

ಮೈಸೂರು: ಸೆಲ್ಫಿ ಹುಚ್ಚಿನಿಂದಾಗಿ ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ರಾಜ್ಯದಲ್ಲಿ ಮತ್ತೊಂದು ಅಂಥದ್ದೇ ಪ್ರಕರಣ ನಡೆದಿದ್ದು, ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗಿದ್ದವ ಕಣ್ಣೆದುರೇ ಇಬ್ಬರು ಗೆಳೆಯರನ್ನು ಕಳೆದುಕೊಂಡಂತಾಗಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೆಂಚನ ಕೆರೆಯಲ್ಲಿ ಈ ದುರಂತ ಸಂಭವಿಸಿದೆ. ಅಬ್ದುಲ್ಲಾ (21) ಹಾಗೂ ತನ್ವೀರ್ (20) ಎಂಬ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿ ಮೃತಪಟ್ಟಿದ್ದಾರೆ. ಜತೆಗಿದ್ದ ಇನ್ನೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕೆರೆ ಏರಿ ಮೇಲೆ ಈ ಮೂವರು ಗೆಳೆಯರು ಸೆಲ್ಫಿ ತೆಗೆದುಕೊಳ್ಳಲು ನಿಂತಿದ್ದರು. ಇನ್ನೇನು ಸೆಲ್ಫಿ ಕ್ಲಿಕ್ಕಿಸಬೇಕು ಎನ್ನುವಷ್ಟರಲ್ಲಿ ಅಬ್ದುಲ್ಲಾ ಹಾಗೂ ತನ್ವೀರ್ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಸೆಲ್ಫಿ ತೆಗೆಯುತ್ತಿದ್ದವ ಬಚಾವಾಗಿದ್ದಾನೆ. ಶವಗಳನ್ನು ಹುಣಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.