ಗೂಳೂರು ಸಮೀಪ 106 ಎಕರೆ ಸಾರ್ವಜನಿಕ ಆಸ್ತಿ ಸರ್ಕಾರಕ್ಕೆ

ತುಮಕೂರು ಜಿಲ್ಲಾಡಳಿತ
ತುಮಕೂರು ಜಿಲ್ಲಾಡಳಿತ
Published on

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್​ ಆದೇಶ ಪಾಲಿಸಿದ ಜಿಲ್ಲಾಧಿಕಾರಿ
  • ತುಮಕೂರು ಸಮೀಪದ ಬೆಲೆಬಾಳುವ ಭೂಮಿ
  • "ದೇವದಾಯ ಇನಾಂತಿ' ಜಮೀನು ಸರ್ಕಾರದ ವಶಕ್ಕೆ
ತುಮಕೂರು: ತಾಲೂಕಿನ ಗೂಳೂರು ಬಳಿ ಬರೋಬ್ಬರಿ 106.23 ಎಕರೆ ಬೆಲೆಬಾಳುವ ಆಸ್ತಿಯನ್ನು ಸರ್ಕಾರದ ಸ್ವಾಧಿನದಲ್ಲಿ ಉಳಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾಡಳಿತ ಮಹತ್ವದ ಕ್ರಮಕೈಗೊಂಡಿದೆ.
ಸುಮಾರು 500 ಕೋಟಿ ರೂ. ಮೌಲ್ಯದ 106 ಎಕರೆ ಸಾರ್ವಜನಿಕ ಆಸ್ತಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಪಾಲಾಗುವುದನ್ನು ತಪ್ಪಿಸಿ ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗಲು ಅನುವಾಗುವಂತೆ ಕ್ರಮಕೈಳ್ಳಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಗೂಳೂರು ಹೋಬಳಿ ಕೊಂಡಾಪುರ ಗ್ರಾಮದ ಸರ್ವೆ ನಂ.3 ಹಾಗೂ ಕಲ್ಲುಮಠ ಸರ್ವೆ ನಂ.13, 17 ಮತ್ತು 20ರ ಜಮೀನುಗಳಿಗೆ ಸಂಬಂಧಿಸಿದಂತೆ 1974ರಲ್ಲಿ ಭೂಸುಧಾರಣಾ ಕಾಯ್ದೆ, 1961ರ ಕಲಂ 48ಎ(1)ರ ಅಡಿಯಲ್ಲಿ ಗೇಣಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ, ಇಂಡೆಕ್ಸ್​ ಆಫ್​ ಲ್ಯಾಂಡ್​ ದಾಖಲೆಗಳ ಪ್ರಕಾರ ಈ ಜಮೀನುಗಳು "ದೇವದಾಯ ಇನಾಂತಿ' ಜಮೀನುಗಳಾಗಿರುವುದರಿಂದ ಜಿಲ್ಲಾಡಳಿತ ವಶಕ್ಕೆ ಪಡೆದಿದೆ.
ಜಮೀನು ಮಂಜೂರು ಕೋರಿ ಸಾಕಷ್ಟು ಅರ್ಜಿ ಸಲ್ಲಿಕೆಯಾಗಿದ್ದರೂ ಭೂಸುಧಾರಣಾ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹಿಂಬರಹ ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಮೇಲ್ಮನವಿ ಹಾಗೂ ನ್ಯಾಯಾಂಗ ಪ್ರಕ್ರಿಯೆಗಳು ನಡೆದಿದ್ದು, ಅಂತಿಮವಾಗಿ ಹೈಕೋರ್ಟ್​ 1999ರ ಜೂ.2ರಂದು ನೀಡಿದ ಆದೇಶದಲ್ಲಿ, ಈ ಜಮೀನುಗಳು ಮೈಸೂರು(ಧಾರ್ಮಿಕ ಮತ್ತು ದತ್ತಿ) ಇನಾಮುಗಳ ನಿಮೂರ್ಲನಾ ಕಾಯ್ದೆ, 1955ರ ವ್ಯಾಪ್ತಿಗೆ ಒಳಪಡುವ ಇನಾಂ ಜಮೀನುಗಳಾಗಿದ್ದು, ಅವುಗಳ ಕುರಿತ ಹಕ್ಕುದಾರಿಕೆ ಅರ್ಜಿ ಪರಿಶೀಲಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಮಾತ್ರ ಇದೆ ಎಂದು ಸ್ಪಫ್ಟಿಪಡಿಸಿ, ಪ್ರಕರಣವನ್ನು ಮರುಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಿತ್ತು.
ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಪ್ರಕರಣ ಸಂಖ್ಯೆ ಐಎನ್​ಎ(ಅ) 26/1999-2000ರಲ್ಲಿ ಸಮಗ್ರ ವಿಚಾರಣೆ ನಡೆಸಿದರು. ಪ್ರಕರಣದಲ್ಲಿದ್ದ ಹಲವಾರು ಮೂಲ ಅರ್ಜಿದಾರರು ಮೃತಪಟ್ಟಿದ್ದು, ಅವರ ವಾರಸುದಾರರು ಜಮೀನುಗಳಲ್ಲಿ ಯಾವುದೇ ಕಾಲದಲ್ಲೂ ಉಳುಮೆ ನಡೆಸಿಲ್ಲ, ಸ್ವಾಧಿನದಲ್ಲಿಯೂ ಇರಲಿಲ್ಲ ಹಾಗೂ ತಪ್ಪು ತಿಳುವಳಿಕೆಯಿಂದ ಗೇಣಿ ಅರ್ಜಿ ಸಲ್ಲಿಸಲಾಗಿತ್ತು ಎಂದು ಲಿಖಿತವಾಗಿ ಒಪ್ಪಿಕೊಂಡು, ಅರ್ಜಿಗಳನ್ನು ವಜಾಗೊಳಿಸುವಂತೆ ಮನವಿ ಸಲ್ಲಿಸಿದ್ದರು.
ಲಭ್ಯ ದಾಖಲೆಗಳು, ಕ್ವಿಟ್​ ರೆಂಟ್​ ವಹಿಗಳು ಹಾಗೂ ಮೈಸೂರು(ವೈಯಕ್ತಿಕ ಮತ್ತು ಇತರೆ) ಇನಾಮುಗಳ ನಿಮೂರ್ಲನಾ ಅಧಿನಿಯಮ, 1954ರ ಕಲಂ 7(1)ರ ಅನ್ವಯ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಕಳೆದ ಏಪ್ರಿಲ್​ 24ರಂದು ಗೇಣಿ ಅರ್ಜಿಗಳನ್ನು ವಜಾಗೊಳಿಸಿ, ಜಮೀನುಗಳು ಗೂಳೂರು ಛತ್ರ, ಮುಜಾಫರ್​ ಖಾನ್​ ನಿರ್ವಹಣೆಯ ಉದ್ದೇಶಕ್ಕಾಗಿ ಮೀಸಲಿರಿಸಲಾದ ಸಾರ್ವಜನಿಕ ಸ್ವತ್ತಾಗಿವೆ ಎಂದು ಘೋಷಿಸಿ, ಹಕ್ಕು ದಾಖಲೆಗಳಲ್ಲಿ ಸಾರ್ವಜನಿಕ ಆಸ್ತಿಯಾಗಿ ದಾಖಲಿಸುವಂತೆ ತುಮಕೂರು ತಹಶಿಲ್ದಾರ್​ಗೆ ಆದೇಶಿಸಿದ್ದರು.
ತುಮಕೂರು ತಹಸೀಲ್ದಾರ್​ ಪಹಣಿ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿಗಳು ಹಾಗೂ ಅನುಷ್ಟಾನ ಕ್ರಮಗಳನ್ನು ಕೈಗೊಂಡಿದ್ದಾರೆ. ಇದರೊಂದಿಗೆ ಸುಮಾರು 106 ಎಕರೆ 23 ಗುಂಟೆ ಮೌಲ್ಯಯುತ ಸಾರ್ವಜನಿಕ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗುವುದನ್ನು ತಡೆದು ಸರ್ಕಾರದ ಸ್ವಾಧಿನಕ್ಕೆ
ಪಡೆಯಲಾಗಿದೆ.
ಬಹುಕಾಲದಿಂದಲೂ ಪ್ರಕರಣ ಬಾಕಿಯಿದ್ದು ಹೈಕೋರ್ಟ್​ ಆದೇಶದಂತೆ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ, ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಸಾರ್ವಜನಿಕ ಉದ್ದೇಶಗಳಿಗೆ ಭೂಮಿ ಕೊರತೆ ಆಗಬಹುದಾದ ಇಂತಹ ಸಂದರ್ಭದಲ್ಲಿ ಈ ಒಂದು ಅಮೂಲ್ಯ ಮತ್ತು ಐತಿಹಾಸಿಕ ಆದೇಶವನ್ನು ಮಾಡಲಾಗಿದೆ, ಸರ್ಕಾರದ ವಶಕ್ಕೆ ಭೂಮಿಯನ್ನು ಮರಳಿ ಪಡೆಯುವ ಈ ಕಾರ್ಯಾಚರಣೆಯ ನಿಜವಾದ ಉದ್ದೇಶ ಭವಿಷ್ಯದಲ್ಲಿ ಸಾರ್ಥಕವಾಗಲಿದೆ.
ಶುಭಕಲ್ಯಾಣ್​
ಜಿಲ್ಲಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net