ಗಾಂಜಾ ಮತ್ತಿನಲ್ಲಿ ಬಡಿದಾಡಿಕೊಂಡ ಕಳ್ಳರು; ಒಬ್ಬ ಕೆಳಕ್ಕೆ ಹಾರಿ, ಮೇಲೆ ಹೋದ..!

ganja
ಪ್ರಕರಣ ನಡೆದ ಸ್ಥಳ
Published on

ಬೆಂಗಳೂರು: ಕಳ್ಳರಿಬ್ಬರು ಗಾಂಜಾ ಮತ್ತಿನಲ್ಲಿ ಬಡಿದಾಡಿಕೊಂಡಿದ್ದು, ಕೊನೆಗೆ ಒಬ್ಬನ ಸಾವಿನಲ್ಲಿ ಜಗಳ ಅಂತ್ಯವಾಗಿದೆ. ಬೆಂಗಳೂರಿನ ವಿಲ್ಸನ್​ ಗಾರ್ಡನ್​ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ವಿನಾಯಕ ನಗರದಲ್ಲಿ ಈ ಪ್ರಕರಣ ನಡೆದಿದೆ.

ಕಳ್ಳತನವನ್ನೇ ಚಾಳಿ ಮಾಡಿಕೊಂಡಿದ್ದ ಥಾಮಸ್ ಮತ್ತು ಅಶೋಕ್ ಎಂಬವರ ನಡುವೆ ಜಗಳ ನಡೆದಿದ್ದು, ಥಾಮಸ್​ ಪ್ರಾಣ ಕಳೆದುಕೊಂಡಿದ್ದಾನೆ. ಕಳ್ಳತನದ ಜತೆಗೆ ಮಾದಕ ವಸ್ತು ಸೇವನೆಯನ್ನೂ ಚಟವಾಗಿಸಿಕೊಂಡಿದ್ದ ಇವರಿಬ್ಬರ ನಡುವೆ ಆಗಾಗ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು.

ಇಂದು ಕೂಡ ಗಾಂಜಾ ಮತ್ತಿನಲ್ಲಿದ್ದ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪ ಹೋಗಿ ಕೊನೆಗೆ ಬಡಿದಾಡಿಕೊಳ್ಳುವ ಹಂತವನ್ನೂ ತಲುಪಿತ್ತು. ಈ ವೇಳೆ ಮಹಡಿಯಿಂದ ಕೆಳಕ್ಕೆ ಹಾರಿದ ಥಾಮಸ್​, ಶೀಟ್​ ಮಾಡಿನ ಮೇಲೆ ಬಿದ್ದಿದ್ದು, ಅದು ಮುರಿದು ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಿಬ್ಬರ ವಿರುದ್ಧ ಮಡಿವಾಳ ಮತ್ತು ಮೈಕೋ ಲೇ ಔಟ್ ಠಾಣಾ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಿವೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net