

ಆನೇಕಲ್: ರಾಜ್ಯ ರಾಜಧಾನಿ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನಲ್ಲಿ ಮಕ್ಕಳನ್ನು ಕೊಂದು ತಂದೆ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಪತ್ನಿ ಶೋಕಿಗೆ ಮಕ್ಕಳನ್ನು ಕೊಂದು ಪತಿ ನೇಣಿಗೆ ಶರಣಾಗಿರುವುದಾಗಿ ತಿಳಿದು ಬಂದಿದ್ದು ಮೃತ ದುರ್ದೈವಿಗಳನ್ನು ಹರೀಶ್ ( 35) ಪ್ರಜ್ವಲ್(6) ರಿಷಬ್(4) ಎಂದು ಗುರುತು ಹಿಡಿಯಲಾಗಿದೆ.
ಘಟನೆ ಮೇ 10ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಹರೀಶ್ ತನ್ನ ಸ್ನೇಹಿತನಿಗೆ ಕರೆ ಮಾಡಿದ್ದು ಕಾಲವಾದ ನಂತರ ಬರಬೇಕಾಗಿರುವ ಹಣ ಹಾಗೂ ಎಲ್ಐಸಿ ಬಾಂಡ್ಅನ್ನು ಪತ್ನಿಗೆ ನೀಡುವಂತೆ ಹೇಳಿದ್ದಾರೆ.
ಹರೀಶ್ ಕರೆ ಮಾಡಿರುವ ಲೊಕೇಷನ್ ಬಗ್ಗೆ ಸ್ನೇಹಿತ ಹುಡುಕಾಟ ನಡೆಸಿದ್ದು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡಿದ ಎರಡು ದಿನಗಳ ಬಳಿಕ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪ ಸಮೀಪದ ನಿರ್ಮಣ ಬಡಾವಣೆಯಲ್ಲಿ ಇರುವುದು ತಿಳಿದು ಬಂದಿದೆ.
2007ರಲ್ಲಿ ಹರೀಶ್ ತನ್ನ ಅಕ್ಕನ ಮಗಳಾದ ಅನನ್ಯಳನ್ನು ಪ್ರೀತಿಸಿ ಮದುವೆಯಾಗಿದ್ದರು. ಬೆಂಗಳೂರಿನ ಗಾರೆಬಾವಿ ಪಾಳ್ಯದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ವಿವಾಹದ ಬಳಿಕ ಪತ್ನಿಯ ಹೈ-ಪೈ ಜೀವನದ ವಿಚಾರವಾಗಿ ದಂಪತಿಗಳ ನಡುವೆ ಗಲಾಟೆಯಾಗುತ್ತಿತ್ತು. ಈ ವಿಚಾರವಾಗಿ 2015ರಲ್ಲಿ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನವು ಸಹ ಆಗಿತ್ತು.
2021ರಲ್ಲಿ ದಂಪತಿಗಳು ಪ್ರತ್ಯೇಕವಾಗಿ ಮನೆ ಮಾಡಿ ವಾಸಿಸುತ್ತಿದ್ದರು. ಕೆಲ ದಿನಗಳ ನಂತರ ಪತ್ನಿ ಅನನ್ಯ ಪರ ಪುರುಷನೊಂದಿಗೆ ಪರಾರಿಯಾಗಿದ್ದಳು.
ತಬ್ಬಲಿಯಾದ ಇಬ್ಬರು ಮಕ್ಕಳನ್ನು ಪೋಷಿಸುತ್ತಾ ಹರೀಶ್ ಜೀವನ ಸಾಗಿಸುತ್ತಿದ್ದರು. ಈ ವೇಳೆ ಪತ್ನಿ ಹಣ ನೀಡುವಂತೆ ಪತಿಗೆ ಕಿರುಕುಳ ನೀಡುತ್ತಿದ್ದಳು ಎಂದು ತಿಳಿದು ಬಂದಿದೆ.
ಕೆಲಸದ ಜೊತೆಗೆ ಮಕ್ಕಳ ಪೋಷಣೆ ಹಾಗು ಪತ್ನಿಯ ಕಿರುಕುಳಕ್ಕೆ ಬೇಸತ್ತಿದ್ದ ಹರೀಶ್ ಮೇ 10ರಂದು ನೇಣಿಗೆ ಶರಣಾಗಿದ್ದಾರೆ.