More

    ದ.ಕ.ಜಿಲ್ಲಾಧಿಕಾರಿ ನಿವಾಸದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ




    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2023-24ರ ಶೈಕ್ಷಣಿಕ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ನಗರದ ದ.ಕ.ಜಿಲ್ಲಾಧಿಕಾರಿ ಅವರ ನಿವಾಸದಲ್ಲಿ ಅಭಿನಂದಿಸುವ ಕಾರ್ಯಕ್ರಮ ಬುಧವಾರ ನಡೆಯಿತು. ಎಸ್‌ಎಸ್‌ಎಲ್‌ಸಿಯ 30 ಹಾಗೂ ಪಿಯುಸಿಯ 43 ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
    ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ ‘ ವಿದ್ಯಾರ್ಥಿ ಜೀವನದಲ್ಲಿ ನನ್ನ ಜಿಲ್ಲೆಯ ಜಿಲ್ಲಾಧಿಕಾರಿ ನಿವಾಸದ ಎದುರಿನಿಂದ ಹಾದು ಹೋಗುವಾಗ ಕಾಂಪೌಂಡು ಗೋಡೆಯ ಹೊರಗಿರುವ ನಾಮ ಫಲಕದಿಂದ ಉತ್ತೇಜಿತನಾಗಿದ್ದೆ, ಅಂತಹ ನಾಮಫಲಕದಲ್ಲಿ ಮುಂದೊಂದು ದಿನ ನನ್ನ ಹೆಸರು ಹಾಕಿಸಿಕೊಳ್ಳಬೇಕೆಂಬ ಹಂಬಲ, ಬಳಿಕ ಗುರಿಯಾಗಿ ಇಂದು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದೇನೆ ಎಂದರು.
    ಪ್ರತಿ ವಿದ್ಯಾರ್ಥಿಗಳಿಗೂ ಈ ವಿಚಾರ ವಿನಿಮಯದ ಕಾರ್ಯಕ್ರಮವು ಸ್ಮರಣೀಯ ಹಾಗೂ ಉತ್ತೇಜನಕಾರಿಯಾಗಿರಲಿ ಎಂಬ ಕಾರಣಕ್ಕಾಗಿ, ವಿಶೇಷವಾಗಿ ಜಿಲ್ಲಾಧಿಕಾರಿಗಳ ನಿವಾಸದಲ್ಲೇ ಕಾರ್ಯಕ್ರಮ ಆಯೋಜಿಸಿಸಲಾಗಿದೆ ಎಂದು ಅವರು ಹೇಳಿದರು.
    ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್.ಕೆ. ಮಾತನಾಡಿ ‘ಒತ್ತಡ ನಿರ್ವಹಣೆಯ ಪ್ರಾಮುಖ್ಯತೆ, ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಳ್ಳುವುದರಿಂದ ಉನ್ನತ ಸ್ಥಾನಕ್ಕೆ ಏರುವುದು ಸುಲಭ ಸಾಧ್ಯ ಎಂದರು.
    ಎಸ್‌ಎಸ್‌ಎಲ್‌ಸಿಯಲ್ಲಿ 2ನೇ ರ‌್ಯಾಂಕ್ ಪಡೆದ ಧರ್ಮಸ್ಥಳ ಮಂಜುನಾಥೇಶ್ವರ ಇಂಗ್ಲೀಷ್‌ಮೀಡಿಯಂ ಹೈಸ್ಕೂಲ್ನ ಚಿನ್ಮಯ್ ಜಿ.ಕೆ., 6ನೇ ರ‌್ಯಾಂಕ್ ಪಡೆದ ಮಂಗಳೂರಿನ ರಾಮಕೃಷ್ಣ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ನ ತೃಷಾ ಎಸ್., ಮಧ್ಯ ವಾಲ್ಮೀಕಿ ಆಶ್ರಮ ಶಾಲೆಯ ಸೋಮನಾಥ , ಪಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 2ನೇ ರ‌್ಯಾಂಕ್ ಪಡೆದ ಮೂಡಿಬಿದಿರೆ ಎಕ್ಸ್‌ಲೆಂಟ್ ಪಿ.ಯು. ಕಾಲೇಜಿನ
    ಗುಣಸಾಗರ್ ಡಿ., 5ನೇ ರ‌್ಯಾಂಕ್ ಪಡೆದ ಕೊಡಿಯಾಲ್‌ಬೈಲ್ ಎಕ್ಸ್‌ಪರ್ಟ್ ಪಿ.ಯು.ಕಾಲೇಜಿನ ಶಾಶ್ವತಿ, 10ನೇ ರ‌್ಯಾಂಕ್ ಪಡೆದ ಬಲ್ಮಠ ಸರ್ಕಾರಿ ಹೆಣ್ಣುಮಕ್ಕಳ ಪದವಿಪೂರ್ವ ಕಾಲೇಜಿನ ಅಭಿಲಾಶ ದೋಟ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
    ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಪದವಿಪೂರ್ವ) ಸಿ.ಡಿ. ಜಯಣ್ಣ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಉಪ ನಿರ್ದೇಶಕ ವೆಂಕಟೇಶ್ ಸುಬ್ರಾಯ ಪಟಗಾರ್ ಉಪಸ್ಥಿತರಿದ್ದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಎಚ್.ಆರ್. ವಂದಿಸಿದರು. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts