

ಪ್ರಮುಖ ಮುಖ್ಯಾಂಶಗಳು
ಗಣಿ ಬಾಧಿತ ಪ್ರದೇಶಗಳ ಪುನರುಜ್ಜೀವನಕ್ಕಾಗಿ ಮೀಸಲಿಟ್ಟ ಕೋಟ್ಯಂತರ ರೂಪಾಯಿ ಹಣ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಮಣ್ಣು ಪಾಲಾಗುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿದೆ.
ಕಾಮಗಾರಿ ಮುಗಿಯುವ ಮುನ್ನವೇ ರಸ್ತೆ ಕಿತ್ತು ಹೋಗುತ್ತಿದೆ. ಕಾಂಕ್ರೀಟ್ ಹಾಕಿದ ಕೆಲವೇ ದಿನಗಳಲ್ಲಿ ರಸ್ತೆ ಮೇಲ್ಭಾಗ ಕಿತ್ತು ಒಳಗಿನ ಜಲ್ಲಿಕಲ್ಲುಗಳು ಹೊರಬಂದಿವೆ. ಕೆಲವೆಡೆ ಮೇಲ್ಪದರ ಎದ್ದು ಜಲ್ಲಿಕಲ್ಲುಗಳು ಕಾಣಿಸುತ್ತಿವೆ. ಹೊಸದಾಗಿ ನಿರ್ಮಿಸಿದ ರಸ್ತೆ ಕಿತ್ತು ಹೋಗುತ್ತಿರುವುದು ಕಳಪೆ ಕಾಮಗಾರಿಗೆ ಸ್ಪಷ್ಟ ನಿದರ್ಶನವಾಗಿದೆ. ಅಲ್ಲದೆ ರಸ್ತೆಯ ಮಧ್ಯಭಾಗದಲ್ಲಿ ರೈತರು ಪೈಪ್ಲೈನ್ ಅಳವಡಿಸಲು ರಸ್ತೆ ಅಗೆದು ಹಾಗೆ ಬಿಟ್ಟಿರುವುದರ ಜತೆಗೆ ಏರ್ ಕ್ರಾಕ್ ಬಂದಿರುವ ಕಡೆಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ಅಥವಾ ಸೂಚನಾ ಫಲಕಗಳಿಲ್ಲ. ಕಾಂಕ್ರೀಟ್ ಕಿತ್ತು ಹೋಗಿದ್ದರಿಂದ ಜಲ್ಲಿಕಲ್ಲುಗಳು ರಸ್ತೆಯಲ್ಲೇ ಹರಡಿಕೊಂಡಿದ್ದು, ಬೈಕ್ ಸವಾರರು ಬ್ರೇಕ್ ಹಾಕಿದ ತಕ್ಷಣ ಸ್ಕಿಡ್ ಆಗಿ ಬೀಳುತ್ತಿದ್ದಾರೆ. ರಾತ್ರಿ ವೇಳೆ ತಗ್ಗುಗಳು ಕಾಣದೆ ಅಪಘಾತಗಳು ಸಂಭವಿಸುವ ಸಾಧ್ಯತೆ ಎದುರಾಗಿದ್ದು, 9 ಕೋಟಿ ನೀರಿನಲ್ಲಿ ಹೋಮ? ಮಾಡಿದಂತಾಗಿದೆ.
ಬೃಹತ್ ಮೊತ್ತದ ಕಾಮಗಾರಿ ಕಣ್ಣೆದುರೇ ಕಳಪೆಯಾಗಿದ್ದರೂ ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗುತ್ತಿಗೆದಾರರು ಹೈದರಾಬಾದ್ ಮೂಲದವರಾಗಿದ್ದು, ಸ್ಥಳಿಯವಾಗಿ ಸರಿಯಾದ ಮೇಲ್ವಿಚಾರಣೆ ಇಲ್ಲದೆ ಕಾಮಗಾರಿ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ. ರಸ್ತೆ ಕಿತ್ತು ಹೋಗಿ ತಿಂಗಳುಗಳಾಗುತ್ತಿದ್ದರೂ ಗುತ್ತಿಗೆದಾರರು ತಿರುಗಿಯೂ ನೋಡಿಲ್ಲ. ಸ್ಥಳಿಯ ಜನಪ್ರತಿನಿಧಿಗಳು ಕೂಡ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗಣಿ ಬಾಧಿತ ಪ್ರದೇಶಗಳ ಜನರ ಅನುಕೂಲಕ್ಕಾಗಿ ಬಳಸಬೇಕಾದ ಹಣ ಪೋಲಾಗುತ್ತಿರುವುದು ಖಂಡನೀಯ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಿತ್ತು ಹೋಗಿರುವ ರಸ್ತೆ ತಕ್ಷಣ ಗುಣಮಟ್ಟದ ಕಾಂಕ್ರೀಟ್ ಬಳಸಿ ದುರಸ್ತಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.