

ಕೋಟ: ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಕೋಟ, ಕೋಟತಟ್ಟು ಸೇರಿದಂತೆ ವಿವಿಧ ಭಾಗದಲ್ಲಿ ಯಾಂತ್ರೀಕೃತ ಹಾಗೂ ಸಾಂಪ್ರದಾಯಿಕ ಕೃಷಿ ನಾಟಿ ಕಾರ್ಯ ಆರಂಭಗೊಂಡಿದೆ. ಈ ವರ್ಷ ಮೇ ತಿಂಗಳಿನಿಂದಲೇ ಮಳೆಯಾಗುತ್ತಿರುವುದರಿಂದ ಬಿತ್ತನೆ ಕಾರ್ಯ ಮಾಡಲಾಗಿತ್ತು. ಭತ್ತದ ಸಸಿಗಳು ಈಗ ನಾಟಿಗೆ ಸಿದ್ಧಗೊಂಡಿವೆ.
ಪ್ರಸ್ತುತ ಕೃಷಿ ಸೇರಿದಂತೆ ದೈನಂದಿನ ಕೂಲಿ ಕಾರ್ಯಕ್ಕೆ ಸ್ಥಳೀಯ ಕೂಲಿಯಾಳುಗಳ ಕೊರತೆ ಎದುರಾಗಿದೆ. ಅಲ್ಲದೆ ಸ್ಥಳೀಯ ಕೂಲಿಕಾರ್ಮಿಕರಿಗೆ ಹೆಚ್ಚಿನ ಕೂಲಿ ನೀಡಬೇಕೆಂಬ ಉದ್ದೇಶದಿಂದ ಹೊರ ರಾಜ್ಯ ಹಾಗೂ ಜಿಲ್ಲೆಗಳ ಕೂಲಿಕಾರ್ಮಿಕರನ್ನು ಕೃಷಿ ಕಾರ್ಯಕ್ಕೆ ಕರೆತರಲಾಗುತ್ತಿದೆ. ನಾಟಿ ಕಾರ್ಯಕ್ಕಾಗಿ ಕೊಪ್ಪಳ ಜಿಲ್ಲೆ ಗಂಗಾವತಿಯ 20ರಿಂದ 30 ಮಂದಿ ಕೂಲಿಕಾರ್ಮಿಕರು ಕೋಟ ಪರಿಸರಕ್ಕೆ ಆಗಮಿಸಿದ್ದಾರೆ. ಭತ್ತ ನಾಟಿಗೆ ಎಕರೆಗೆ 5 ಸಾವಿರ ರೂ. ಕೂಲಿ ನಿಗದಿಪಡಿಸಲಾಗಿದೆ.
ಈ ವರ್ಷ ಮಳೆ ಆರಂಭದಿಂದಲೇ ಧಾರಾಕಾರವಾಗಿ ಸುರಿಯುತ್ತಿದ್ದು, ಕೃಷಿ ಕಾರ್ಯಕ್ಕೆ ಸಂಕಷ್ಟ ತಂದೊಡ್ಡುತ್ತಿದೆ. ಹೆಚ್ಚು ಮಳೆಯಿಂದ ಗದ್ದೆಯಲ್ಲಿ ನೀರು ತುಂಬಿಕೊಂಡು ನಾಟಿ ಕಾರ್ಯಕ್ಕೆ ತೊಂದರೆಯಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಸಾಂಪ್ರಾಯಿಕ ಕೃಷಿಗೆ ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನೆಲೆ ಕೆಲ ವರ್ಷಗಳಿಂದ ಕೋಟ ಹೋಬಳಿ ಸೇರಿದಂತೆ ವಿವಿಧ ಭಾಗಗಳ ಭತ್ತ ನಾಟಿ ಕಾರ್ಯಕ್ಕೆ ಗಂಗಾವತಿ ಭಾಗದ ಕೂಲಿಕಾರ್ಮಿಕರನ್ನು ಅವಲಂಬಿಸಿದ್ದಾರೆ. ಜಿಲ್ಲೆಯ ಬೇರೆ ಭಾಗದವರು ನಮ್ಮನ್ನು ಸಂಪರ್ಕಿಸಿದರೆ ಆ ಭಾಗಕ್ಕೆ ತೆರಳಿ ನಾಟಿ ಕಾರ್ಯ ವಾಡಿಕೊಡುತ್ತೇವೆ. ರಾಮಪ್ಪ, ಗಂಗಾವತಿ ಕೂಲಿಕಾರ್ಮಿಕ ನಮ್ಮ ಜಿಲ್ಲೆಗೆ ಕಳೆದ ಹಲವಾರು ವರ್ಷಗಳಿಂದ ಕೊಪ್ಪಳ, ಗಂಗಾವತಿಯ ಕೂಲಿಕಾರ್ಮಿಕರು ಬರುತ್ತಿದ್ದು, ತುಂಬಾ ಅನುಕೂಲವಾಗಿದೆ. ಪ್ರಸ್ತುತ ಚಾಪೆ ಕೃಷಿ ದುಬಾರಿಯಾಗುತ್ತಿದ್ದು, ಯಾಂತ್ರೀಕೃತ ಕೃಷಿ ಕಾಯಕದ ನಡುವೆ ಸಾಂಪ್ರದಾಯಕ ಕೃಷಿ ಉಳಿಸಬೇಕೆಂಬ ಉದ್ದೇಶ ನಮ್ಮದಾಗಿದೆ. ವಿಶ್ವನಾಥ ತುಂಗ, ಹಿರಿಯ ಕೃಷಿಕರು, ಕೋಟತಟ್ಟು.