

ವಿಜಯವಾಣಿ ಸುದ್ದಿಜಾಲ ಕೋಟ ಕೋಟ ಹಾಗೂ ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ಸಮಸ್ಯೆಯಾಗುತ್ತಿರುವ ಪ್ರದೇಶಗಳಿಗೆ ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಭಾರಿ ಮಳೆ ಸುರಿದ ಸಂದರ್ಭ ಕೋಟ ಗ್ರಾ.ಪಂ. ವ್ಯಾಪ್ತಿಯಿಂದ ಕೋಟತಟ್ಟು ಗ್ರಾ.ಪಂ.ಗೆ ಭಾರಿ ಪ್ರಮಾಣದ ಮಳೆ ನೀರು ಹರಿಯುತ್ತಿದ್ದು, ಈ ಬಗ್ಗೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಭೇಟಿ ನೀಡಿದರು. ಕೋಟದಿಂದ ಕೋಟತಟ್ಟು ಭಾಗ ಸಂಪರ್ಕಿಸುವ ತೋಡು ಹೂಳು ತುಂಬಿರುವುದನ್ನು ಅರಿತ ತಹಸೀಲ್ದಾರ್ ಕೂಡಲೇ ಹೂಳು ತೆರವಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಕೋಟ ಹೋಬಳಿ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಕೋಟ ಗ್ರಾಮ ಲೆಕ್ಕಿಗ ಚಲುಚರಾಜು, ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್, ಸದಸ್ಯರಾದ ವಿದ್ಯಾ ಸಾಲಿಯಾನ್, ಸಾಹಿರಾ, ರಾಬರ್ಟ್ ನಾಯ್ಕ, ಗ್ರಾಮಸಹಾಯಕ ರಾಜು ಕುಂದರ್ ಮತ್ತಿತರರು ಇದ್ದರು.
ನರೇಗಾ ಯೋಜನೆ ಅನ್ವಯ ಇತ್ತೀಚೆಗೆ ಕೋಟತಟ್ಟು ವ್ಯಾಪ್ತಿಯಲ್ಲಿ 40ಕ್ಕೂ ಮಹಿಳೆಯರಿದ್ದ ತಂಡ ತೋಡು ಹೂಳು ತೆಗೆದಿದ್ದು, ಈ ಕಾರ್ಯಕ್ಕೆ ತಹಸೀಲ್ದಾರ್ ಶ್ರೀಕಾಂತ್ ಮೆಚ್ಚುಗೆ ಸೂಚಿಸಿದರು. ಬಳಿಕ ಸ್ಥಳೀಯ ಕೃಷಿ ಭೂಮಿಗಳ ಸ್ಥಿತಿ, ಹಾನಿಯಾದ ಕುರಿತು ಮಾಹಿತಿ ಪಡೆದುಕೊಂಡರು.