ನೌಕರಿ ಕೊಟ್ಟವರನ್ನೇ ಕೊಲೆ ಮಾಡಲು ಯತ್ನ; ಸಲೂನ್​ ಶಾಪ್​ ಮಾಲೀಕ ಹಾಗೂ ತಂದೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

Handcuffed
Person in handcuffs
Published on

ಬೆಂಗಳೂರು: ಅಶ್ಲೀಲ ಪದದಿಂದ ನಿಂದಿಸಿದ ನೌಕರರನ್ನು ಪ್ರಶ್ನಿಸಲು ಮನೆ ಬಳಿಗೆ ಹೋದ ಸಲೂನ್ ಶಾಪ್ ಮಾಲೀಕ, ಸಹೋದರ ಹಾಗೂ ತಂದೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಕೊಲೆ ಯತ್ನ ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಸುಂಕದಕಟ್ಟೆಯ ಕೆಬ್ಬೆಹಳ್ಳದ ವಿಜಯ್ ಕುಮಾರ್, ಮೋಹನ್ ಮತ್ತು ಚೇತನ್ ಬಂಧಿತರು. ಸೆ.23ರಂದು ಜಯರಾಮ್ ಮತ್ತು ಇವರ ಮಕ್ಕಳಾದ ಲಕ್ಷ್ಮೀ ಪ್ರಕಾಶ್, ಚೆನ್ನಕೇಶವ ಎಂಬುವರ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅನ್ನಪೂರ್ಣೇಶ್ವರಿನಗರ ಮತ್ತು ಅಂಜನಾನಗರದಲ್ಲಿ ಗಾಯಾಳು ಚೆನ್ನಕೇಶವ ಇವರ ಸಹೋದರ ಲಕ್ಷ್ಮೀ ಪ್ರಕಾಶ್ ಸಲೂನ್ ಶಾಪ್ ನಡೆಸುತ್ತಿದ್ದಾರೆ. ಆರೋಪಿ ಚೇತನ್ ಸೇರಿ 15 ಯುವಕರು ಕೆಲಸ ಮಾಡುತ್ತಿದ್ದಾರೆ. ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದ ಚೇತನ್, ಒಮ್ಮೆ ರಜೆ ಮಾಡಿದರೆ ನಾಲ್ಕೈದು ತಿಂಗಳು ಬರುತ್ತಿರಲಿಲ್ಲ. ಗ್ರಾಹಕರ ಜತೆ ಒಡನಾಟ ಚೆನ್ನಾಗಿದ್ದ ಕಾರಣ ಚೇತನ್‌ನನ್ನು ಮಾಲೀಕರು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದರು.

ಇತ್ತೀಚೆಗೆ ಊರಿನಲ್ಲಿ ಚಿಕ್ಕಪ್ಪ ಸಲೂನ್ ಶಾಪ್ ತೆರೆಯುತ್ತಿದ್ದು, ಕೆಲಸಕ್ಕೆ ಬರುವುದಿಲ್ಲ 15 ದಿನದ ಸಂಬಳ ಕೊಡುವಂತೆ ಚೇತನ್ ಕೇಳಿದ್ದ. ಅದಕ್ಕೆ ಮಾಲೀಕರು, ಪ್ರತಿತಿಂಗಳು ಎಲ್ಲರಿಗೂ ವೇತನ ಕೊಡುವಾಗ ನಿನಗೂ ಕೊಡುವುದಾಗಿ ಹೇಳಿ ಕಳುಹಿಸಿದ್ದರು. ಸೆ.22ರ ರಾತ್ರಿ ಮಾಲೀಕರ ಮೊಬೈಲ್‌ಫೋನ್​ಗೆ ಕರೆ ಮಾಡಿ ಅಶ್ಲೀಲ ಪದಗಳಿಂದ ನಿಂದಿಸಿದ್ದ. ಇದನ್ನು ತಿಳಿದ ಚೆನ್ನಕೇಶವ ಅವರ ತಂದೆ ನಿವೃತ್ತ ಅಧಿಕಾರಿ ಜಯರಾಮ್ ಅವರು ಚೇತನ್‌ಗೆ ಕೊಡಬೇಕಿದ್ದ ಹಣ ಕೊಟ್ಟು ಬರೋಣ ಎಂದು ಮಕ್ಕಳೊಂದಿಗೆ ಆರೋಪಿ ಮನೆ ಬಳಿಗೆ ಹೋಗಿದ್ದರು.

ಅಷ್ಟೊತ್ತಿಗೆ ಚೇತನ್ ತನ್ನ ಸಹೋದರ ಮೋಹನ್ ಮತ್ತು ಮಾವ ವಿಜಯಕುಮಾರ್‌ಗೆ ವಿಷಯ ತಿಳಿಸಿದ್ದ. ಮನೆ ಬಳಿಗೆ ಅಪ್ಪ ಮತ್ತು ಮಕ್ಕಳು ಬರುತ್ತಿದಂತೆ ಈ ಮೂವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಜಯರಾಮ್ ತಲೆಗೆ ಮತ್ತು ಲಕ್ಷ್ಮೀ ಪ್ರಕಾಶ್‌ಗೂ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಚೆನ್ನಕೇಶವ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾಮಾಕ್ಷಿಪಾಳ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net