ಶಸ್ತ್ರಾಸ್ತ್ರ ಮಾರುಕಟ್ಟೆ ವಿಸ್ತರಣೆಗೆ ಯುದ್ಧ ಪ್ರಚೋದನೆ

 ತುಮಕೂರಿನಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಜೀವ-ಜನಪರ ಸಂಘಟನೆಗಳ ಜಂಟಿ ಸಹಯೋಗದಲ್ಲಿ ವಿನಾಶಕಾರಿ ಯುದ್ಧ ವಿರೋಧಿ ಕ್ಯಾಂಡಲ್​ ಲೈಟ್​ ಪ್ರತಿಭಟನೆ ನಡೆಸಲಾಯಿತು.
ತುಮಕೂರಿನಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಜೀವ-ಜನಪರ ಸಂಘಟನೆಗಳ ಜಂಟಿ ಸಹಯೋಗದಲ್ಲಿ ವಿನಾಶಕಾರಿ ಯುದ್ಧ ವಿರೋಧಿ ಕ್ಯಾಂಡಲ್​ ಲೈಟ್​ ಪ್ರತಿಭಟನೆ ನಡೆಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ
  • ತುಮಕೂರಿನಲ್ಲಿ ಕ್ಯಾಂಡಲ್​ ಲೈಟ್​ ಪ್ರತಿಭಟನೆ
  • ಚಿಂತಕ ಸಿ.ಯತಿರಾಜು
ತುಮಕೂರು: ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಶಸ್ತ್ರಾಸ್ತ್ರಗಳ ಮಾರುಕಟ್ಟೆ ವಿಸ್ತರಣೆಗಾಗಿ ಮತ್ತು ಸ್ವಂತ ಲಾಭಕ್ಕಾಗಿ ಯುದ್ಧಗಳನ್ನು ಪ್ರಚೋದಿಸುತ್ತಿವೆ ಎಂದು ಪರಿಸರವಾದಿ ಹಾಗೂ ಚಿಂತಕ ಸಿ. ಯತಿರಾಜು ಆರೋಪಿಸಿದರು.
ನಗರದ ಟೌನ್​ ಹಾಲ್​ ಮುಂಭಾಗದಲ್ಲಿ ಮಂಗಳವಾರ ಸಂಜೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಜೀವ-ಜನಪರ ಸಂಘಟನೆಗಳ ಜಂಟಿ ಸಹಯೋಗದಲ್ಲಿ ವಿನಾಶಕಾರಿ ಯುದ್ಧ ವಿರೋಧಿ ಕ್ಯಾಂಡಲ್​ ಲೈಟ್​ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಭೂಮಿ ಸಕಲ ಜೀವ-ಚರಗಳಿಗೆ ಸೇರಿದುದು. ಈ ಭೂಮಿಯನ್ನು ಹಾಳುಮಾಡುವ ಯುದ್ಧಗಳನ್ನು ನಿಲ್ಲಿಸಲು ಜಾಗತಿಕ ಶಾಂತಿ ಚಳುವಳಿ ಬೆಳೆದುಬರಬೇಕಾದ ಅನಿವಾರ್ಯತೆ ಇದೆ ಎಂದರು.
ಸಾಮ್ರಾಜ್ಯಶಾಹಿ ರಾಷ್ಟ್ರಗಳು ನಿಸರ್ಗದತ್ತವಾಗಿ ಸಂಪನ್ಮೂಲಗಳನ್ನು ಹೊಂದಿರುವ ದೇಶಗಳ ಮೇಲೆ ತಮ್ಮ ಹಿಡಿತ ಸಾಧಿಸಲು ಜನಾಂಗೀಯ ದ್ವೇಷವನ್ನು ಹುಟ್ಟುಹಾಕುತ್ತಾ ಅಮಾಯಕರ ಹತ್ಯೆಗೆ ಇಳಿದಿವೆ. ಇಡೀ ಮಾನವ ಕುಲವು ಇದನ್ನು ವಿರೋಧಿಸಬೇಕು ಎಂದು ಚಿಂತಕ ಪ್ರೊ. ಕೆ. ದೊರೈರಾಜು ತಿಳಿಸಿದರು.
ಎಐಟಿಯುಸಿ ಜಿಲ್ಲಾ ಮುಖಂಡ ಕಂಬೇಗೌಡ ಮಾತನಾಡಿ, "ಅಮೆರಿಕಾ ಜಗತ್ತಿನ ರೌಡಿಯಂತೆ ವರ್ತಿಸುತ್ತಿದೆ. ತಾವು ಮಾಡಿದ್ದೇ ಸರಿ ಎನ್ನುವ ಅವರ ಸರ್ವಾಧಿಕಾರಿ ನಡೆಯನ್ನು ಒಪ್ಪಲು ಸಾಧ್ಯವಿಲ್ಲ" ಎಂದು ತೀವ್ರ ವಿರೋಧ ವ್ಯಕ್ತಪಡಿಸಿದರು.
ಸಿಐಟಿಯುನ ಸೈಯದ್​ ಮುಜೀಬ್​ ಮಾತನಾಡಿ, "ಯುದ್ಧಗಳು ಜಗತ್ತಿನಲ್ಲಿ ಸಂಕಟಗಳ ಸರಮಾಲೆಯನ್ನು ಮತ್ತು ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಎಲ್ಲೆಡೆ ವಿನಾಶವನ್ನೇ ಸೃಷ್ಟಿಸುವ ಯುದ್ಧಗಳು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಮ್ಮ ದೇಶದ ಸರ್ಕಾರವು ಅಲಿಪ್ತ ನೀತಿಯನ್ನು ಕಡೆಗಣಿಸಿ ಯುದ್ಧಕೋರತನಕ್ಕೆ ಬೆಂಬಲ ನೀಡಬಾರದು" ಎಂದು ಒತ್ತಾಯಿಸಿದರು.
ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷೆ ಅಕ್ಕಮ್ಮ, ಸಾವಿತ್ರಿಬಾಯಿ ಪೋಲೆ ಮಹಿಳಾ ಸಂಘದ ಅನುಪಮಾ, ಎಂಎಸ್​.ಎಸ್​ ಕಲ್ಯಾಣಿ, ಮಾನವ ಹಕ್ಕು ಹೋರಾಟಗಾರ ಸೈಯದ್​ ತಾಜುದ್ದೀನ್​, ಜನವಾದಿ ಮಹಿಳಾ ಸಂಘಟನೆಯ ಟಿ.ಆರ್​. ಕಲ್ಪನಾ, ಕಾರ್ಮಿಕ ಮುಖಂಡ ಗಿರೀಶ್​, ಬಂಡಾಯ ಸಾಹಿತಿ ಅಶ್ವಥ್ಥನಾಯರಾಣ ಗುಟ್ಟೆ, ಎಐಯುಟಿಯುಸಿಯ ಮಂಜುಳಾ, ಸಿಐಟಿಯುನ ರಂಗಧಾಮಯ್ಯ, ಶಿವಕುಮಾರ್​ ಸ್ವಾಮಿ, ಡಿವೈಎ್​ಐನ ಎಸ್​.ರಾವೇಂದ್ರ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.
ಉಸ್ಮನ್​, ವಿನುತ, ಎ.ನರಸಿಂಹಮೂರ್ತಿ ಕ್ಯಾಂಡಲ್​ ಗಳನ್ನು ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇರಾನ್​ ಮೇಲಿನ ಅಮೆರಿಕಾ, ಇಸ್ರೇಲ್​ ಮಿಲಿಟರಿ ಆಕ್ರಮಣವನ್ನು ಬಲವಾಗಿ ಖಂಡಿಸಿದ ಪ್ರತಿಭಟನಾಕರಾರು, ಯುದ್ಧ ಪೀಡಿತ ಪ್ರದೇಶಗಳಲ್ಲಿರುವ ಭಾರತಿಯರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ತಕ್ಷಣ ಕ್ರಮವಹಿಸಲು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net