

ಬಂಟ್ವಾಳ: ಪಾದಚಾರಿಗಳಿಗೆ ನಡೆದಾಡಲು ಫುಟ್ಪಾತ್ ಇಲ್ಲದ ನಗರ ಎಂದು ಕುಖ್ಯಾತಿ ಪಡೆದಿರುವ ಬಂಟ್ವಾಳ ಪೇಟೆಗೆ ಸದ್ಯದಮಟ್ಟಿಗೆ ಅಗಲೀಕರಣದ ಭಾಗ್ಯವು ಮರೀಚಿಕೆಯಾಗಿದೆ. ಬಂಟ್ವಾಳ ಪೇಟೆ ಮಾತ್ರವಲ್ಲ ಪುರಸಭಾ ವ್ಯಾಪಿಗೊಳಪಟ್ಟ ಬಿ.ಸಿ.ರೋಡ್, ಪಾಣೆಮಂಗಳೂರು ನಗರವು ಇದಕ್ಕೆ ಹೊರತಾಗಿಲ್ಲ.
ಬಂಟ್ವಾಳ ನಗರದಲ್ಲಿ ಚಿನ್ನಾಭರಣಗಳ ಮಳಿಗೆಯೇ ಹೆಚ್ಚಿರುವುದರಿಂದ ಚಿನ್ನದ ಪೇಟೆ ಎಂಬ ಹೆಸರಿದೆ. ಆದರೆ ಮೂರು ದಿಕ್ಕಿನ ಬ್ರಿಟಿಷ್ ಕಾಲದ ರಸ್ತೆ ಈಗಲೂ ಹಾಗೆಯೇ ಇದೆ.
ಇಲ್ಲಿ ರಸ್ತೆ ಅಗಲೀಕರಣ, ಒಳಚರಂಡಿ ಯೋಜನೆ, ಸೂಕ್ತ ವಾಹನ ಪಾರ್ಕಿಂಗ್ ವ್ಯವಸ್ಥೆ, ಪಾದಚಾರಿಗಳಿಗೆ ನಡೆದಾಡಲು ಫುಟ್ಪಾತ್ ವ್ಯವಸ್ಥೆ ಎಂಬುದು ಜನಪ್ರತಿನಿಧಿಗಳ ಬಾಯಿ ಪಟಾಕಿಗಷ್ಟೇ ಸೀಮಿತವಾಗಿದೆ. ಇದ್ಯಾವುದೂ ಕೂಡ ಅನುಷ್ಠಾನಕ್ಕೆ ಬರುವ ಯೋಗಭಾಗ್ಯವನ್ನು ಪುರವಾಸಿಗಳು ಹೊಂದಿಲ್ಲ.
ಅಗಲ ಕಿರಿದಾದ ಬಂಟ್ವಾಳ ಮಾರ್ಕೆಟ್ ರಸ್ತೆ, ಕೊಟ್ರಮಣ ಗಂಡಿ ರಸ್ತೆ, ರಥಬೀದಿಯಲ್ಲಿ ಫುಟ್ಪಾತ್ ಎಂಬುದೇ ಇಲ್ಲ. ಹಾಗಾಗಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ತಪ್ಪಿದ್ದಲ್ಲ. ಈ ಸಂದರ್ಭ ಜನಸಾಮಾನ್ಯ ರಸ್ತೆ ಬಿಟ್ಟು ಅಂಗಡಿ ಜಗಲಿ ಹತ್ತಿಕೊಂಡು ಇಲ್ಲವೆ ವಾಹನದ ಎಡೆಯಲ್ಲಿ ನಡೆದಾಡಬೇಕು. ಈ ನಡುವೆ ಕೆಲ ಅಂಗಡಿಯವರ ಸಾಮಗ್ರಿಗಳು ರಸ್ತೆಯಲ್ಲೇ ಇರುವುದರಿಂದ ಪಾದಚಾರಿಗಳು ಇದನ್ನು ದಾಟಿಕೊಂಡೇ ಸಾಗಬೇಕು.
ಕೆಲ ವರ್ಷದ ಹಿಂದೆ ಜಗದೀಶ್ ಎಂಬುವರು ಜಿಲ್ಲಾಧಿಕಾರಿಯಾಗಿದ್ದಾಗ ರಸ್ತೆ ಅಗಲೀಕರಣದ ಬಗ್ಗೆ ಆಸಕ್ತಿ ವಹಿಸಿ ಒಂದೆರಡು ಸಭೆ ನಡೆಸಿದ್ದರು. ಒಂದಷ್ಟು ರೂಪುರೇಷೆ ಹಾಕಿದ್ದರು. ಇನ್ನೇನು ಬಂಟ್ವಾಳ ನಗರ ಅಗಲೀಕರಣ ಆಗಿಯೇ ತೀರುತ್ತದೆ ಎಂಬ ಹಂತಕ್ಕೂ ತಲುಪಿತ್ತು. ಆಗ ಪುರಸಭೆಯಲ್ಲಿ ಪ್ರೊಬೆಷನರಿಯಾಗಿದ್ದ ಐಪಿಎಸ್ ಮಹಿಳಾ ಅಧಿಕಾರಿಯೋರ್ವರು ಡಿ.ಸಿ. ಅವರಿಗೆ ಅಸ್ಥೆ ವಹಿಸಿ ಸಾಥ್ ನೀಡಿದ್ದರು. ಆದರೆ ಅಚ್ವರಿ ಎಂಬಂತೆ ಡಿ.ಸಿ. ಜಗದೀಶ್ ಅವರಿಗೆ ವರ್ಗಾವಣೆ ಕಾದಿತ್ತು. ಪ್ರೊಬೇಷನರಿ ಅಧಿಕಾರಿ ಭಡ್ತಿ ಪಡೆದು ತೆರಳಿದರು. ಅವರ ಹಾಕಿದ್ದ ರಸ್ತೆ ಅಗಲೀಕರಣದ ಯೋಜನೆ ಅವರ ಜತೆಯಲ್ಲೇ ತೆರಳಿತು. ಕಡತಕ್ಕೆ ಪುರಸಭೆಯ ಕಪಾಟಿನಲ್ಲಿ ಧೂಳು ಹಿಡಿಯಲಾರಂಭಿಸಿತು.
ಫುಟ್ಪಾತ್, ರಸ್ತೆ ಅಗಲೀಕರಣದ ಬಗ್ಗೆ ಪುರಸಭೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಾಗರಿಕರು ಪ್ರಸ್ತಾವನೆಗೈದರೂ ಅದೆಲ್ಲವು ಕಾಗದಕ್ಕೆ ಸೀಮಿತವಾಗಿ ಬಿಟ್ಟಿದೆ. ಸದ್ಯದ ಮಟ್ಟಿಗೆ ಬಂಟ್ವಾಳದಲ್ಲಿ ರಸ್ತೆ ಅಗಲೀಕರಣ, ಫುಟ್ಪಾತ್ ಎಂಬ ಕಾನ್ಸೆಪ್ಟೇ ಕನಸಿನ ಮಾತು!
ಅಂಗಡಿಗಳಿಂದ ಆಪೋಷಣ
ಬಂಟ್ವಾಳ ನಗರದ ಪರಿಸ್ಥಿತಿ ಹೀಗಾದರೆ ಬಿ.ಸಿ.ರೋಡ್ ನಗರದಲ್ಲಿ ಫುಟ್ಪಾತ್ ನಾಗರಿಕರ ಪಾಲಿಗೆ ಕಾಣಿಸುತ್ತಿದ್ದರೂ, ಕೆಲವೆಡೆ ಫುಟ್ ಪಾತನ್ನು ಅಂಗಡಿಗಳ ಸಾಮಗ್ರಿಗಳು ಹಾಗೂ ಪೆಟ್ರೋಲ್ ಪಂಪ್ನಿಂದ ಬಸ್ ನಿಲ್ದಾಣದವರೆಗೆ ವಾಹನಗಳು ಅವರಿಸಿಕೊಂಡಿರುತ್ತವೆ. ಹಾಗಾಗಿ ಪಾದಚಾರಿಗಳು ಫುಟ್ಪಾತ್ ಬಿಟ್ಟು ರಾಜರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದುಕೊಂಡು ನಡೆದಾಡಬೇಕಾಗುತ್ತದೆ.
ಮೂರು ಶೌಚಗೃಹದ ದುರಸ್ತಿ
ಈ ನಡುವೆ ಸಾರ್ವಜನಿಕರ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದ್ದ ಮೂರು ಆಯಕಟ್ಟಿನಲ್ಲಿರುವ ಶೌಚಗೃಹವನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಪುರಸಭೆ ಮುಂದಾಗಿದೆ. ಬಂಟ್ವಾಳ ಕೊಟ್ರಮಣಗಂಡಿ, ಬಡ್ಡಕಟ್ಟೆ ಹಾಗೂ ಬಿ.ಸಿ.ರೋಡ್ನ ಸರ್ವೀಸ್ ರಸ್ತೆಯ ಮೇಲ್ಸೇತುವೆಯ ಕೆಳಭಾಗದಲ್ಲಿರುವ ಶೌಚಗೃಹವನ್ನು ದುರಸ್ತಿಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.