

ಮನೋಹರ್ ಬಳಂಜ ಬೆಳ್ತಂಗಡಿ
ಬೇಸಿಗೆಯ ಬಿಸಿಲಿನ ಪ್ರಕೋಪ ಹೆಚ್ಚುತ್ತಿದ್ದಂತೆ ಜಿಲ್ಲೆಯ ಒಂದಲ್ಲ ಒಂದು ಕಡೆ ಪ್ರತಿದಿನ ಬೆಂಕಿ ಅವಘಡ ಸಂಭವಿಸುತ್ತಿದೆ. ಹೆಚ್ಚಿನ ಕಡೆ ನಿರ್ವಹಣೆ ಇಲ್ಲದ ವಿದ್ಯುತ್ ತಂತಿ, ಪರಿವರ್ತಕಗಳು ಇದಕ್ಕೆ ಮುಖ್ಯ ಕಾರಣವಾಗುತ್ತಿವೆ.
ವಿದ್ಯುತ್ ತಂತಿ, ಪರಿವರ್ತಕಗಳಿಂದ ಸಿಡಿಯುವ ಕಿಡಿಗಳು ಬೆಂಕಿ ಉತ್ಪತ್ತಿಗೆ ಕಾರಣವಾಗುತ್ತಿವೆ. ಬೆಂಕಿ ಕಿಡಿಗಳು ಸಿಡಿದು ಸುತ್ತಲೂ ಒಣಗಿರುವ ಹುಲ್ಲು, ಗಿಡಗಂಟಿಗಳಿಗೆ ಹತ್ತಿಕೊಂಡು ಹರಡುತ್ತದೆ. ವಿದ್ಯುತ್ ಲೈನ್ ಹೆಚ್ಚಿನ ಕಡೆಗಳಲ್ಲಿ ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗಿದ್ದು, ಬೆಂಕಿ ಪ್ರಕರಣಗಳು ಹೆಚ್ಚಿ ಗಿಡ, ಮರ, ಕೃಷಿ ನಾಶಕ್ಕೂ ಕಾರಣವಾಗುತ್ತಿವೆ.
ವಿದ್ಯುತ್ ಪರಿವರ್ತಕ, ತಂತಿಗಳ ಸುತ್ತ ಸಾಕಷ್ಟು ಪ್ರಮಾಣದ ಒಣಹುಲ್ಲು ಇದೆ. ಇದನ್ನು ಬೇಸಿಗೆ ಆರಂಭಕ್ಕೆ ತೆರವುಗೊಳಿಸಿ ಅಗತ್ಯ ಸ್ಥಳಗಳಲ್ಲಿ ಮರಳು ಹಾಕಿದರೆ ಬೆಂಕಿ ಪಸರಿಸುವುದಿಲ್ಲ. ವಿದ್ಯುತ್ ಕಂಬಗಳಿಗೆ ಸುತ್ತಿರುವ ಬಳ್ಳಿಗಳು ಕೂಡ ಬೆಂಕಿಗೆ ಕಾರಣವಾಗುತ್ತವೆ. ಸಾಮರ್ಥ್ಯ ಕಳೆದುಕೊಂಡ ಹಳೇ ತಂತಿ ಮತ್ತು ಕಂಬಗಳಲ್ಲಿರುವ ಪರಿಕರಗಳ ಸ್ಥಿತಿ ಉತ್ತಮವಾಗಿಲ್ಲ. ಪ್ರಸ್ತುತ ಪಂಪ್ಗಳು ಕೃಷಿ ನೀರಿಗೆ ಚಾಲು ಮಾಡುವ ಕಾರಣದಿಂದ ವಿದ್ಯುತ್ ಒತ್ತಡ ಹೆಚ್ಚುತ್ತಿದ್ದು ಸಾಮರ್ಥ್ಯ ಕಳೆದುಕೊಂಡ ವಿದ್ಯುತ್ ವಿತರಣೆ ಸಲಕರಣೆಗಳು ಬೆಂಕಿ ಉತ್ಪತ್ತಿಗೆ ಕಾರಣವಾಗುತ್ತದೆ. ಇವುಗಳ ಸರಿಯಾದ ನಿರ್ವಹಣೆ ಇಲ್ಲದೆ ಬೆಂಕಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.
ಅಗ್ನಿಶಾಮಕ ಸಿಗುತ್ತಿಲ್ಲ
ಬೆಂಕಿ ಪ್ರಕರಣಗಳು ಕಂಡುಬಂದ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೆ ಅಲ್ಲಿರುವ ಒಂದೆರಡು ವಾಹನಗಳು ಇತರ ಕಡೆಗೆ ತೆರಳಿರುತ್ತವೆ. ಇದರಿಂದ ಅಗತ್ಯ ಸಮಯಕ್ಕೆ ಅವು ಲಭಿಸದೆ ಬೆಂಕಿ ಇನ್ನಷ್ಟು ಆವರಿಸುತ್ತದೆ. ಬೆಂಕಿ ಪ್ರಕರಣಗಳು ಉಂಟಾದ ಸಮಯ ವಿದ್ಯುತ್ ನಿಲುಗಡೆಗೊಳಿಸಬೇಕಾದ ಅನಿವಾರ್ಯತೆ ಇರುವುದರಿಂದ ಅಗತ್ಯ ಹೊತ್ತಿಗೆ ಪಂಪ್ಗಳನ್ನು ಚಾಲು ಮಾಡಿ ನೀರು ಹಾಯಿಸಿ ಬೆಂಕಿ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ಈ ಕಾರಣಗಳಿಂದ ಸ್ಥಳೀಯ ಜನರೇ ಸೇರಿ ಬೆಂಕಿಯನ್ನು ಹತೋಟಿಗೆ ತರಲು ಸಾಕಷ್ಟು ಶ್ರಮವಹಿಸುತ್ತಿದ್ದಾರೆ.
ಬೆಂಕಿ ಹೀಗೆ ತಪ್ಪಿಸಬಹುದು
ಪರಿವರ್ತಕಗಳ ಸುತ್ತ ಸ್ವಚ್ಛತೆ ಅಗತ್ಯ, ವಿದ್ಯುತ್ ಕಂಬ, ಪರಿವರ್ತಕಗಳಲ್ಲಿ ಹಬ್ಬಿರುವ ಬಳ್ಳಿಗಳು ತೆರವು ಮಾಡಬೇಕು. ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಬ್ಯಾನರ್ಗಳನ್ನು ತೆರವುಗೊಳಿಸಬೇಕು., ಹಳೆ ತಂತಿ, ಪರಿವರ್ತಕಗಳ ಬದಲಾವಣೆಯಾಗಬೇಕು, ವಿದ್ಯುತ್ ಲೈನ್ ಮೇಲೆ ಬಾಗಿರುವ ಮರದ ಕೊಂಬೆಗಳು ತೆರವುಗೊಳ್ಳಬೇಕು, ವಿದ್ಯುತ್ ಲೈನ್ಗಳ ಹೊರೆ ಹೆಚ್ಚದಂತೆ ಕ್ರಮವಹಿಸಬೇಕು.
ಆಯಾಯ ವಿದ್ಯುತ್ ಉಪವಿಭಾಗಗಳಲ್ಲಿ ವಿದ್ಯುತ್ ಲೈನ್ಗಳ ನಿರ್ವಹಣೆ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ. ಹಳೆ ತಂತಿಗಳ ಬದಲಾವಣೆಯು ಪ್ರಗತಿಯಲ್ಲಿದೆ. - ಕಟೇಶ, ಇಇ, ಮೆಸ್ಕಾಂ,ಬಂಟ್ವಾಳ