ಬರಗೂರು: ತಮ್ಮಲ್ಲಿ ಎಷ್ಟೇ ಅಡವು, ಆಸ್ತಿ, ಬೆಳ್ಳಿ ಬಂಗಾರವಿದ್ದರೂ ಶಿಕ್ಷಣಕ್ಕಿಂತ ಹೆಚ್ಚು ಬೆಲೆಬಾಳುವ ಅಮೂಲ್ಯವಾದುದು ಮತ್ತೊಂದಿಲ್ಲ ಎಂದು ಕೋಡಿಹಳ್ಳಿ ಆದಿಜಾಂಬವ ಬೃಹನ್ ಮಠದ ಶ್ರೀ ಗುರುಪ್ರಕಾಶಮುನಿ ಸ್ವಾಮೀಜಿ ಹೇಳಿದರು.
ಶಿರಾ ತಾಲೂಕು ಕುರುಬರರಾಮನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದಿಂದ ಭಾನುವಾರ ಆಯೋಜಿಸಿದ್ದ 135ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ದುಶ್ಚಟಗಳಿಗೆ ಬಲಿಯಾಗುವುದು ಬೇಡ. ಶೈಕ್ಷಣಿಕವಾಗಿ ಶಿಕ್ಷಣವನ್ನು ಮೈಗೂಡಿಸಿಕೊಂಡು ಉನ್ನತ ಸ್ಥಾನಗಳಿಗೆ ತಲುಪಿದಾಗ ತಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭಗಳನ್ನು ಹೊತ್ತು ಮಹಿಳೆಯರು ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.ಪ್ರತಿಭಾನ್ವಿತ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಪಂ ಸಿಬ್ಬಂದಿಯವರನ್ನು ಸನ್ಮಾನಿಸಲಾಯಿತು.