

ಉಳ್ಳಾಲ: ಇಲ್ಲಿನ ತೊಕ್ಕೊಟ್ಟು ಹಳೇ ಚೆಕ್‌ಪೋಸ್ಟ್ ಬಳಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿರುವ ಸಾರ್ವಜನಿಕ ಕೊರಗಜ್ಜನ ಕಟ್ಟೆಯಲ್ಲಿ ಶನಿವಾರ ನಡೆದ ಹರಕೆಯ ಕೋಲದಲ್ಲಿ ಧಾರವಾಡ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಕುಟುಂಬ ಭಾಗವಹಿಸಿತು.
ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ರಾಜಕೀಯವಾಗಿ ಎದುರಾಗಿರುವ ಸಮಸ್ಯೆಗಳ ನಿವಾರಣೆಗಾಗಿ ಕರಾವಳಿಯ ಕಾರಣಿಕ ದೈವಕ್ಕೆ ಮೊರೆಹೋಗಿದ್ದ ಕುಲಕರ್ಣಿ, ಕೋಲ ಹರಕೆ ಹೊತ್ತು ಮೊದಲೇ ದಿನ ನಿಗದಿಪಡಿಸಿಕೊಂಡಿದ್ದರು. ಅದರಂತೆ ಶನಿವಾರ ಸಂಜೆಯೇ ತೊಕ್ಕೊಟ್ಟಿಗೆ ಆಗಮಿಸಿದ್ದ ಅವರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದರು.
ಬಳಿಕ ರಾತ್ರಿ ನಡೆದ ಕೋಲ ಸೇವೆಯಲ್ಲಿ ಪತ್ನಿ, ಮಕ್ಕಳು ಭಾಗವಹಿಸಿದ್ದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಸಹಿತ ಮುಖಂಡರು ಜತೆಯಲ್ಲಿದ್ದರು.