ಜಿಲ್ಲೆಯ 629 ಶಾಲೆಗಿಲ್ಲ ಆಸ್ತಿ ದಾಖಲೆ!

ಶಾಲೆ ಭೂಮಿ ಒತ್ತುವರಿಯಾಗಿರುವ ತುಮಕೂರು ಹೃದಯಭಾಗದಲ್ಲಿರುವ ಎಂಪ್ರೆಸ್​ ಸರ್ಕಾರಿ ಶಾಲೆ.
ಶಾಲೆ ಭೂಮಿ ಒತ್ತುವರಿಯಾಗಿರುವ ತುಮಕೂರು ಹೃದಯಭಾಗದಲ್ಲಿರುವ ಎಂಪ್ರೆಸ್​ ಸರ್ಕಾರಿ ಶಾಲೆ.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಜಮೀನು ರಕ್ಷಣೆಗೆ ಹಿಂದೇಟು
  • 2,786 ಶಾಲೆಗಳಿಗೆ ದಾಖಲಾತಿ ಲಭ್ಯ
  • 34 ಕಡೆಗ ಸರ್ಕಾರರ ಆಸ್ತಿ ಖಾಸಗಿ ಪಾಲು

ತುಮಕೂರು:

ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳ ಜಮೀನು ಉಳಿಸಲು ಎದುರಾಗಿರುವ ಅಡ್ಡಿಯ ಆತಂಕಕ್ಕೆ ಮುಕ್ತಿ ಸಿಕ್ಕಿಲ್ಲ. ಇನ್ನೂ 629 ಶಾಲೆಗಳ ಆಸ್ತಿಯನ್ನು ಖಾತೆ ಮಾಡಿಕೊಡಲು ಕಂದಾಯ ಇಲಾಖೆಗೆ ಸಾಧ್ಯವಾಗಿಲ್ಲ. ಈ ನಡುವೆ 34 ಸ್ಕೂಲ್​ಗಳ ಆಸ್ತಿ ಒತ್ತುವರಿಯಾಗಿದ್ದು, ಭೂಮಿ ರಕ್ಷಣೆಗೆ ಸಂಬಂಧಪಟ್ಟ ಇಲಾಖೆ ಸಿದ್ಧರಿಲ್ಲ.

ರಾಜ್ಯದಲ್ಲಿ ಈವರೆಗೆ 22,544 ಸರ್ಕಾರಿ ಶಾಲೆ ಮತ್ತು ಕಾಲೇಜುಗಳು ಬಳಸುತ್ತಿರುವ ಭೂಮಿಯನ್ನು ಸಂಬಂಧಿಸಿದ ಶಾಲೆ, ಕಾಲೇಜು, ಶಿಕ್ಷಣ ಇಲಾಖೆಯ ಹೆಸರಿಗೆ ಪಹಣಿಗಳಲ್ಲಿ (ಭೂಮಿ ತಂತ್ರಾಂಶದ ದತ್ತಾಂಶದಂತೆ)ಖಾತೆ ನಮೂದಾಗಿದೆ. ಆದರೆ, ಇನ್ನೂ ಸಾಕಷ್ಟು ಕಡೆಗಳಲ್ಲಿ ಶಾಲೆಗಳ ಆಸ್ತಿಗೆ ದಾಖಲಾತಿ ಮಾಡಿಕೊಡುವ ಕೆಲಸ ಬಾಕಿ ಉಳಿದಿದೆ.
ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಭೂ ದಾಖಲೆಗಳಲ್ಲಿ ಅಧಿಕೃತವಾಗಿ ಹೆಸರು ದಾಖಲಾಗದೆ ಉಳಿದಿರುವ ಸಾವಿರಾರು ಸರ್ಕಾರಿ ಶಾಲೆಗಳ ಜಮೀನುಗಳನ್ನು ಸಂರಕ್ಷಿಸಲು ರಾಜ್ಯ ಕಂದಾಯ ಇಲಾಖೆ 2022ರಲ್ಲಿ ಹೊರಡಿಸಿರುವ ಸುತ್ತೋಲೆ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಾಕಾರವಾಗಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಕೂಡ ಜವಾಬ್ದಾರಿ ಮರೆತು ಕುಳಿತಿದೆ. ತುಮಕೂರು ಜಿಲ್ಲೆಯಲ್ಲಿ 2786 ಶಾಲೆಗಳು ಆಸ್ತಿಯ ದಾಖಲಾತಿ ಹೊಂದಿದ್ದು, ಇನ್ನೂ 629 ಶಾಲೆಗಳ ಆಸ್ತಿಗೆ ಖಾತೆ ಮಾಡಿಕೊಡಲು ಕಂದಾಯ ಇಲಾಖೆಗೆ ಸಾಧ್ಯವೇ ಆಗಿಲ್ಲ. ಈ ಪೈಕಿ 34 ಶಾಲೆಗಳ ಆಸ್ತಿ ಒತ್ತುವರಿ ಮಾಡಿಕೊಂಡಿರುವುದು ಸರ್ವೇಯಲ್ಲಿ ಬಯಲಾಗಿದ್ದರೂ ಒತ್ತುವರಿ ತೆರವು ಮಾಡುವ ಕೆಲಸವನ್ನು ಸಂಬಂಧಪಟ್ಟ ಇಲಾಖೆ ಮಾಡುತ್ತಿಲ್ಲ.
ಸರ್ಕಾರಿ ಆಸ್ತಿ ರಕ್ಷಣೆಗೆ ಅಧಿಕಾರಿಗಳು ಉದಾಸೀನ ಮಾಡುವುದರಿಂದ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆ, ಇಲಾಖೆಗಳ ವಿವಿಧ ಕಟ್ಟಡ ಹಾಗೂ ಆಸ್ತಿ ಖಾಸಗಿಯವರ ಪಾಲಾಗಿದೆ. ಇಂತಹ ದಂಧೆ ವ್ಯಾಪಾಕವಾಗಿದೆ. ಕಂದಾಯ ಇಲಾಖೆ 2022ರಲ್ಲಿಯೇ ಸುತ್ತೋಲೆ ಹೊರಡಿಸಿ ರಾಜ್ಯದಲ್ಲಿ ಸರ್ಕಾರಿ ಆಸ್ತಿಯನ್ನು ಗುರುತಿಸಿ ಸಂಬಂಧಿಸಿದ ಇಲಾಖೆಗೆ ಖಾತೆ ಮಾಡಿಕೊಟ್ಟು ಸರ್ಕಾರಕ್ಕೆ ವರದಿ ನೀಡಬೇಕೆಂದು ಸೂಚಿಸಿದ್ದರೂ ಅಧಿಕಾರಿಗಳು ಇಲ್ಲಸಲ್ಲದ ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. 2026ರ ಜುಲೈನಿಂದ ಸೆಪ್ಟಂಬರ್​ ವರೆಗೂ "ಸರ್ಕಾರಿ ಶಾಲೆ ಹಾಗೂ ಇಲಾಖೆ ಆಸ್ತಿ ರಕ್ಷಣಾ ಅಭಿಯಾನ' ಕೂಡ ರಾಜ್ಯದಲ್ಲಿ ಆಯೋಜಿಸಲಾಗಿದ್ದರೂ ಸಾವಿರಾರು ಶಾಲೆಗಳ ಆಸ್ತಿಗೆ ದಾಖಲೆಗಳು ಸೃಜನೆಯಾಗಿಲ್ಲ.
ಒತ್ತುವರಿಯಾಗಿರುವ ಶಾಲೆಗಳು:
ತುಮಕೂರು ಶೈಕ್ಷಣಿಕ ಜಿಲ್ಲೆಯ ಅಲ್ಕೆರೆ ಸರ್ಕಾರಿ ಶಾಲೆ, ಬುಕ್ಕಸಾಗರ, ಹುರಳಗೆರೆ, ಕೊತಾರಹಳ್ಳಿ, ಬೋರಲಿಂಗನಪಾಳ್ಯ, ಗೊಟ್ಟೀಕೆರೆ, ಜಾಣಗೆರೆ, ಸಿಂಗೋನಹಳ್ಳಿ, ಕಾಡರಾಮನಹಳ್ಳಿ, ಕೊಪ್ಪ, ನಾಗನಹಳ್ಳಿ, ಗುಬ್ಬಿ ತಾಲೂಕು ಮಡೇನಹಳ್ಳಿ, ಅವ್ಯೇರಹಳ್ಳಿ, ಚಿಕ್ಕನಾಯಕನಹಳ್ಳಿ ತಾಲೂಕು ಸೋಮನಹಳ್ಳಿ, ತುಮಕೂರು ತಾಲೂಕಿನ ಬಡ್ಡಿಹಳ್ಳಿ, ಬೆಳ್ಳಾವಿ, ಮಲ್ಲಸಂದ್ರ ಹಾಗೂ ತುಮಕೂರಿನ ಹೃದಯಭಾಗದಲ್ಲಿರುವ ಎಂಪ್ರೆಸ್​ ಸರ್ಕಾರಿ ಶಾಲೆಯೂ ಒತ್ತುವರಿಯಾಗಿದ್ದು, ತೆರವು ಮಾಡಲು ಅಧಿಕಾರಿಗಳಿಗೆ ಇಚ್ಛಾಶಕ್ತಿ ತೋರಿಸುತ್ತಿಲ್ಲ. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ದೊಗ್ಗನಹಳ್ಳಿ, ಪಕೀರಪ್ಪನಹಳ್ಳಿ, ಯಲಚಿಹಳ್ಳಿ, ತಪಗಾನಹಳ್ಳಿ, ಹರಿಹರಪುರ, ಕೊತ್ತೂರು, ದವಡಟ್ಟ, ಟಿ.ಎನ್​.ಕೋಟೆ, ವೆಂಕಟಾಪುರ, ಐವಾರ್ಲಪುರ, ತಿರುಮಣಿ, ವೀರ್ಲಗುಂದಿ, ಬ್ಯಾಡನೂರು, ಕೋಣನಕುರಿಕೆ, ಪೊನ್ನಸಮುದ್ರ, ಚಿಕ್ಕನಹಳ್ಳಿ ಶಾಲೆಗಳು ನೂರಾರು ಎಕರೆ ಭೂಮಿ ಖಾಸಗಿಯವರಿಗೆ ಲಾಭವಾಗುವಂತಾಗಿದೆ.
ಸರ್ಕಾರಿ ಶಾಲೆಗೆ ದಾನಿಗಳು ನೀಡಿರುವ ಜಮೀನುಗಳನ್ನು ಕಟ್ಟಡದ ಸಹಿತ ಖಾಸಗಿಯವರಿಗೆ ಪರಭಾರೆ ಮಾಡಿಲ್ಲ. ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ(ರಕ್ಷಣೆ ಮತ್ತು ಸಕ್ರಮಾತಿ) ಅಧಿನಿಯಮ 2026ರನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯ ಶಾಇ 11 ಶಾಸನ 2026. ಕಳೆದ ಏಪ್ರಿಲ್​ನಲ್ಲಿ ಜಾರಿಗೊಳಿಸಲಾಗಿದೆ.
ಎಸ್​.ಮಧುಬಂಗಾರಪ್ಪ, ಶಿಕ್ಷಣ ಸಚಿವ
ರಾಜ್ಯದ ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಜಮೀನುಗಳನ್ನು ಆಯಾ ಶಾಲೆ ಮತ್ತು ಕಾಲೇಜುಗಳ ಹೆಸರಿಗೆ ಪಹಣಿಯಲ್ಲಿ ನಮೂದಿಸಲು ಸಂಬಂಧಿಸಿದ ಇಲಾಖೆಯಿಂದ ದಾಖಲೆಗಳೊಂದಿಗೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೆ ನಿಯಮಾನುಸಾರ ಪರಿಶೀಲಿಸಿ, ಆದ್ಯತೆಯ ಮೇಲೆ ಸೂಕ್ತಕ್ರಮ ಕೈಗೊಳ್ಳಲಾಗುತ್ತಿದೆ.
ಡಾ.ಜಿ.ಪರಮೇಶ್ವರ, ಡಿಸಿಎಂ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net