ಅನಿರೀಕ್ಷಿತ ಬರ ಎದುರಿಸಲು ಕೃಷಿ ತಜ್ಞರ ಸಲಹೆ

ಮುಂಗಾರು ಬಿತ್ತನೆ
ಮುಂಗಾರು ಬಿತ್ತನೆ
Published on
ತುಮಕೂರು: ಅನಿರೀತವಾಗಿ ಎದುರಾಗಿರುವ ಬರ ಎದುರಿಸಲು ಕೃಷಿ ತಜ್ಞರು ರೈತರಿಗೆ ಸಲಹೆ ನೀಡಲಾರಂಭಿಸಿದ್ದಾರೆ, "ಪರ್ಯಾಯ ಬೆಳೆ ಪದ್ಧತಿ'  ಅಳವಡಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಕಡಿಮೆ ನೀರು, ಕಡಿಮೆ ಅವಧಿ ಮತ್ತು ಕನಿಷ್ಟ ವೆಚ್ಚದ ಬೆಳೆಗಳತ್ತ ಮುಖ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ.
ಬರಗಾಲದ ಸಮಯದಲ್ಲಿ ನೀರಾವರಿ ಸೌಲಭ್ಯ ಕಡಿಮೆಯಾದಾಗ, ಹೆಚ್ಚು ನೀರು ಬೇಡುವ ಬೆಳೆಗಳಾದ ಭತ್ತ, ಕಬ್ಬು ಮತ್ತು ಅಡಿಕೆಗೆ ಬೆಳೆಗಳಿಗೆ ಪರ್ಯಾಯವಾಗಿ ಕಡಿಮೆ ನೀರಿನಲ್ಲಿ ಬೆಳೆಯುವ ಅಲ್ಪಾವಧಿ ಬೆಳೆಗಳನ್ನು ಬೆಳೆಯುವುದೇ ಪರ್ಯಾಯ ಬೆಳೆ ಪದ್ಧತಿ. ಇದು ಮಣ್ಣಿನ ತೇವಾಂಶವನ್ನು ಸಮರ್ಥವಾಗಿ ಬಳಸಿಕೊಂಡು, ರೈತರಿಗೆ ಆರ್ಥಿಕ ನಷ್ಟವಾಗದಂತೆ ತಡೆಯುತ್ತದೆ.
ರಾಜ್ಯದ ಮಣ್ಣಿನ ಗುಣಲಕ್ಷಣ ಮತ್ತು ಹವಾಮಾನ ವೈವಿಧ್ಯತೆಗೆ ಅನುಗುಣವಾಗಿ ಕೃಷಿ ಇಲಾಖೆ ಜಿಲ್ಲಾವಾರು ಪರ್ಯಾಯ ಬೆಳೆಗಳನ್ನು ಶಿಫಾರಸು ಮಾಡಿದೆ.
ಮಧ್ಯ ಕರ್ನಾಟಕ ವಲಯದ ಚಿತ್ರದುರ್ಗ, ದಾವಣಗೆರೆ, ತುಮಕೂರು, ಬಳ್ಳಾರಿ ಜಿಲ್ಲೆಗಳಲ್ಲಿ ರೈತರು ರಾಗಿ, ಹರಳು, ಶೇಂಗಾ, ಸಾಮೆ, ಕೊರಲೆ ಮತ್ತು ನವಣೆ ಬೆಳೆಗಳತ್ತ ಗಮನ ಹರಿಸಬೇಕು. ವಿಶೇಷವಾಗಿ ಹರಳು ಮತ್ತು ಶೇಂಗಾ ಮಳೆಯಾಶ್ರಿತ ಪ್ರದೇಶಗಳಿಗೂ ಅತ್ಯುತ್ತಮ ಪರ್ಯಾಯವಾಗಿವೆ.
ಬರಗಾಲವನ್ನು ಮೆಟ್ಟಿ ನಿಲ್ಲುವ ಅದ್ಭುತ ಶಕ್ತಿ ಸಿರಿಧಾನ್ಯಗಳಿಗಿದೆ. ರಾಗಿ, ನವಣೆ, ಸಜ್ಜೆ, ಸಾಮೆ, ಬರಗು ಮತ್ತು ಕೊರಲೆ ಬೆಳೆಗಳಿಗೆ ಅತಿ ಕಡಿಮೆ ನೀರು ಸಾಕು. ಇವುಗಳಿಗೆ ಕೀಟಬಾಧೆ ತೀರಾ ಕಡಿಮೆ, ಹಾಗಾಗಿ ಕೀಟನಾಶಕಗಳ ವೆಚ್ಚ ಉಳಿಯುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಗೆ ಭಾರಿ ಬೇಡಿಕೆಯಿದ್ದು, ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಧಾನ್ಯದ ಜೊತೆಗೆ ಜಾನುವಾರುಗಳಿಗೆ ಪೌಷ್ಟಿಕಾಂಶಯುಕ್ತ ಒಣ ಮೇವು ಕೂಡ ಸಿಗುತ್ತದೆ ಎಂದು ಸಲಹೆ ನೀಡಿದೆ.
ಹೆಸರು, ಉದ್ದು, ಅಲಸಂದಿ ಮತ್ತು ಕಡಲೆಯಂತಹ ದ್ವಿದಳ ಧಾನ್ಯಗಳು ಕೇವಲ 60 ರಿಂದ 75 ದಿನಗಳಲ್ಲಿ ಕಟಾವಿಗೆ ಬರುತ್ತವೆ. ಇವುಗಳ ವಿಶೇಷತೆಯೆಂದರೆ, ಇವು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿ ಮಣ್ಣಿನಲ್ಲಿ ಹಿಡಿದಿಟ್ಟುಕೊಳ್ಳುವುದರಿಂದ ಭೂಮಿಯ ಫಲವತ್ತತೆ ಸ್ವಾಭಾವಿಕವಾಗಿ ಹೆಚ್ಚುತ್ತದೆ. ಇದು ಮುಂದಿನ ಹಂಗಾಮಿನ ಬೆಳೆಗೆ ವರವಾಗಲಿದೆ.
 ಬರಗಾಲದ ಸಮಯದಲ್ಲಿ ಹನಿ ನೀರಾವರಿ  ಮತ್ತು ತುಂತುರು ನೀರಾವರಿ  ಪದ್ಧತಿಯನ್ನು ಕಡ್ಡಾಯವಾಗಿ ಬಳಸಿ. ಇದು ಶೇ.50 ಕ್ಕಿಂತ ಹೆಚ್ಚು ನೀರನ್ನು ಉಳಿಸುತ್ತದೆ ಮತ್ತು ಗಿಡದ ಬೇರುಗಳಿಗೆ ನೇರವಾಗಿ ತೇವಾಂಶವನ್ನು ತಲುಪಿಸುತ್ತದೆ. ಜತೆಗೆ ಮಣ್ಣಿಗೆ ಮಲ್ಚಿಂಗ್​ (ಹೊದಿಕೆ) ಮಾಡುವುದರಿಂದ ತೇವಾಂಶ ಆವಿಯಾಗುವುದನ್ನು ತಡೆಯಬಹುದಾಗಿದೆ. 
ಮುಂಗಾರು ಹಂಗಾಮಿನಲ್ಲಿ ವಾತಾವರಣದ ಅನಿಶ್ಚಿತತೆಯಿಂದ ಬೆಳೆ ನಷ್ಟವಾಗುವುದನ್ನು ತಡೆಗಟ್ಟಲು ಈ ಬೆಳೆ ಯೋಜನೆಯು ಅತ್ಯಂತ ಸಹಕಾರಿಯಾಗಿದೆ. ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ತಳಿ ಹಾಗೂ ಪ್ರಮಾಣೀಕೃತ  ಬಿತ್ತನೆ ಬೀಜಗಳನ್ನು ಪಡೆದುಕೊಂಡು ಕೃಷಿ ಕೈಗೊಳ್ಳಬಹುದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net