

ಬಾಗಲಕೋಟೆ: ರಾಜ್ಯವ್ಯಾಪಿ ನಾಡಿನ ಜನರು ಯುಗಾದಿ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಹೊಸ ಬಟ್ಟೆ, ಸಿಹಿ ತಿಂಡಿ-ತಿನಿಸುಗಳ ತಯಾರಿಕೆ, ದೇವರ ದರ್ಶನ ಪಡೆಯುವುದರಲ್ಲಿ ನಿರತರಾಗಿದ್ದಾರೆ. ಸಾಮಾನ್ಯವಾಗಿ ವರ್ಷವಿಡಿ ಭವಿಷ್ಯ ಕೇಳುವ ಜನರು, ಇಂದು ಹೊಸ ವರ್ಷದ ಹಬ್ಬವೆಂದು 2024ರ ಭವಿಷ್ಯ ಕೇಳಲು ಕುತೂಹಲ ವ್ಯಕ್ತಪಡಿಸುತ್ತಾರೆ. ಅದೇ ರೀತಿ ಬಾಗಲಕೋಟೆಯಲ್ಲಿ ನಡೆಯುವ ಎಕ್ಕೆ ಎಲೆ ಭವಿಷ್ಯ ಮಾತ್ರ ಸದ್ಯ ಎಲ್ಲರ ಗಮನಸೆಳೆದಿದೆ.
ಇಲ್ಲಿ ಯುಗಾದಿ ಪಾಡ್ಯದಂದು ಎಕ್ಕೆ ಎಲೆ ಭವಿಷ್ಯ ನಡೆಯುತ್ತದೆ. ಕೇವಲ ಎಕ್ಕೆ ಎಲೆ ನೋಡಿಕೊಂಡು ರೈತರು ಭವಿಷ್ಯ ಹೇಳುತ್ತಾರೆ. ಬೀಳಗಿ ಪಟ್ಟಣದ ರೈತರು ಈ ವಿಶೇಷ ಶಾಸ್ತ್ರ ಹೇಳುವ ಕೆಲಸದಲ್ಲಿ ತೊಡಗಿದ್ದು, ಪ್ರತ್ಯೇಕವಾಗಿ ಯುಗಾದಿ ಹಬ್ಬದ ದಿನದಂದೇ ಎಕ್ಕೆ ಎಲೆ, ಜಕನೇರನ ಕಟ್ಟೆ ಭವಿಷ್ಯ ಹೇಳುತ್ತಾರೆ.
ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದಲ್ಲಿ ಇದಕ್ಕೆಂದೆ ಮಣ್ಣಿನ ಐದು ಅಡಿ ಚೌಕಾಕಾರದ ಕಟ್ಟೆ ನಿರ್ಮಾಣ ಮಾಡಿದ್ದಾರೆ. ಅದರ ಮೇಲೆ 27 ಧಾನ್ಯವಿಟ್ಟು, ಅದರ ಮೇಲೆ ಚರಣದ ಪ್ರಕಾರ ಎಕ್ಕೆ ಎಲೆ ಇಟ್ಟು ಹೇಳ್ತಾರೆ. ಈ ಕಟ್ಟೆಗೆ ಜಕನೇರನ ಕಟ್ಟೆ ಎಂದು ಕರೆಯುತ್ತಾರೆ. ಕಟ್ಟೆ ಮೇಲಿಟ್ಟ ಕಾಳುಗಳ ಉಬ್ಬಿದರೆ ದಾನ್ಯದ ಬೆಳೆ ಸಮೃದ್ದಿ, ಎಕ್ಕೆ ಎಲೆಗಳ ತೇವಾಂಶದ ಮೇಲೆ ಮಳೆ ಎಷ್ಟು ಪ್ರಮಾಣದಲ್ಲಿ ಆಗಲಿದೆ ಎಂದು ಹೇಳಲಾಗುತ್ತದೆ. ಇದು ಇಲ್ಲಿನ ಬಲವಾದ ನಂಬಿಕೆ.
ಜಕನೇರನ ಕಟ್ಟೆ ಯಾವ ಭಾಗದಲ್ಲಿ ಬಿರುಕು ಬಿಡುತ್ತದೆ ಆ ಭಾಗದಲ್ಲಿ ಭೂಕಂಪ ಎಂಬ ನಂಬಿಕೆಯಿದೆ. ಈ ಬಾರಿ ಕಟ್ಟೆಯ ಈಶಾನ್ಯ ಭಾಗದಲ್ಲಿ ಬಿರುಕು. ಈಶಾನ್ಯ ಭಾಗದಲ್ಲಿ ಭೂಕಂಪ ಎಂದು ಭವಿಷ್ಯ ನುಡಿದಿದ್ದಾರೆ. ಮಣ್ಣು ಹಾಗೂ ಬೆಂಡಿನಿಂದ ಕುಂಟೆ, ರಂಟೆ, ಕೂರಿಗೆ, ಮಣ್ಣಿನ ಬಸವಣ್ಣ, ಮಡಿಕೆ, ತಕ್ಕಡಿ, ಜನರಿಗೆ ಬಟ್ಟೆ ಕೊರತೆಯಾಗದಂತೆ ಮಣ್ಣಿನ ಮಗ್ಗ ನಿರ್ಮಾಣ. ಯುಗಾದಿ ಅಮವಾಸ್ಯೆ ದಿನದಂದು ಎಕ್ಕೆ ಎಲೆ, ಜಕನೇರನ ಕಟ್ಟೆ ನಿರ್ಮಾಣ ಮಾಡಿ ಭವಿಷ್ಯ ಹೇಳುವ ರೈತರಿಗೆ ಈಗ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ.