

ವಿಜಯವಾಣಿ ಸುದ್ದಿಜಾಲ ವಿಟ್ಲ
ಅನುಮಾನಾಸ್ಪದ ಸಾವಿನ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ ಕಾರಣ ಮೃತ ವ್ಯಕ್ತಿಯ ಸಹೋದರ ಮಂಜೇಶ್ವರ ಠಾಣೆಗೆ ದೂರು ನೀಡಿದ ಬಳಿಕ ನ್ಯಾಯಾಲಯದ ಆದೇಶದಂತೆ ಕನ್ಯಾನ ಬಂಡಿತ್ತಡ್ಕದಲ್ಲಿ ದನ ಮಾಡಲಾಗಿದ್ದ ಮೃತದೇಹವನ್ನು 17 ದಿನಗಳ ಬಳಿಕ ಮೇಲೆತ್ತಿ ಗುರುವಾರ ಮರಣೋತ್ತರ ಪರೀಕ್ಷೆ ಮಾಡಲಾಯಿತು.
ಬಂಟ್ವಾಳ ತಾಲೂಕಿನ ಕನ್ಯಾನ ಬಂಡಿತ್ತಡ್ಕದಲ್ಲಿರುವ ರಹ್ಮಾನಿಯಾ ಜುಮಾ ಮಸೀದಿ ಆವರಣದಲ್ಲಿ ದನ ಮಾಡಿದ್ದ ಮಂಜೇಶ್ವರದ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರ್(44) ಎಂಬುವರ ಮೃತದೇಹವನ್ನು ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್, ಮಂಜೇಶ್ವರ ಠಾಣೆಯ ವೃತ್ತನಿರೀಕ್ಷಕ ರಾಜೀವ್ ಕುಮಾರ್ ಕೆ., ಕೇರಳ ಆರೋಗ್ಯ ಇಲಾಖೆಯ ಡಾ.ಹರಿಕೃಷ್ಣ ಕಾಸರಗೋಡು, ಯೇನೆಪೋಯ ವಿಧಿವಿಜ್ಞಾನ ವಿಭಾಗ ಮುಖ್ಯಸ್ಥ ಡಾ.ಕಿಶೋರ್ ಕುಮಾರ್ ಬಿ. ಸಮ್ಮುಖದಲ್ಲಿ ಧಫನ ಸ್ಥಳದಿಂದ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ದೇಹದ ವಿವಿಧ ಅಂಗಾಂಗಗಳ ಮಾದರಿಯನ್ನು ವಿಧಿವಿಜ್ಞಾನ ತಂಡ ಪಡೆದುಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಯೇನೆಪೋಯ ಆಸ್ಪತ್ರೆಗೆ ತೆಗೆದುಕೊಂಡು ಬಂದು ಪರೀಕ್ಷೆಯ ಬಳಿಕ ದೇಹವನ್ನು ಮತ್ತದೇ ಸ್ಥಳದಲ್ಲೇ ದನ ಮಾಡಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯನ್ನು ಕೇರಳದ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವುದಾಗಿ ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಮಂಜೇಶ್ವರ ಠಾಣೆಯ ಎಎಸ್‌ಐ ಮಧುಸೂದನನ್ ಕೆ. ಅವರನ್ನೊಳಗೊಂಡ ಪೊಲೀಸ್ ತಂಡ ಅಗತ್ಯ ಕ್ರಮಗಳನ್ನು ಪೂರೈಸಿತು. ಯೇನೆಪೋಯ ನ್ಯಾಯ ವೈದ್ಯಶಾಸ ಉಪನ್ಯಾಸಕ ಡಾ.ಶ್ಯಾಮ್ ಕಿಶೋರ್, ಡಾ.ಅಲೆನ್, ಅಂತ್ರೋಪಾಲಜಿಸ್ಟ್ ಡಾ.ನಸೀರ್ ಮೊದಲಾದವರಿದ್ದ ಎಂಟು ಮಂದಿಯ ತಂಡ ಮರಣೋತ್ತರ ಪರೀಕ್ಷೆ ನಡೆಸಿತು.
ಮಜೀರ್ಪಳ್ಳ ನಿವಾಸಿ ಅಶ್ರ್ ಗೂಡಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಮೇ 5ರಂದು ಊಟ ಮಾಡಿ ಮಲಗಿದ್ದು, ಮರುದಿನ ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿದ್ದರು. ಹೃದಯಾಘಾತದಿಂದ ಮೃತಪಟ್ಟಿರಬಹುದೆಂಬ ತೀರ್ಮಾನಕ್ಕೆ ಬಂದು ಪತ್ನಿ, ಇಬ್ಬರು ಪುತ್ರರು ಮೇ 6ರಂದು ಸಾಯಂಕಾಲ ಕನ್ಯಾನದ ಬಂಡಿತ್ತಡ್ಕದಲ್ಲಿರುವ ರಹ್ಮಾನಿಯಾ ಜುಮಾ ಮಸೀದಿ ಆವರಣದಲ್ಲಿ ದನ ಮಾಡಿದ್ದರು. ಪುಣೆಯಲ್ಲಿ ಕೆಲಸದಲ್ಲಿದ್ದ ಮೃತರ ಸಹೋದರ ಇಬ್ರಾಹಿಂ ಅಶ್ರಫ್ ಮೃತಪಟ್ಟ ಮೂರನೇ ದಿನ ಆಗಮಿಸಿ ಅವರ ಮನೆಗೆ ಹೋದಾಗ ಅಲ್ಲಿ ಸೇರಿದ್ದವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ವ್ಯಕ್ತಿಯೊಬ್ಬನ ಮೇಲೆ ಎಲ್ಲರೂ ಬೊಟ್ಟು ಮಾಡಿದ ಹಿನ್ನ್ನೆಲೆಯಲ್ಲಿ ಮಂಜೇಶ್ವರ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಿಸಲಾಯಿತು. ತನಿಖೆಗೆ ಮುಂದಾದ ಪೊಲೀಸರಿಗೆ ಮೃದೇಹದ ಮರಣೋತ್ತರ ಪರೀಕ್ಷೆ ಮಾಡುವಂತೆ ನ್ಯಾಯಾಲಯ ಸೂಚಿಸಿತ್ತು.
ಮಸೀದಿ ಆವರಣದಲ್ಲಿ ದನ ಮಾಡಿದ ಜಾಗ ಗುರುತಿಸಿ, ನ್ಯಾಯಾಲಯದ ಆದೇಶದಂತೆ ಕುಟುಂಬದವರ ಅನುಮತಿ ಪಡೆದು ದೇಹವನ್ನು ಮೇಲೆತ್ತಲಾಯಿತು. ತಾಲೂಕು ದಂಡಾಧಿಕಾರಿಗಳು ಸಂಬಂಧಿಕರ ಹೇಳಿಕೆ ಪಡೆದ ಬಳಿಕ ವಿಧಿವಿಜ್ಞಾನ ವೈದ್ಯರ ತಂಡದ ಸೂಚನೆಯಂತೆ ದೇಹವನ್ನು ಮೇಲೆತ್ತುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಕೇರಳ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಳಗ್ಗೆ 9.30ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ್ದರು. ವಿಧಿವಿಜ್ಞಾನ ತಂಡ ಸುಮಾರು 10.30ಕ್ಕೆ ಸ್ಥಳಕ್ಕಾಗಮಿಸಿದರೆ, 11 ಗಂಟೆ ಸುಮಾರಿಗೆ ತಾಲೂಕು ದಂಡಾಧಿಕಾರಿಗಳು ಸ್ಥಳಕ್ಕೆ ತಲುಪಿದ್ದರು. ಅವರ ಆಗಮನದ ಬಳಿಕ ಎಲ್ಲ ಪ್ರಕ್ರಿಯೆಗಳು ಪ್ರಾರಂಭವಾದವು. ದನ ಮಾಡಿದ ಸ್ಥಳ ಹಾಗೂ ಮರಣೋತ್ತರ ಪರೀಕ್ಷೆ ನಡೆಸಲು ಪ್ರತ್ಯೇಕ ಎರಡು ಸ್ಥಳಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ತನಕ ಪ್ರಕ್ರಿಯೆಗಳನ್ನು ನಡೆಸಿ ಅಧಿಕಾರಿಗಳು ತೆರಳಿದರು.