

ತುಮಕೂರು: ಆರೋಪಿಯನ್ನು ಬಂಧಿಸಲು ಕಾರು ತೆಗೆದುಕೊಂಡು ಬಾ ಎಂದು ದೂರುದಾರನಿಗೇ ದಬಾಯಿಸಿದ್ದ ಸಬ್ ಇನ್ಸ್ಟೆಕ್ಟರ್ ದರ್ಬಾರು ಇದೀಗ ಸರ್ಕಲ್ ಇನ್ಸ್ಪೆಕ್ಟರ್ಗೂ ಮುಳುವಾಗಿದೆ.
ಆರೋಪಿಯ ಬಂಧನಕ್ಕೆ ಕೋರಿ ತುಮಕೂರು ಜಿಲ್ಲೆ ದಂಡಿನಶಿವರ ಠಾಣೆಗೆ ಬಂದಿದ್ದ ದೂರುದಾರ ನಾಗೇಂದ್ರಪ್ಪಗೆ, 'ಆರೋಪಿಯನ್ನು ಬಂಧಿಸಬೇಕಿದ್ದರೆ ಬಾಡಿಗೆ ಕಾರು ತೆಗೆದುಕೊಂಡು ಬಾ' ಎಂದು ಸಬ್ ಇನ್ಸ್ಪೆಕ್ಟರ್ ಶಿವಲಿಂಗಯ್ಯ ದಬಾಯಿಸಿ ಸತಾಯಿಸಿದ್ದರು.
ಇದರಿಂದ ಬೇಸತ್ತಿದ್ದ ನಾಗೇಂದ್ರಪ್ಪ ಜ. 13ರಂದು ಸೀದಾ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ಕುಮಾರ್ ಅವರಲ್ಲಿಗೇ ತೆರಳಿ ಅಹವಾಲು ಹೇಳಿಕೊಂಡಿದ್ದರು. ಆಗ ಎಸ್ಪಿ ತಮ್ಮ ಕಾರನ್ನೇ ಕೊಟ್ಟು ದೂರುದಾರರನ್ನು ಆ ಕಾರಿನಲ್ಲಿ ಠಾಣೆಗೆ ಕಳುಹಿಸಿದ್ದಲ್ಲದೆ, ಆರೋಪಿಯನ್ನು ಬಂಧಿಸುವಂತೆ ಎಸ್ಐಗೆ ಕರೆ ಮಾಡಿ ಖಡಕ್ ಎಚ್ಚರಿಕೆಯನ್ನೂ ಕೊಟ್ಟಿದ್ದರು.
ಇದನ್ನೂ ಓದಿ: ಹೃದಯಾಘಾತಕ್ಕೀಡಾಗಿ 24 ವರ್ಷದ ಪೈಲ್ವಾನ್ ಸಾವು!
ಈಗ ಅದೇ ಪ್ರಕರಣ ತುರುವೇಕೆರೆ ಸರ್ಕಲ್ ಇನ್ಸ್ಪೆಕ್ಟರ್ ನವೀನ್ಗೂ ಮುಳುವಾಗಿದೆ. ಪ್ರಕರಣ ಸಂಬಂಧ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ನವೀನ್ ಅವರನ್ನು ಅಮಾನತು ಮಾಡಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.