ಎಪಿಎಂಸಿ ಶೈತ್ಯಾಗಾರ ಕಾಮಗಾರಿ ನನೆಗುದಿಗೆ!

ತುಮಕೂರು ಎಪಿಎಂಸಿ ಆವರಣದಲ್ಲಿ ನಿರ್ಮಾಣ ಹಂತದಲ್ಲಿಯೇ ನೆನೆಗುದಿಗೆ ಬಿದ್ದಿರುವ 8ಕೊಟಿ ರೂ. ವೆಚ್ಚದ ಕೋಲ್ಡ್​ ಸ್ಟೋರೇಜ್​.
ತುಮಕೂರು ಎಪಿಎಂಸಿ ಆವರಣದಲ್ಲಿ ನಿರ್ಮಾಣ ಹಂತದಲ್ಲಿಯೇ ನೆನೆಗುದಿಗೆ ಬಿದ್ದಿರುವ 8ಕೊಟಿ ರೂ. ವೆಚ್ಚದ ಕೋಲ್ಡ್​ ಸ್ಟೋರೇಜ್​.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ ಎಪಿಎಂಸಿಗಳಿಗೆ ಆದಾಯ ಚೇತರಿಕೆಯ ಆಸರೆ
  • ಕಾಮಗಾರಿ ನಿರ್ಮಾಣ ಹಂತದಲ್ಲೇ ಬಾಕಿ

ತುಮಕೂರು:

ರಾಜ್ಯದಲ್ಲಿ 2020ರಲ್ಲಿ ಜಾರಿಯಾದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ನಂತರ ರಾಜ್ಯದ ಮಾರುಕಟ್ಟೆ ಪ್ರಾಂಗಣಗಳ ಆದಾಯದಲ್ಲಿ ಗಣನೀಯವಾಗಿ ಕುಸಿತ ಕಂಡಿದ್ದು, ನಿತ್ಯ ಖರ್ಚು ನಿರ್ವಹಣೆಯೂ ಕಷ್ಟವಾಗಿದೆ. 2024ರಲ್ಲಿ ಕಾಯ್ದೆಯ ಮರು ಜಾರಿಯಿಂದ ಎಪಿಎಂಸಿಗಳು ಕೊಂಚ ಚೇತರಿಸಿಕೊಂಡಿದ್ದು, ಆಡಳಿತ ಮಂಡಳಿಗೆ ಚುನಾವಣೆ ನಡೆದು ದಶಕ ಕಳೆದಿವೆ.

ನಿಯಂತ್ರಣ ಮತ್ತು ಅಭಿವೃದ್ಧಿ ಅಧಿನಿಯಮ 1966ಕ್ಕೆ 2020ನೇ ಸಾಲಿನಲ್ಲಿ ಅಧಿಸೂಚಿತ ಕೃಷಿ ಉತ್ಪನ್ನಗಳ ವ್ಯವಹಾರದ ಮೇಲಿನ ಮಾರುಕಟ್ಟೆ ಸಮಿತಿಗಳ ನಿಯಂತ್ರಣ ಅಧಿಕಾರವನ್ನು ಮಾರುಕಟ್ಟೆ ಪ್ರಾಂಗಣಗಳಿಗೆ ಮಾತ್ರ ಸೀಮಿತಗೊಳಿಸಿ ತಿದ್ದುಪಡಿ ಮಾಡಿದ ಪರಿಣಾಮದಿಂದ 618 ಕೋಟಿ ರೂಪಾಯಿಗಳಿಂದ ರಾಜ್ಯದ ಎಪಿಎಂಸಿ ಮಾರುಕಟ್ಟೆ ಹಾಗೂ ಬಳಕೆದಾರರ ಶುಲ್ಕದ ರೂಪದಲ್ಲಿ ಸಂಗ್ರಹವಾಗುತ್ತಿದ್ದ ಆದಾಯ ಕೇವಲ 194.45 ಕೋಟಿ ರೂಪಾಯಿಗೆ ಕುಸಿದಿದೆ.
ಮಾರುಕಟ್ಟೆ ಸಮಿತಿಗಳ ನಿಯಂತ್ರಣ ವ್ಯಾಪ್ತಿಯನ್ನು 2020ರ ತಿದ್ದುಪಡಿ ಪೂರ್ವದಲ್ಲಿದ್ದಂತೆ ಮಾರುಕಟ್ಟೆ ಪ್ರದೇಶದ ವ್ಯಾಪ್ತಿಗೆ ಮರು ನಿಗದಿಪಡಿಸಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮಕ್ಕೆ 2024ರಲ್ಲಿ ತಿದ್ದುಪಡಿ ಜಾರಿಗೆ ತಂದಿರುವುದರಿಂದ ಬಳಕೆದಾರರ ಶುಲ್ಕದ ಆದಾಯ 2024-25ರಲ್ಲಿ 498.40 ಕೋಟಿ ರೂ.ಗೆ ಹೆಚ್ಚಳವಾಗಿದೆ. 2025-26ನೇ ಡಿಸೆಂಬರ್​ವರೆಗೂ 413.14 ಕೋಟಿ ರೂ. ಸಂಗ್ರಹವಾಗಿರುವುದು ಕೊಂಚ ಚೇತರಿಸಿಕೊಂಡಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಬೆಲೆಗಳು ಕುಸಿತಗೊಂಡ ಸಂದರ್ಭಗಳಲ್ಲಿ ರೈತರು ಉತ್ಪನ್ನಗಳನ್ನು ಒತ್ತಡದಿಂದ ಮಾರಾಟ ಮಾಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಾದ ಬೆಂಬಲ ಬೆಲೆ ಯೋಜನೆ, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಪ್ಲೋರ್​ಪೈಸ್​ ಯೋಜನೆ. ಬೆಲೆ ವ್ಯತ್ಯಾಸ ಪಾವತಿ ಯೋಜನೆಗಳ ಅನುಷ್ಠಾನವಾಗುತ್ತಿದೆ.
ಬೆಂಬಲ ಬೆಲೆ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ಸ್ಥೀರಿಕರಣ ಆವರ್ತನಿಧಿ ಸ್ಥಾಪಿಸಿದ್ದು, ಪ್ರಸ್ತುತ 1,255 ಕೋಟಿ ರೂ. ಅನುದಾನ ಲಭ್ಯವಿದೆ. ಆದರೂ, ಬೆಂಬಲ ಬೆಲೆಯಲ್ಲಿ ಬೆಳೆ ಮಾರಾಟ ಮಾಡಿದ ರೈತರಿಗೆ ಸಕಾಲದಲ್ಲಿ ಹಣ ನೀಡಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಲೇ ಇದೆ.
ನಿರ್ಮಾಣ ಹಂತದಲ್ಲಿಯೇ ಉಳಿದ 20 ಶೈತ್ಯಾಗಾರ:
ಹಣ್ಣು, ಹೂವು ಮತ್ತು ತರಕಾರಿ ಸಂರಸಲು ಅನುಕೂಲವಾಗುವಂತೆ ಪ್ರಸ್ತುತ ರಾಜ್ಯದಲ್ಲಿ 178 ಕೋಟಿ ರೂ. ವೆಚ್ಚದಲ್ಲಿ 20 ಶೈತ್ಯಾಗಾರ (ಕೋಲ್ಡ್​ ಸ್ಟೋರೇಜ್​) ನಿರ್ಮಿಸಲು ಕಾಮಗಾರಿ ಆರಂಭಿಸಿ ವರ್ಷಗಳೇ ಕಳೆದರೂ ನಿರ್ಮಾಣ ಹಂತದಲ್ಲಿಯೇ ಉಳಿದಿವೆ. ಈಗಾಗಲೇ ಕಾಮಗಾರಿ ಆರಂಭಿಸಿರುವ 15 ಶೈತ್ಯಾಗಾರಗಳ ನಿರ್ಮಾಣ ನನೆಗುದಿಗೆ ಬಿದ್ದಿದೆ. ಇನ್ನೂ 5 ಟಕಗಳಿಗೆ ನಬಾರ್ಡ್​ ಅನುಮೋದನೆ ನೀಡಿದ್ದು, ಸರ್ಕಾರದ ಒಪ್ಪಿಗೆ ಬೇಕಿದೆ. ಬ್ಯಾಡಗಿ, ಬಸವನಬಾಗೇವಾಡಿ (2), ಯಲುಬುರ್ಗ, ಬೆಳಗಾವಿ, ಗದಗ, ಮೈಸೂರು, ರಾಣೆಬೆನ್ನೂರು (3), ತುಮಕೂರು, ಶಿರಾ ಮಾನಂಗಿ, ಗುಂಡ್ಲುಪೇಟೆ, ಬಳ್ಳಾರಿ ಹಾಗೂ ಕಲಬುರಗಿ ಎಪಿಎಂಸಿ ಆವರಣದಲ್ಲಿ ನಿರ್ಮಾಣ ಹಂತದಲ್ಲಿಯೇ ಉಳಿದಿವೆ. ನಬಾರ್ಡ್​ ಅನುಮೋದನೆ ನೀಡಿರುವ ಹೊಸದುರ್ಗ, ಹೊಳೇಆಲೂರು, ಸಿಂಧಗಿ, ಕುಂದಗೋಳ ಹಾಗೂ ಅರಸೀಕೆರೆಯಲ್ಲಿ ಶ್ಯಾತ್ಯಾಗಾರ ನಿರ್ಮಾಣಕ್ಕೆ ಸರ್ಕಾರದ ಅನುಮೋದನೆಗಾಗಿ ಕಾಯಲಾಗುತ್ತಿದೆ. ರಾಜ್ಯದಲ್ಲಿ ಸರ್ಕಾರದಿಂದ ಯಶವಂತಪುರ- ಎಪಿಎಂಸಿ ದಾಸನಪುರ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಹಾಗೂ ಬಿನ್ನಿಪೇಟೆ ಎಪಿಎಂಸಿಯಲ್ಲಿ ತಲಾ 1 ಶೈತ್ಯಾಗಾರ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಅನುಕೂಲವಾಗಿದೆ.
ಹುಣಸೆ, ದಾಳಿಂಬೆ ಸೇರಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಅನುಕೂಲವಾಗುವಂತೆ ಕೋಲ್ಡ್​ ಸ್ಟೋರೇಜ್​ ಸ್ಥಾಪಿಸಬೇಕು ಎಂಬ ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆಯಾದರೂ ಅಧಿಕಾರಿಗಳು ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸದೇ ಹಣ ಪೋಲು ಮಾಡುತ್ತಿದ್ದಾರೆ. ಕೂಡಲೇ ಕಾಮಗಾರಿ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.
ಶರತ್​, ಯುವ ರೈತ, ಹೆಬ್ಬೂರು
ದಿನಭತ್ಯೆ, ಪ್ರವಾಸ ಭತ್ಯೆಗೂ ಹಣವಿಲ್ಲ:
ರಾಜ್ಯದಲ್ಲಿರುವ 168 ಎಪಿಎಂಸಿಗಳ ಪೈಕಿ 100ಕ್ಕೂ ಹೆಚ್ಚು ಸಮಿತಿಗಳು ತೀವ್ರ ಸಂಕಷ್ಟದಲ್ಲಿಯೇ ದಿನದೂಡುತ್ತಿವೆ. ರಾಜ್ಯದಲ್ಲಿಯೇ 2021ರಲ್ಲಿ ಜಾರಿಯಾದ ನೂತನ ಎಪಿಎಂಸಿ ಕಾಯ್ದೆಯಿಂದ ಆದಾಯವೇ ಬರದಂತಾಗಿದೆ. ಕಚೇರಿ ನಿರ್ವಹಣೆಯೂ ಕಷ್ಟಪಡುತ್ತಿದ್ದ ಎಪಿಎಂಸಿಗಳಿಗೆ 2024ರ ತಿದ್ದುಪಡಿ ಗುಟುಕು ಜೀವ ನೀಡಿದೆ. ಬಹುತೇಕ ಸಮಿತಿಗಳಿಗೆ ಚುನಾವಣೆ ನಡೆಸಲು ಹಣವಿಲ್ಲ, ನೆರೆಹೊರೆಯ ಸಮಿತಿಗಳಲ್ಲಿ ಸಾಲ ಪಡೆದು ಚುನಾವಣೆ ನಡೆಸಿದರೂ ಅಧ್ಯಕ್ಷ, ಸದಸ್ಯರ ದಿನಭತ್ಯೆ, ಸಭೆ ಭತ್ಯೆ ಹಾಗೂ ಪ್ರಯಾಣಭತ್ಯೆ ನೀಡಲು ಹಣದ ಕೊರತೆಯಿರುವ ಕಾರಣಕ್ಕೆ ಚುನಾವಣೆಗೆ ಗೋಜಿನಿಂದಲೇ ಸರ್ಕಾರ ದೂರವಿದೆ ಎನ್ನಲಾಗಿದೆ.
*
======
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net