

ತುಮಕೂರು: ತಿಪಟೂರು ನಗರಸಭೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಜೆಡಿಎಸ್ ಪಕ್ಷವು ಕಾಂಗ್ರೆಸ್‌ಗೆ ಕೈಕೊಟ್ಟಿದೆ.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ 11 ಸದಸ್ಯ ಬಲವುಳ್ಳ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಜೆಡಿಎಸ್ ಚಿಹ್ನೆ ಮೇಲೆ ಗೆದ್ದಿದ್ದ ನಾಲ್ವರು ಸದಸ್ಯರು ಬೇಷರತ್ ಆಗಿ ಬಿಜೆಪಿ ಬೆಂಬಲಿಸುವ ಮೂಲಕ ಹಳೆಯ ‘ದೋಸ್ತಿ’ಗಳು ಮತ್ತೆ ಒಂದಾಗಿದ್ದು ವಿಶೇಷವಾಗಿತ್ತು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ರಾಮಮೋಹನ್ 22-10 ಮತಗಳಿಂದ ಕಾಂಗ್ರೆಸ್‌ನ ಮಲ್ಲೇಶ್ ವಿರುದ್ಧ ಗೆದ್ದುಬೀಗಿದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಸೊಪ್ಪು ಗಣೇಶ್ ಏಕೈಕ ನಾಮಪತ್ರ ಸಲ್ಲಿಸಿದ್ದು ಅವಿರೋಧ ಆಯ್ಕೆಯಾದರು.
ಮ್ಯಾಜಿಕ್ ಸಂಖ್ಯೆ 16!: 31 ಸಂಖ್ಯಾಬಲವುಳ್ಳ ನಗರಸಭೆಯಲ್ಲಿ ಜೆಡಿಎಸ್‌ನ ಓರ್ವ ಸದಸ್ಯರು ನಿಧನ ಹೊಂದಿರುವುದರಿಂದ ಅಧಿಕಾರ ಗದ್ದುಗೆ ಹಿಡಿಯಲು 16 ಮತಗಳ ಅವಶ್ಯಕತೆಯಿತ್ತು. 11 ಸ್ಥಾನಗಳಿಸಿದ್ದ ಬಿಜೆಪಿಗೆ ಸಂಸದರ, ಶಾಸಕರ ಮತ ಸೇರಿ 13 ಸಂಖ್ಯಾಬಲ ಇತ್ತಾದರೂ ಮ್ಯಾಜಿಕ್ ನಂಬರ್‌ಗೆ ಇನ್ನೂ 3 ಮತಗಳ ಕೊರತೆ ಇತ್ತು. ಜೆಡಿಎಸ್‌ನ ನಾಲ್ವರು ಸದಸ್ಯರು ಬಿಜೆಪಿ ಬೆಂಬಲಿಸಿದ್ದರಿಂದ ನಿರಾಯಾಸವಾಗಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಕಂಡಿತು. 6 ಪಕ್ಷೇತರ ಸದಸ್ಯರಲ್ಲಿ ಐವರು ಬಿಜೆಪಿಯನ್ನು ಬೆಂಬಲಿಸಿದರು. ಕಾಂಗ್ರೆಸ್-9 ಸದಸ್ಯ ಬಲಹೊಂದಿದ್ದು, ಓರ್ವ ಪಕ್ಷೇತರ ಸದಸ್ಯರು ಕೈ ಹಿಡಿದಿದ್ದಾರೆ.
ಪಕ್ಷೇತರರು ಹಾಗೂ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವ ಕಾಂಗ್ರೆಸ್ ಕನಸು ನುಚ್ಚುನೂರಾಯಿತು.