ಮೊದಲ ಬಾರಿಗೆ ಸಿ.ಪಿ. ರಾಧಾಕೃಷ್ಣನ್​ ಅವರು ಶ್ರೀಮಠಕ್ಕೆ ಭೇಟಿ ನೀಡುತ್ತಿದ್ದಾರೆ. ಇವರು ಲೋಕಸಭಾ ಸದಸ್ಯರಾಗಿ, ರಾಜ್ಯಪಾಲರಾಗಿ ಅಪಾರ ಅನುಭವ ಹೊಂದಿದ್ದಾರೆ. ಉಪರಾಷ್ಟ್ರಪತಿ ಭೇಟಿ ವೇಳೆ ಶಿಷ್ಟಾಚಾರ ಪಾಲಿಸಬೇಕಿದೆ. ಹಾಗಾಗಿ, ಜಿಲ್ಲಾಡಳಿತ ಸೂಕ್ತ ಕ್ರಮವಹಿಸಬೇಕು. ಶ್ರೀಗಳ ಪುಣ್ಯಸ್ಮರಣೆಗೆ ನಾಡಿನೆಲ್ಲಡೆಯಿಂದ ಭಕ್ತರು ಆಗಮಿಸಲಿದ್ದು ಗದ್ದುಗೆ ದರ್ಶನ, ದಾಸೋಹದಲ್ಲಿ ಎಲ್ಲಿಯು ನೂಕುನುಗ್ಗಲು ಏರ್ಪಡದಂತೆ ಕ್ರಮವಹಿಸಬೇಕು. ಸೂಕ್ತ ವಾಹನ ನಿಲುಗಡೆ ಪೊಲೀಸ್​ ಇಲಾಖೆ ಸಿದ್ಧತೆ ಮಾಡಿಕೊಳ್ಳುವಂತೆ ಸೋಮಣ್ಣ ಸಲಹೆ ನೀಡಿದರು.
ಶ್ರೀಗಳ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮಕ್ಕೆ ಭದ್ರತೆ, ದಾಸೋಹ ವ್ಯವಸ್ಥೆ ಸೇರಿದಂತೆ ಅಗತ್ಯ ಸಿದ್ದತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಶಾಸಕರಾದ ಬಿ. ಸುರೇಶ್​ಗೌಡ, ಜಿ.ಬಿ.ಜ್ಯೋತಿಗಣೇಶ್​, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ. ಅಶೋಕ್​, ಮಠದ ಆಡಳಿತಾಧಿಕಾರಿ ಎಸ್​.ವಿಶ್ವನಾಥಯ್ಯ, ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಟಿ.ಕೆ.ನಂಜುಂಡಪ್ಪ, ಡಾ.ಶಿವಕುಮಾರಯ್ಯ, ಜಯವಿಭವಸ್ವಾಮಿ, ಡಾ..ಎಸ್​.ವಿ.ದಿನೇಶ್​, ಡಾ.ಎಸ್​.ಪರಮೇಶ್​, ಜಿ.ಎಸ್​.ರೇಣುಕಪ್ಪ , ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​ ಸೇರಿದಂತೆ ಶ್ರೀಮಠದ ಆಡಳಿತ ಮಂಡಳಿ ಸದಸ್ಯರುಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net