

ಬೆಂಗಳೂರು: ಈ ವರ್ಷದ ಆರಂಭದಿಂದ ಹೆಚ್ಚುತ್ತಲೇ ಬಂದಿದ್ದ ಕರೊನಾ ಸೋಂಕಿನ ಪ್ರಕರಣಗಳು ಈಗ ಒಂದಷ್ಟು ತಹಬದಿಗೆ ಬಂದಂತೆ ಕಾಣಿಸುತ್ತಿವೆ. ಅದರಲ್ಲೂ ಕಳೆದ ಎರಡು ಮೂರು ದಿನಗಳಿಂದ ದೈನಂದಿನ ಕರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿರುವುದು ಆಶಾದಾಯಕ ಬೆಳವಣಿಗೆ ಆಗಿದೆ.
ಈ ನಡುವೆ ಇಂದಿನ ಕರೊನಾ ಬುಲೆಟಿನ್ ಮತ್ತೊಂದಷ್ಟು ಸಮಾಧಾನವನ್ನು ನೀಡುವಂತಿದೆ. ಏಕೆಂದರೆ ಇಂದು ಹೊಸದಾಗಿ ದೃಢಪಟ್ಟ ಕರೊನಾ ಸೋಂಕಿನ ಪ್ರಕರಣಗಳಿಗಿಂತ ಇವತ್ತು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ದುಪ್ಪಟ್ಟಿಗಿಂತಲೂ ಅಧಿಕವಿದೆ.
ಇಂದು ರಾಜ್ಯದಲ್ಲಿ 33,337 ಮಂದಿಯಲ್ಲಿ ಕರೊನಾ ದೃಢಪಟ್ಟಿದ್ದು, ಆ ಪೈಕಿ ಬೆಂಗಳೂರಿನಲ್ಲೇ 16,586 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,52,132ಕ್ಕೆ ಇಳಿದಿದ್ದರೆ ಪಾಸಿಟಿವಿಟಿ ದರದಲ್ಲೂ ಇಳಿಕೆ ಕಂಡುಬಂದಿದೆ. ನಿನ್ನೆ ಶೇ.20.91 ಇದ್ದ ಪಾಸಿಟಿವಿಟಿ ದರ ಇಂದು ಶೇ. 19.37ಕ್ಕೆ ಇಳಿದಿದೆ. ಅದರಲ್ಲೂ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಇವತ್ತೊಂದೇ ದಿನ 69,902 ಮಂದಿ ಬಿಡುಗಡೆ ಆಗಿದ್ದಾರೆ.