ಯುವತಿಯ ಬರ್ಬರ ಹತ್ಯೆಗೆ ಸ್ನೇಹಿತನಿಗೆ ಸಾಥ್​ ನೀಡಿದ ಆರೋಪಿಗಳಿಬ್ಬರ ಬಂಧನ

Girl Murder
Published on

ಬೆಂಗಳೂರು: ಯುವತಿಯ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಗಲ್ ಪ್ರೇಮಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

17 ವರ್ಷದ ಯುವತಿಯನ್ನು ಪ್ರಕಾಶನಗರದ ಪ್ರಿಯಕರ ಮುನಿರಾಜು ಅಲಿಯಾಸ್ ಆದಿಗೌಡ ಸೋಮವಾರ ಸಂಜೆ ಹತ್ಯೆ ಮಾಡಿದ್ದ. ಇದಕ್ಕೆ ಸಹಕರಿಸಿದ ಆರೋಪದ ಮೇಲೆ ಆತನ ಸಹಚರರಾದ ಕಿರಣ್ ಹಾಗೂ ಚಂದ್ರಶೇಖರ್ ಎಂಬುವರನ್ನು ಇಂದು ಬಂಧಿಸಲಾಗಿದೆ.

ಮುನಿರಾಜು ಸೋಮವಾರ ರಾತ್ರಿ ಬಲವಂತವಾಗಿ ಪ್ರೇಯಸಿಗೆ ಅರಿಶಿಣದ ದಾರದ ತಾಳಿ ಕಟ್ಟಿ ಮದುವೆಯಾಗಲು ಯತ್ನಿಸಿದಾಗ ವಿರೋಧ ವ್ಯಕ್ತಪಡಿಸಿದ್ದಾಳೆ. ಕೆರಳಿದ ಮುನಿರಾಜು ಚೂರಿಯಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 6ಕ್ಕೂ ಹೆಚ್ಚು ಪ್ರಕರಣಗಳು ಮುನಿರಾಜು ಮೇಲಿವೆ.

ಪ್ರಕಾಶನಗರದಲ್ಲೇ ಯುವತಿಯ ಪಾಲಕರೂ ವಾಸಿಸುತ್ತಿದ್ದು, ಒಂದೇ ಏರಿಯಾದಲ್ಲಿ ವಾಸವಾಗಿದ್ದರಿಂದ ಆಕೆಗೆ ಮುನಿರಾಜು ಪರಿಚಯವಿತ್ತು. 3 ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಮುನಿರಾಜು ನಡವಳಿಕೆಯಿಂದ ಬೇಸತ್ತಿದ್ದ ಯುವತಿ, ಆತನಿಂದ ದೂರವಾಗಲು ಮುಂದಾಗಿದ್ದಳು. ಇದರಿಂದ ಕುಪಿತಗೊಂಡಿದ್ದ ಆತ, ಆಕೆಯ ಮನವೊಲೈಕೆಗೆ ಯತ್ನಿಸಿದ್ದ.

ಇದರ ನಡುವೆ ಮಗಳು ನಾಪತ್ತೆಯಾಗಿದ್ದರಿಂದ ಕಂಗಾಲಾಗಿದ್ದ ಪಾಲಕರು ರಾಜಾಜಿನಗರ ಠಾಣೆಗೆ ದೂರು ನೀಡಿದ್ದರು. ಅಲ್ಲದೆ, ಮಗಳನ್ನು ಮುನಿರಾಜು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದರು. ಈ ಬಗ್ಗೆ ರಾಜಾಜಿನಗರ ಪೊಲೀಸರು ತನಿಖೆ ಶುರು ಮಾಡಿದ್ದರು. ಅಷ್ಟರಲ್ಲಿ ಗಿರಿನಗರ ಪೊಲೀಸರಿಗೆ ಹೊಸಕೆರೆ ಸಮೀಪದ ದ್ವಾರಕನಗರದಲ್ಲಿ ಕೊಲೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net