ತುಮಕೂರಿನಲ್ಲಿ 8,323 ಎಕರೆ "ಪಡಾ' ಜಮೀನು

ತುಮಕೂರು ಜಿಲ್ಲೆಯು ಕೃಷಿ ಜಮೀನು
ತುಮಕೂರು ಜಿಲ್ಲೆಯು ಕೃಷಿ ಜಮೀನು
Published on

ಪ್ರಮುಖ ಮುಖ್ಯಾಂಶಗಳು

  • ಅರ್ಜಿ ಸಲ್ಲಿಸಿ ದಶಕ ಕಳೆದರೂ ಕೇವಲ 4 ಪ್ರಕರಣ ಇತ್ಯರ್ಥ!
  • ರೀಸ್ಟೋರೇಷನ್​ ಅವಕಾಶಕ್ಕಾಗಿ ಕಾಯುತ್ತಿರುವ ರೈತ
  • ಕಂದಾಯ ಕಟ್ಟದ ಜಮೀನುಗಳೇ ಪಡಾ ಭೂಮಿ
  • ದಶಕನಿಂದಲೂ ಅರ್ಜಿ ವಿಲೇವಾರಿ ಮಾಡದ ಕಂದಾಯ ಇಲಾಖೆ

ತುಮಕೂರು:

ಹಿಂದೊಮ್ಮೆ ಭೂಕಂದಾಯ ಕಟ್ಟಲಾಗದ ರೈತರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಅಂತಹ ಜಮೀನುಗಳ ಖಾತೆದಾರರು ಅಥವಾ ಸಾಗುವಳಿದಾರರ ಹೆಸರು ಮರು ಸ್ಥಾಪನೆಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸಿದೆ. ತುಮಕೂರು ಜಿಲ್ಲೆಯಲ್ಲಿ ಬರೋಬ್ಬರಿ 8,323 ಎಕರೆ ಭೂಮಿ ದಾಖಲೆಯಲ್ಲಿ ಪಡಾ ಬಿದ್ದಿದೆ.

ಮೂಲ ಸಾಗುವಳಿದಾರರು ಸರ್ಕಾರಕ್ಕೆ ಸಲ್ಲಿಸಲಾಗದ ಕಂದಾಯ ಬಾಕಿಗಾಗಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡ ಬೀಳು (ಪಡ) ಎಂದು ದಾಖಲೆಗಳಲ್ಲಿ ದಾಖಲಾಗಿರುವ ಜಮೀನುಗಳ ಖಾತೆಗಳನ್ನು ಮೂಲ ಖಾತೆದಾರರ ಹೆಸರಿಗೆ ಮರುಸ್ಥಾಪನೆ (ರೀಸ್ಟೋರೇಷನ್​)ಗೆ ಸರ್ಕಾರ 2014ರ ಸೆ.6ರವರೆಗೆ ಕಾಲಾವಕಾಶ ನೀಡಿತ್ತು. 12 ವರ್ಷದ ಹಿಂದೆ ಸರ್ಕಾರ ನಿಗದಿಪಡಿಸಿದ್ದ ಈ ಕಾಲಾವಕಾಶದ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ಅಥವಾ ವ್ಯಾಪಕ ಪ್ರಚಾರದ ಕೊರತೆಯಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದ ಸಾವಿರಾರು ರೈತರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಪದೇಪದೆ ಮನವಿ ಮಾಡಿಕೊಳ್ಳುತ್ತಿದ್ದರೂ ಪ್ರಯೋಜನವಾಗಿಲ್ಲ. ರಾಜ್ಯಾದ್ಯಂತ ಕಂದಾಯ ಬಾಕಿಗಾಗಿ ಬೀಳು ಬಿದ್ದಿರುವ ಜಮೀನುಗಳ ಪೈಕಿ ಈವರೆಗೆ ಕೆಲವೇ ಕೆಲವು ಪ್ರಕರಣ ಇತ್ಯರ್ಥಪಡಿಸಲಾಗಿದೆ. ಆದರೆ, ಇನ್ನೂ ಸಾಕಷ್ಟು ಪ್ರಕರಣಗಳು ಇತ್ಯರ್ಥಕ್ಕಾಗಿ ಕಾದಿವೆ.
ಜಿಲ್ಲೆಯಲ್ಲಿ 8,323 ಎಕರೆ:
ಭೌಗೋಳಿಕವಾಗಿಯೂ ದೊಡ್ಡದು ಎನ್ನಿಸಿಕೊಂಡಿರುವ ತುಮಕೂರು ಜಿಲ್ಲೆಯಲ್ಲಿ 8,323 ಎಕರೆ ಭೂಮಿ ದಾಖಲೆಗಳಲ್ಲಿ ಬೀಳು(ಪಡಾ) ಎಂದು ನಮೂದಾಗಿದೆ. ಸಾಗುವಳಿದಾರರ ಹೆಸರು ಮತ್ತೆ ಸ್ಥಾಪನೆಗೆ 2014ರಲ್ಲಿ ಸರ್ಕಾರ ನೀಡಿದ್ದ ಅವಕಾಶ ಬಳಸಿಕೊಂಡು ಜಿಲ್ಲೆಯಲ್ಲಿ 374 ರೈತರು ಅರ್ಜಿ ಸಲ್ಲಿಸಿ ದಶಕ ಕಳೆದರೂ ಕೇವಲ 4 ಅರ್ಜಿಗೆ ಮಾತ್ರ ಮುಕ್ತಿ ಸಿಕ್ಕಿದೆ. ಇನ್ನೂ 370 ರೈತರು ಉಳುಮೆ ಮಾಡುತ್ತಿರುವ ಭೂಮಿಗೆ ಕಂದಾಯ ಕಟ್ಟಲು ಸಿದ್ಧರಾಗಿ ದಾಖಲೆಗಾಗಿ ಹಾಗೂ ಇನ್ನೂ ಸಾವಿರಾರು ರೈತರು ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಸುಧೀರ್ಘ ಕಾಲದಿಂದ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಸ್ವಾಧಿನಾನುಭವದಲ್ಲಿದ್ದರೂ 2014ರಲ್ಲಿ ಮಾಹಿತಿ ಕೊರತೆಯಿಂದಾಗಿ ರೀಸ್ಟೋರೇಷನ್​ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ರೈತರ ಹಿತದೃಷ್ಟಿಯಿಂದ ಸರ್ಕಾರ ಮತ್ತೊಮ್ಮೆ ಬೀಳು ಜಮೀನುಗಳ ಖಾತೆ ಮರುಸ್ಥಾಪನೆಗೆ ಅವಕಾಶ ನೀಡಬೇಕು ಹಾಗೂ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಬೇಕು.
ಕೆ.ಎಂ.ಲಕ್ಷ್ಮೀಕಾಂತಯ್ಯ, ರೈತ, ಗುಬ್ಬಿ
ಭೂ ಕಂದಾಯ ಬಾಕಿಯಿರುವ ಜಮೀನುಗಳ ಜಾಗೃತಿ ಖಾತೆದಾರರಿಗೆ ಮತ್ತೆ ಸ್ಥಾಪಿಸುವ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಈ ಅವಧಿಯನ್ನು ವಿಸ್ತರಿಸಲು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ119(2)ಕ್ಕೆ ತಿದ್ದುಪಡಿ ಮಾಡಿ, ಸರ್ಕಾರದ ಸಲ್ಲಿಸಲು ಅಧಿಸೂಚನೆ ಆರ್​ಡಿ 17 ಎಲ್​ಜಿಪಿ 2023ರಂತೆ ಕರಡು ನಿಯಮ ಹೊರಡಿಸಲಾಗಿದೆ. ಅಂತಿಮ ಅಧಿಸೂಚನೆ ಹೊರಡಿಸುವ ಕ್ರಮ ಸರ್ಕಾರದ ಪರಿಶೀಲನೆಯಲ್ಲಿದೆ.
ಡಾ.ಜಿ.ಪರಮೇಶ್ವರ, ಡಿಸಿಎಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net