ಎಐ ಡೇಟಾ ಸೆಂಟರ್​ ನಿರ್ಮಾಣಕ್ಕೆ ವಿರೋಧ

ತುಮಕೂರಿನಲ್ಲಿ ಗಾಂಧೀಜಿ ಸಹಜ ಬೇಸಾಯ ಆಶ್ರಮದ ನೇತೃತ್ವದಲ್ಲಿ  ಮಣ್ಣು&ನೀರಿನ ಸತ್ಯಾಗ್ರಹ ಭಾಗವಾಗಿ ಬಿಡದಿಯಲ್ಲಿ ಎಐ ಡೇಟಾ ಸೆಂಟರ್​ ಸ್ಥಾಪನೆ ವಿರೋಧಿಸಿ ಹಾಗೂ ದುಷ್ಪರಿಣಾಮಕಗಳ ಕುರಿತು ಜಾಗೃತಿ ಮೂಡಿಸುವ ಪಾದಯಾತ್ರೆ ಕೈಗೊಳ್ಳಲಾಯಿತು.
ತುಮಕೂರಿನಲ್ಲಿ ಗಾಂಧೀಜಿ ಸಹಜ ಬೇಸಾಯ ಆಶ್ರಮದ ನೇತೃತ್ವದಲ್ಲಿ ಮಣ್ಣು&ನೀರಿನ ಸತ್ಯಾಗ್ರಹ ಭಾಗವಾಗಿ ಬಿಡದಿಯಲ್ಲಿ ಎಐ ಡೇಟಾ ಸೆಂಟರ್​ ಸ್ಥಾಪನೆ ವಿರೋಧಿಸಿ ಹಾಗೂ ದುಷ್ಪರಿಣಾಮಕಗಳ ಕುರಿತು ಜಾಗೃತಿ ಮೂಡಿಸುವ ಪಾದಯಾತ್ರೆ ಕೈಗೊಳ್ಳಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮಣ್ಣು ನೀರಿನ ಸತ್ಯಾಗ್ರಹ
  • ಗಾಂಧೀಜಿ ಸಹಜ ಬೇಸಾಯ ಆಶ್ರಮ
  • ಹೇಮೆ ಎಕ್ಸ್​ ಪ್ರೆಸ್​ ಕೆನಾಲ್​ ಕೈಬಿಡಲು ಆಗ್ರಹ
ತುಮಕೂರು:

ಮಣ್ಣು-ನೀರಿನ ಸತ್ಯಾಗ್ರಹ ಭಾಗವಾಗಿ ಎರಡನೇ ದಿನ ದೊಡ್ಡ ಹೊಸೂರು ಗಾಂಧೀಜಿ ಸಹಜ ಬೇಸಾಯ ಆಶ್ರಮದ ನೇತೃತ್ವದಲ್ಲಿ ಶುಕ್ರವಾರ ನಗರದ ಟೌನ್​ಹಾಲ್​ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್​ ಪಾದಯಾತ್ರೆ ನಡೆಸಲಾಯಿತು. ಬಿಡದಿಯಲ್ಲಿ ಆಟೋಮೇಷನ್​ ರೋಬೋಟ್​ (ಎಐ) ಡೇಟಾಸೆಂಟರ್​ ನಿಮಾರ್ಣ ವಿರೋಧಿಸಿ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಘೋಷಣೆಗಳು ಮೊಳಗಿದವು.

ಈ ವೇಳೆ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಕೇವಲ ಪೂಜೆ, ಪುನಸ್ಕಾರದಂತಹ ಧಾರ್ಮಿಕ ಕಾರ್ಯಗಳಲ್ಲಿ ಮಾತ್ರ ತೊಡಗಿಕೊಳ್ಳದೆ ಸನ್ಯಾಸಿಗಳು ಇಂತಹ ರೈತ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಯುವರೈತರು ಸಾವಯುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೆಪಣೆ ನೀಡಬೇಕಾಗಿದೆ ಎಂದರು.
ರೈತರು ಮಣ್ಣಿನ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ದೊಡ್ಡ ಹೊಸೂರಿನ ಗಾಂಧಿ ಸಹಜ ಬೇಸಾಯ ಆಶ್ರಮದಲ್ಲಿ ಕೈಗೊಂಡಿರುವ ಹಲವು ಕ್ರಮಗಳನ್ನು ಅನುಸರಿಸಿದರೆ ಜನರಿಗೆ ರಾಸಾಯಿನಿಕ ರಹಿತ ಆಹಾರ ನೀಡುವುದರ ಜತೆಗೆ, ಅದಾಯವನ್ನು ಗಳಿಸಲು ಅವಕಾಶವಿದೆ. ಮಣ್ಣು ಮತ್ತು ನೀರು ಕಲುಷಿತವಾಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ. ಅ ಮೂಲಕ ದೇಹ ಕಲುಷಿತವಾಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ. ರಾಜ್ಯ ಸರ್ಕಾರವು ಮಣ್ಣು, ನೀರು ಮತ್ತು ವಿದ್ಯುತ್​ ಕುರಿತಂತೆ, ಮತ್ತು ಕೃಷಿಗೆ ಅಗತ್ಯವಾದ ಬೀಜ, ಗೊಬ್ಬರ ಹಾಗೂ ಇನ್ನಿತರ ಕೃಷಿಗೆ ಪೂರಕ ವಸ್ತುಗಳ ಕುರಿತು ಪ್ರತ್ಯೇಕ ಕೃಷಿ ಬಜೆಟ್​ ಮಂಡಿಸುವಂತೆ ಒತ್ತಡ ತರಬೇಕಿದೆ ಎಂದು ಹೇಳಿದರು.
ಎಂಎನ್​ಸಿ ಕಂಪನಿಗಳ ಆಕ್ರಮಣ: ಆಸೆ ಬಿದ್ದ ರೈತ ಕೃಷಿಗೆ ಬೇಕಾದ ಮಣ್ಣು, ನೀರನ್ನು ಕುಲುಷಿತಗೊಳಿಸಿಕೊಂಡಿದ್ದಾನೆ. ರೈತರ ಫಲವತ್ತಾದ ಭೂಮಿ ಕೈಗಾರಿಕೆ, ರಸ್ತೆ, ಕಾರಿಡಾರ್​, ರಿಂಗ್​ ರಸ್ತೆ ಹೆಸರಿನಲ್ಲಿ ಬಂಡವಾಳಶಾಹಿಗಳ ಪಾಲಾಗುತ್ತಿರುವುದು ವಿಷಾದದ ಸಂಗತಿಯಾಗಿದೆ.ವ್ಯಾಪಾರಕ್ಕೆ ಬಂದ ಬ್ರಿಟಿಷರು ಭಾರತವನ್ನು 200 ವರ್ಷಗಳ ಕಾಲ ಆಳಿದರು. ಇದೀಗ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಭೂಮಿ ಮತ್ತು ನೀರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿವೆ. ಇದಕ್ಕೆ ನಾವು ಎಂದಿಗೂ ಅವಕಾಶ ಮಾಡಿಕೊಡಬಾರದು ಎಂದು ತಿಪಟೂರು ಗುರುಕುಲಾನಂದಶ್ರಮದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಗಾಂಧಿ ಸಹಜ ಬೇಸಾಯ ಆಶ್ರಮದ ಅಡಿಯಲ್ಲಿ ಮಣ್ಣು ಮತ್ತು ನೀರನ್ನು ಸಂರಕ್ಷಿಸುವ ಉದ್ದೇಶದಿಂದ ಸತ್ಯಾಗ್ರಹ ಆರಂಭಿಸಲಾಗಿದೆ. ಎಐ ತಂತ್ರಜ್ಞಾನದಿಂದ ನೀರು ಮತ್ತು ಭೂಮಿಗೆ ಆಗುವ ತೊಂದರೆ ಕುರಿತು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡಲು ರೈತರು, ಕಾರ್ಮಿಕರು, ನೀರಾವರಿ ತಜ್ಞರು ಪಾದಯಾತ್ರೆ ಕೈಗೊಂಡಿದ್ದೇವೆ. ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಮೂಲಕ ರಾಮನಗರಕ್ಕೆ ಹೇಮೆ ನೀರು ತೆಗೆದುಕೊಂಡು ಹೋಗುವ ಹುನ್ನಾರಕ್ಕೆ ವಿರೋಧ ಇದೆ. ಹಾಗೆಯೇ ನಂದಿಹಳ್ಳಿಯಿಂದ ಮಲ್ಲಸಂದ್ರ ಮೂಲಕ ವಸಂತನರಸಾಪುರಕ್ಕೆ ಹೋಗುವ ಹೊರವರ್ತುಲ ರಸ್ತೆ ರಸ್ತೆಯ ಸಂತ್ರಸ್ಥರ ಹೋರಾಟಕ್ಕೆ ಸಹ ಬೆಂಬಲವಾಗಿ ನಿಂತಿದ್ದೇವೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಹೇಳಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಚಿಕ್ಕನಾಯಕನಹಳ್ಳಿ ಗೋಡೆಕೆರೆಯ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ಸಂಯುಕ್ತ ಹೋರಾಟ ಕರ್ನಾಟಕದ ಸಿ.ಯತಿರಾಜು, ಚಿಂತಕ ಪಂಡಿತ್​ ಜವಹರ್​, ಗಾಂಧಿ ಸಹಜ ಬೇಸಾಯ ಆಶ್ರಮದ ಕೃಷಿ ವಿಜ್ಞಾನಿ ಡಾ.ಎಚ್​.ಮಂಜುನಾಥ್​, ರವೀಶ್​, ರೈತ ಸಂಘದ ಚಿಕ್ಕಬೋರೇಗೌಡ, ಗುಬ್ಬಿ ಲೋಕೇಶ್​, ನಂದಿಹಳ್ಳಿ ಉದಯಕುಮಾರ್​, ರಮೇಶ, ನಿಂಗರಾಜು, ರಾಜಶೇಖರ್​, ಸುರೇಶ್​ಹಾಗೂ ಕೃಷಿ ವಿಜ್ಞಾನಿಗಳು, ಯುವ ರೈತರು,ರೈತ ಮಹಿಳೆಯರು ಪಾಲ್ಗೊಂಡಿದ್ದರು.
ಮಣ್ಣು-ನೀರಿನ ಸತ್ಯಾಗ್ರಹ ಈ ಸಂದರ್ಭದಲ್ಲಿ ಅನಿವಾರ್ಯ ಹೋರಾಟ. ಈ ಮಣ್ಣು, ನೀರಿನ ಮೇಲೆ ಮನುಷ್ಯನಷ್ಟೇ ಅಲ್ಲ, ಗಿಡ, ಮರ, ಪ್ರಾಣಿ ಪಕ್ಷಗಳಿಗೂ ಹಕ್ಕಿದೆ. ಬುದ್ಧಿವಂತನಾದ ಮನುಷ್ಯ ಅವುಗಳನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ನೀಡುವ ಕೆಲಸ ಮಾಡಬೇಕು.ಈ ನಿಟ್ಟಿನಲ್ಲಿ ಎಲ್ಲರೂ ಇಂತಹ ಹೋರಾಟಗಳಿಗೆ ಕೈಜೋಡಿಸಬೇಕು. ಎಐ ಡೇಟಾ ಸೆಂಟರ್​ ಸ್ಥಾಪನೆ ಕೈಬಿಡಬೇಕು.
ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ
ತಿಪಟೂರು
ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಔಟರ್​ ರಿಂಗ್​ ರೋಡ್​ ಅವೈಜ್ಞಾನಿಕ ಯೋಜನೆಯನ್ನು ಕೈಬಿಡುವಂತೆ ಹೋರಾಟ ಕೈಗೊಂಡಿದ್ದೇವೆ. ಸ್ಥಳ ಪರಿಶೀಲನೆ ನಡೆಸುವ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿಯಾಗಲಿ ಈವರೆಗು ಭೇಟಿ ನೀಡಿಲ್ಲ.ಆದರೆ ಪೊಲೀಸ್​ ಬಂದೋಬಸ್ತ್​ನಲ್ಲಿ ಸರ್ವೆ ಮಾಡಿ ಕಲ್ಲು ಹಾಕಲು ಮುಂದಾಗಿದ್ದಾರೆ. ಇದು ಅತ್ಯಂತ ಖಂಡನೀಯ. ಅಧಿಕಾರಿಗಳು ಈ ನೆಲದ ಕಾನೂನು ಗೌರವಿಸಬೇಕು. ಸುಳ್ಳು ಡಿಪಿಆರ್​ ಕೈಬಿಡಬೇಕು. ಸೋಷಿಯಲ್​ ಅಡಿಟ್​ ನಡೆಸಬೇಕು. ಸುಳ್ಳು ವರದಿ ನೀಡಿರುವ ಎಸ್​ಎಲ್​ಒರನ್ನು ಅಮಾನತುಗೊಳಿಸಬೇಕು.
ಎ.ಗೋವಿಂದರಾಜು
ಜಿಲ್ಲಾಧ್ಯಕ್ಷ, ರೈತಸಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net