

ಬೆಂಗಳೂರು: ಆಭರಣ ಮಳಿಗೆ ಕಳ್ಳತನ ಮಾಡುವುದು ಹೇಗೆ ಎಂದು ಯೂ ಟ್ಯೂಬ್‌ನಲ್ಲಿ ಸರ್ಚ್ ಮಾಡಿ ನೋಡಿ ಕಲಿತು ಕಳ್ಳತನ ಮಾಡಿದ್ದ ಮೂವರನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಮೂಲದ ಸ್ಯಾಮ್ಸನ್, ಮಹೇಂದ್ರ ಮತ್ತು ನೀಲಕಂಠ ಬಂಧಿತರು. ಇಂದಿರಾನಗರದ ಸಿಎಂಎಚ್ ರಸ್ತೆಯ ಮೀನಾ ಜ್ಯುವೆಲರಿ ಮಳಿಗೆ ದೋಚಿದ್ದರು. ಆಭರಣ ಮಳಿಗೆ ಮಾಲೀಕ ಕಿಶನ್ ಸುನಾರ್ ಎಂಬಾತ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿ 60 ಲಕ್ಷ ರೂ. ಮೌಲ್ಯದ 1.315 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೂವರು ಸ್ನೇಹಿತರು ಕೆಲ ವರ್ಷಗಳ ಹಿಂದೆ ದುಡಿಮೆ ಅರಸಿ ಬೆಂಗಳೂರಿಗೆ ಬಂದಿದ್ದರು. ಇಂದಿರಾನಗರ ಮತ್ತು ಬೊಮ್ಮನಹಳ್ಳಿಯಲ್ಲಿ ಮಹೇಂದ್ರ ಹೋಟೆಲ್ ಆರಂಭಿಸಿದ್ದ. ನೀಲಕಂಠ ಮರಳು ವ್ಯಾಪಾರ ಮತ್ತು ಸ್ಯಾಮ್ಸನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ಕರೊನಾ ಪಿಡುಗಿನಿಂದಾಗಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರು. ಪ್ರತಿಯೊಬ್ಬರೂ 15ರಿಂದ 30 ಲಕ್ಷ ರೂ. ವರೆಗೂ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಚೀನಾ ಆ್ಯಪ್‌ನಲ್ಲಿ ಸಾಲ ಪಡೆದು ತೀರಿಸಲಾಗದೆ ಮತ್ತಷ್ಟು ಕಷ್ಟಕ್ಕೆ ಸಿಲುಕಿದ್ದರು. ಹೇಗಾದರೂ ಮಾಡಿ ಹಣ ಸಂಪಾದಿಸಿ ಸಾಲದಿಂದ ಮುಕ್ತಿಗೊಳ್ಳಬೇಕು ಎಂದು ನಿರ್ಧರಿಸಿದ್ದರು.
ಶೀಘ್ರ ಹಣ ಸಂಪಾದನೆಗಾಗಿ ಕಳ್ಳತನ ಮಾಡಲು ತೀರ್ಮಾನಿಸಿದ್ದ ಇವರಿಗೆ ಇಂದಿರಾನಗರ ಸಿಎಂಎಚ್ ರಸ್ತೆಯ ಮೀನಾ ಜ್ಯುವೆಲರಿ ಮಳಿಗೆ ಕಾಣಿಸಿತ್ತು. ಆದರೆ ಕಳ್ಳತನದ ಬಗ್ಗೆ ಗಂಧಗಾಳಿ ಗೊತ್ತಿರದ ಆರೋಪಿಗಳು, ಆಭರಣ ಮಳಿಗೆಗೆ ಕನ್ನ ಹಾಕುವ ಕುರಿತು ಯೂ ಟ್ಯೂಬ್ ಚಾನೆಲ್ಗಳಲ್ಲಿ ವಿಡಿಯೋಗಳನ್ನು ನೋಡಿ ತರಬೇತಿ ಪಡೆದಿದ್ದರು. ಮಳೆ ಬರುತ್ತಿದ್ದಾಗ ಜನರ ಓಡಾಟ ಕಡಿಮೆ ಇರುತ್ತದೆ, ಅಂದೇ ಕೃತ್ಯ ಎಸಗಬೇಕು ಎಂದು ನಿರ್ಧರಿಸಿ ಆಭರಣ ಮಳಿಗೆಗೆ ಭೇಟಿ ಕೊಟ್ಟು ಅಲ್ಲಿನ ಭದ್ರತೆ ಕುರಿತು ಮಾಹಿತಿ ಕಲೆ ಹಾಕಿದ್ದರು. ಸೆನ್ಸರ್, ಸಿಸಿ ಕ್ಯಾಮರಾ ಮತ್ತು ಅಲಾರ್ಮ್ ಇರಲಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡಿದ್ದರು. ಕೃತ್ಯಕ್ಕೆ ಬೇಕಾದ ಆಯುಧಗಳನ್ನು ಖರೀದಿಸಿದ್ದರು. ಸ್ನೇಹಿತರ ಬಳಿ ಕಾರು ಪಡೆದು ನಂಬರ್ ಪ್ಲೇಟ್ಗೆ ಕಪ್ಪು ಬಣ್ಣ ಬಳಿದಿದ್ದರು.
ಅ.14ರಂದು ಸಿಎಂಎಚ್ ರಸ್ತೆಯ ಮೀನಾ ಜ್ಯುವೆಲರಿ ಮಳಿಗೆ ಆರೋಪಿಗಳು ಕಾರಿನಲ್ಲಿ ಬಂದು ಬೀಗ ಒಡೆದು ಒಳ ನುಗ್ಗಿ 1.315 ಕೆಜಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದರು. ಶಾಪ್ ಮಾಲೀಕ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಮಾಲೀಕ ಕೊಟ್ಟ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಮಾಹಿತಿ ಕಲೆ ಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರಾಟಕ್ಕೆ ಪೀಕಲಾಟ: ಆಭರಣ ಮಳಿಗೆ ದೋಚಿದ ಆರೋಪಿಗಳು ಕಾರಿನಲ್ಲಿ ಗೋವಾಗೆ ತೆರಳಿದ್ದರು. ಕದ್ದ ಚಿನ್ನ ಅಲ್ಲಿ ಮಾರಾಟ ಮಾಡಲು ಸಾಧ್ಯ ಆಗುವುದಿಲ್ಲ. ಕೈತುಂಬ ಚಿನ್ನ ಇದ್ದರೂ ಹಣಕ್ಕೆ ಪರದಾಟ ನಡೆಸಿ ಕೊನೆಗೆ ಬೆಂಗಳೂರಿನಲ್ಲಿ ಚಿನ್ನ ಕರಗಿಸಿ ಮಾರಾಟ ಮಾಡಲು ನಿರ್ಧರಿಸಿ ವಾಪಸ್ ಆಗುತ್ತಿದ್ದರು. ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದ ಪೊಲೀಸರು, ಆಭರಣ ಮಳಿಗೆ ಅಕ್ಕಪಕ್ಕದ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಎಲ್ಲೆಡೆ ಬಲೆಬೀಸಿದ್ದರು. ಅಷ್ಟರಲ್ಲಿ ಹೆದ್ದಾರಿಯ ಟೋಲ್‌ನಲ್ಲಿ ಕಾರು ಪಾಸ್ ಆಗಿರುವುದು ಖಚಿತವಾಗುತ್ತದೆ. ಆರೋಪಿಗಳ ಬೆನ್ನು ಹತ್ತಿದ್ದ ಪೊಲೀಸರು, ಗೋವಾದಿಂದ ಬೆಂಗಳೂರಿಗೆ ವಾಪಸ್ ಬರುವಾಗ ತುಮಕೂರಿನ ಕ್ಯಾತ್ಸಂದ್ರ ಬಳಿ ಕಾರನ್ನು ಸುತ್ತುವರಿದು ಆರೋಪಿಗಳನ್ನು ಬಂಧಿಸಿ ಕದ್ದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.