ವಿಜಯವಾಣಿ ಸುದ್ದಿಜಾಲ ಕಡಬ
ತಾಲೂಕು ಕೇಂದ್ರ ಕಡಬದಲ್ಲಿ ಆರಂಭಗೊಳ್ಳಬೇಕಿದ್ದ ಬಹು ನಿರೀಕ್ಷೆಯ ಇಂದಿರಾ ಕ್ಯಾಂಟೀನ್ ಪ್ರಸ್ತಾವನೆಗಷ್ಟೇ ಸೀಮಿತವಾಗಿರುವುದು ಸ್ಥಳೀಯರಲ್ಲಿ ನಿರಾಸೆ ಮೂಡಿಸಿದೆ.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕಡಬ ಸಹಿತ ರಾಜ್ಯದ ವಿವಿಧೆಡೆ 188 ಹೊಸ ಇಂದಿರಾ ಕ್ಯಾಂಟೀನ್‌ಗಳು ಕಾರ್ಯ ಆರಂಭಿಸಲಿವೆ ಎಂದು ಪ್ರಕಟಿಸಲಾಗಿತ್ತು. ಕಡಬ ಹೊಸ ತಾಲೂಕು ಆಡಳಿತ ಸೌಧ ಬಳಿಯಿರುವ ಎಪಿಎಂಸಿ ಪ್ರಾಂಗಣಕ್ಕೆ ಹೊಂದಿಕೊಂಡಿರುವಂತೆ ಇರುವ 5.5 ಸೆಂಟ್ಸ್ ಜಮೀನು ಇಂದಿರಾ ಕ್ಯಾಂಟೀನ್‌ಗೆ ನಿಗದಿಪಡಿಸಿದ್ದರೂ, ಜಮೀನು ಹಾಗೆಯೇ ಖಾಲಿ ಬಿದ್ದಿದೆ. ಕ್ಯಾಂಟೀನ್ ಆರಂಭಿಸಲು ಉದ್ದೇಶಿಸಿರುವ ಜಾಗದ ಅಸುಪಾಸಿನಲ್ಲಿ ತಾಲೂಕು ಕಚೇರಿ ಹಾಗು ಎಪಿಎಂಸಿ ಪ್ರಾಂಗಣವಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯ, ಉಪನೊಂದಣಿ ಕಚೇರಿಗಳು ಇದೇ ಪರಿಸರದಲ್ಲಿ ಆರಂಭಗೊಳ್ಳಲಿದೆ. ಹಾಗಾಗಿ ಈ ಪ್ರದೇಶ ಜನನಿಬಿಡವಾಗಲಿದೆ. ಈ ಕಾರಣಕ್ಕೆ ಕ್ಯಾಂಟೀನ್ ಅಲ್ಲೇ ತೆರೆಯುವುದು ಸೂಕ್ತವೆಂದು ನಿರ್ಧರಿಸಲಾಗಿತ್ತು.
ಶೀಘ್ರ ಆರಂಭಕ್ಕೆ ಆಗ್ರಹ
ಬಡವರ ಜೇಬಿಗೆ ಹೊರೆಯಾಗದಂತೆ ಹಸಿವನ್ನು ತಣಿಸುವ ಇಂದಿರಾ ಕ್ಯಾಂಟೀನ್ ಕಡಬದಲ್ಲಿ ಶೀಘ್ರ ತೆರೆಯಲಿ ಎನ್ನುವುದು ಸ್ಥಳೀಯರ ಆಗ್ರಹ. ತಾಲೂಕು ಕೇಂದ್ರ ಕಡಬಕ್ಕೆ ತಾಲೂಕು ವ್ಯಾಪ್ತಿಯ 42 ಗ್ರಾಮಗಳ ಜನರು ವಿವಿಧ ಕೆಲಸಗಳಿಗೆ ಭೇಟಿ ನೀಡುತ್ತಾರೆ. ಕಡಬದಲ್ಲಿ ತಾಲೂಕು ಕಚೇರಿ ಬಳಿಯೇ ತೆರೆಯಲು ಉದ್ದೇಶಿಸಿರುವುದರಿಂದ ಬೇರೆ-ಬೇರೆೆ ಗ್ರಾಮಗಳಿಂದ ಕಚೇರಿ ಕೆಲಸಗಳಿಗೆ ಬರುವ ಜನರಿಗೆ ಅನುಕೂಲವಾಗಲಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರಾಜಕೀಯ ನಾಯಕರು ಈ ಕುರಿತು ಮುತುವರ್ಜಿ ವಹಿಸಿ ಕಡಬದಲ್ಲಿ ಇಂದಿರಾ ಕ್ಯಾಂಟೀನ್ ಕಾರ‌್ಯಾರಂಭಿಸುವಲ್ಲಿ ಪ್ರಯತ್ನಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.
ಇಂದಿರಾ ಕ್ಯಾಂಟೀನ್‌ನ್ನು ಪ್ರತಿ ತಾಲೂಕು ಕೇಂದ್ರದಲ್ಲಿ ಆರಂಭಿಸಲು ಸರ್ಕಾರ ನಿರ್ಧರಿಸಿರುವುದರಿಂದ, ಕಡಬ ಕೂಡ ಆಯ್ಕೆಯಾಗಿದೆ. ಈ ಬಗ್ಗೆ ಸ್ಥಳ ನಿಗದಿಮಾಡಿ ಪ್ರಾದೇಶಿಕ ಆಹಾರ ಪಟ್ಟಿ ತಯಾರಿಸಿ ಸರ್ಕಾರಕ್ಕೆ ವರದಿ ನೀಡಲಾಗಿದೆ. ಮಂಜೂರಾತಿ ಇನ್ನಷ್ಟೇ ಸಿಗಬೇಕಿದೆ.
– ಲೀಲಾವತಿ ಇ., ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ