

ಬೆಳಗಾವಿ: 'ಕರ್ನಾಟಕದ ಲೋಕಪ್ರಿಯ ಮುಖ್ಯಮಂತ್ರಿ ಯಡಿಯೂರಪ್ಪ ಜೀ..'- ಹೀಗೆನ್ನುತ್ತಲೇ ಬೆಳಗಾವಿಯ ಜನಸೇವಕ ಸಭೆಯಲ್ಲಿ ಭಾಷಣ ಮಾಡಿದ ಕೇಂದ್ರ ಗೃಹಸಚಿವ ಅಮಿತ್ ಷಾ, ರಾಜ್ಯದ ಜನರಿಗೆ, ಕರ್ನಾಟಕ ಸರ್ಕಾರಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತು ಯಡಿಯೂರಪ್ಪ ಆಡಳಿತದ ಮೇಲೆ ಕರ್ನಾಟಕದ ಜನತೆ ನಂಬಿಕೆ ಇಟ್ಟಿದ್ದಾರೆ. ಎಲ್ಲ ಚುನಾವಣೆಗಳಲ್ಲೂ ಬಿಜೆಪಿಯ ಕೈ ಹಿಡಿದಿದ್ದೀರಿ. ಪಂಚಾಯತ್ ಚುನಾವಣೆಯಲ್ಲಿ ಇತಿಹಾಸ ಬರೆದ ಬೆಳಗಾವಿ ಜನತೆಗೆ ಧನ್ಯವಾದ. ಮಕರ ಸಂಕ್ರಾಂತಿ ದೇಶದ ಅಭಿವೃದ್ಧಿಯ ದಿಕ್ಕನ್ನು ಸೂಚಿಸಿದೆ ಎಂದು ಅಮಿತ್ ಷಾ ಶ್ಲಾಘಿಸಿದರು.
ಕಾಶ್ಮೀರ ಸಮಸ್ಯೆ ಬಗೆಹರಿಸಲು ನೆಹರು ಮತ್ತು ಸಿಂಗ್ ಕೈಯಲ್ಲಿ ಆಗಲಿಲ್ಲ. ಆದರೆ ನಾವು ಕೊಟ್ಟ ಮಾತಿನಂತೆ ನಮ್ಮ ಪ್ರಧಾನಿ ನಡೆದುಕೊಂಡರು. ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಮಾಡುತ್ತಿದ್ದೇವೆ. ಮುಸ್ಲಿಂ ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯ ತಪ್ಪಿಸಲು ಟ್ರಿಪಲ್ ತಲಾಕ್ ರದ್ದು ಮಾಡಿದ್ದೇವೆ. ಸರ್ಜಿಕಲ್ ಸ್ಟ್ರೈಕ್ ಮಾಡಿ ಭಯೋತ್ಪಾದಕರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದೇವೆ.. ಇದು ಸಿಂಗ್ ಕೈಯಿಂದ ಸಾಧ್ಯವಿತ್ತಾ? ಎಂದು ಷಾ ಪ್ರಶ್ನಿಸಿದ್ದಾರೆ.
ಪ್ರತಿ ಮನೆಗೂ ಗ್ಯಾಸ್ ತಲುಪಿಸಿದ್ದೇವೆ. ಕ್ಯಾನ್ಸರ್, ಹಾರ್ಟ್ ಅಟ್ಯಾಕ್ಗೆ ಹೆದರುವ ಅಗತ್ಯ ಇಲ್ಲ. ನರೇಂದ್ರ ಮೋದಿ ಆರೋಗ್ಯ ಯೋಜನೆ ಜಾರಿ ಮಾಡಿದ್ದಾರೆ. ಆಯುಷ್ಮಾನ್ ಭಾರತ್ ಜಾರಿ ಮಾಡಿದ್ದಾರೆ. ಬಡತನದ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ ಇದೆಲ್ಲ ಯಾಕೆ ಮಾಡಲಿಲ್ಲ? ಕಾಂಗ್ರೆಸ್ನವರು ಟೀಕೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಕರೋನ ನಿಯಂತ್ರಣ ಮತ್ತು ಲಸಿಕೆ ವಿತರಣೆ ವಿಚಾರದಲ್ಲೂ ಟೀಕೆ ಮಾಡುತ್ತಾರೆ ಎಂದ ಷಾ, ಅಭಿವೃದ್ಧಿ ವಿಚಾರದಲ್ಲಿ ಟೀಕೆ ಬಿಡಿ ಎಂದು ಹೇಳಿದರು.
ಯಡಿಯೂರಪ್ಪ ಜೀ ನೇತೃತ್ವದಲ್ಲಿ ಕರೋನ ಪರಿಸ್ಥಿತಿಯನ್ನ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಯಡಿಯೂರಪ್ಪ ಕರೊನಾ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಿಸಿದ್ದಾರೆ. ಚಾಲಕರಿಗೆ 5 ಸಾವಿರ ನೇರ ಹಣ ವರ್ಗಾವಣೆ ಮಾಡಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ದಾಗ ಕಾಂಗ್ರೆಸ್ ಜೊತೆಯಲ್ಲಿ ನಿಲ್ಲಲಿಕ್ಕೂ ಬರುವುದಿಲ್ಲ. ಕರೊನಾ ಸಂದರ್ಭದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಯ್ತು. ಆದರೆ ಕಾಂಗ್ರೆಸ್ನವರು ಕರೊನಾ ಲಸಿಕೆ ವಿಚಾರದಲ್ಲೂ ರಾಜಕೀಯ ಮಾಡಿದರು. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ರಾಜ್ಯಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದೇವೆ. ದೆಹಲಿಯಲ್ಲಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರ. ಒಟ್ಟಿನಲ್ಲಿ ಇದು ಡಬಲ್ ಎಂಜಿನ ಸರ್ಕಾರ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಕರ್ನಾಟಕಕ್ಕೆ ಏನು ಸಿಕ್ಕಿದೆ ಲೆಕ್ಕ ಕೊಡಿ. ಮನಮೊಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಎಷ್ಟು ಹಣ ನೀಡಿದ್ದಾರೆ ಅಂತ ಲೆಕ್ಕಕೊಡಲಿ. ಅವರು ಲೆಕ್ಕಕೊಡಲ್ಲ, ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಮೋದಿ-ಯಡಿಯೂರಪ್ಪ ಬಗ್ಗೆ ಷಾ ಮೆಚ್ಚುಗೆ ವ್ಯಕ್ತಪಡಿಸಿದರು.