ಮೃತ್ಯುಕೂಪವಿದೆ ಎಚ್ಚರ! ಅಪಾಯ ಆಹ್ವಾನಿಸುತ್ತಿವೆ ಕಲ್ಲು ಕ್ವಾರಿಗಳು, ತಡೆಬೇಲಿಯಿಲ್ಲದೆ ತೊಂದರೆ

quary
ಬೃಹತ್ ಕೆರೆಯಂತಾಗಿರುವ ಅಪಾಯಕಾರಿ ಕಲು ್ಲಕ್ವಾರಿ.
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಪ್ರತಿ ಮಳೆಗಾಲ ಸಂದರ್ಭ ಕಾರ್ಕಳ ಹಾಗೂ ಹೆಬ್ರಿ ತಾಲೂಕಾದ್ಯಂತ ಜನವಸತಿ ಪ್ರದೇಶದ ಪಕ್ಕದಲ್ಲೇ ಮೃತ್ಯುಕೂಪದಂತಿರುವ ಕಲ್ಲು ಕ್ವಾರಿಗಳ ಹೊಂಡಗಳು ಮಳೆ ನೀರು ತುಂಬಿ ಕೆರೆಯಂತಾಗಿ ಅಪಾಯಕಾರಿಯಾಗುತ್ತಿದೆ.

ಕರಿಕಲ್ಲುಗಳ ಊರು ಎಂದೇ ಪ್ರಸಿದ್ಧಿ ಪಡೆದ ಕಾರ್ಕಳದಲ್ಲಿ ತಾಲೂಕಿನ ಉದ್ದಗಲಕ್ಕೂ ಅಲ್ಲಲ್ಲಿ ಕ್ರಷರ್ ಹಾಗೂ ಕಲ್ಲು ಕ್ವಾರಿಗಳ ಸದ್ದು ಮಾತ್ರ ನಿತ್ಯ ಕೇಳುತ್ತದೆ. ತಾಲೂಕಿನ ನಂದಳಿಕೆ, ಕಲ್ಯಾ, ನಿಟ್ಟೆ, ದೂಪದಕಟ್ಟೆ, ಸೂಡ ಪಡುಬೆಟ್ಟು, ನೆಲ್ಲಿಗುಡ್ಡೆ, ಪಳ್ಳಿ, ಬೈಲೂರು, ಕುಕ್ಕುಂದೂರು, ಮಿಯ್ಯರು, ಮಾಳ ಭಾಗದಲ್ಲಿ ಹೆಚ್ಚಾಗಿ ಪಾದೆಕಲ್ಲಿನ ಕ್ವಾರಿಗಳ ಸಹಿತ ಕ್ರಷರ್‌ಗಳು ಕಾರ್ಯಾಚರಿಸುತ್ತಿವೆ.

ಅಲ್ಲದೆ ಮುಂಡ್ಕೂರು, ಬೋಳ, ಬೆಳ್ಮಣ್‌ನ ಜಂತ್ರ ಸೇರಿ ಇನ್ನೂ ಹಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಂಪು ಕಲ್ಲಿನ ಕ್ವಾರಿಗಳು ಕಾರ್ಯಾಚರಿಸುತ್ತಿದ್ದು, ಈಗಾಗಲೇ ಆಳವಾಗಿ ಭೂಮಿ ಅಗೆದು ಬೃಹತ್ ಕೆರೆಯಂತ ಹೊಂಡಗಳು ನಿರ್ಮಾಣವಾಗಿದೆ. ಕೆಲವೊಂದು ಕ್ವಾರಿಗಳನ್ನು ಗಣಿಗಾರಿಕೆ ಮಾಡಿ ಬಳಿಕ ಹೊಂಡ ಮುಚ್ಚದೆ ಮತ್ತೊಂದು ಕಡೆಯಲ್ಲಿ ಗಣಿಗಾರಿಕೆ ನಡೆಸುತ್ತಿರುವುದು ಬಹುತೇಕ ಕಡೆಗಳಲ್ಲಿ ಕಾಣಸಿಗುತ್ತಿದೆ. ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ 56 ಗ್ರಾಮಗಳಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ಕಲ್ಲಿನ ಕ್ವಾರಿಗಳಿವೆ. ಉಡುಪಿ ಜಿಲ್ಲೆಯಲ್ಲೇ ಅತೀ ಹೆಚ್ಚು ಕಲ್ಲು ಕ್ವಾರಿಗಳು ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲಿದ್ದು, ಸುಮಾರು 60ಕ್ಕೂ ಅಧಿಕ ಕ್ರಷರ್‌ಗಳು ಹಾಗೂ 250ಕ್ಕೂ ಅಧಿಕ ಅನಧಿಕೃತ ಕ್ವಾರಿಗಳದ್ದೇ ಕಾರುಬಾರು ಜೋರಾಗಿದ್ದು, ಅಲ್ಲಲ್ಲಿ ಕ್ವಾರಿಯ ಹೊಂಡಗಳು ಅನಾಹುತ ಸೃಷ್ಟಿಸುವಂತಿದೆ.

ಅಪಾಯಕ್ಕೆ ಆಹ್ವಾನ

ಕಾರ್ಕಳ ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿರುವ ಕಲ್ಲು ಕ್ವಾರಿಗಳಲ್ಲಿ ಮಳೆಗಾಲ ನೀರು ನಿಂತು ಅಸುರಕ್ಷೆಯಿಂದ ಕೂಡಿದೆ. ಮಳೆಗಾಲದಲ್ಲಿ ಕಲ್ಲು ಕ್ವಾರಿ ಗುಂಡಿಗಳು ಮುಚ್ಚದೇ ಬಿಡುವುದರಿಂದ ಮಳೆ ನೀರು ತುಂಬಿ ಅಪಾಯಕ್ಕೆ ಆಹ್ವಾನ ನೀಡುತ್ತದೆ. ಪಕ್ಕದ ಜನವಸತಿ ಪ್ರದೇಶಗಳ ನಿವಾಸಿಗಳು, ಮಕ್ಕಳು, ಮಹಿಳೆಯರು ಅಪಾಯವನ್ನೇ ಹೆಚ್ಚು ತಂದುಕೊಳ್ಳುವ ಸನ್ನಿವೇಶಗಳಿವೆ. ಬೇಸಿಗೆಯಲ್ಲಿ ಶಬ್ದಮಾಲಿನ್ಯಗಳಿಂದ ತೊಂದರೆ ಅನಭವಿಸಿದರೆ, ಮಳೆಗಾಲ ಹೊಂಡದ ಕೃತಕ ನೆರೆಯಿಂದ ಸಮಸ್ಯೆ ಎದುರಿಸುತ್ತಾರೆ. ಕಾರ್ಕಳ ಹಾಗೂ ಹೆಬ್ರಿ ತಾಲೂಕಾದ್ಯಂತ ಜನವಸತಿಯಿರುವ ಪಕ್ಕದಲ್ಲೇ ನೀರು ತುಂಬಿದ ಹೊಂಡಗಳಿದ್ದು, ಇನ್ನೂ ಕೂಡ ಯಾವುದೇ ತಡೆ ಬೇಲಿಯನ್ನು ಹಾಕದ ಪರಿಣಾಮ ಅಪಾಯಕಾರಿ ರೀತಿಯಲ್ಲಿ ಕ್ವಾರಿ ಹೊಂಡಗಳಿವೆ. ಕೆಲವೊಂದು ಕಡೆಗಳಲ್ಲಿ ದಾರಿ ಸಮೀಪವೇ ಗುಂಡಿಗಳಿದ್ದು, ಜನ ಅತ್ತಿತ್ತ ಓಡಾಡುವ ಸಂದರ್ಭ ತುಂಬಾನೇ ಅಪಾಯಕಾರಿಯಾಗಿವೆ.

ಸೂಚನಾ ಫಲಕಗಳಿಲ್ಲ

ಕಲ್ಲಿನ ಕ್ವಾರಿಯಿಂದ ನಿರ್ಮಿತವಾದ ಬೃಹತ್ ಕೆರೆಯ ರೂಪದ ಹೊಂಡಗಳಿಗೆ ಯಾವುದೇ ತಂತಿ ಬೇಲಿ ಅಥವಾ ಅಪಾಯಕಾರಿ ಹೊಂಡದ ಬಗ್ಗೆ ಎಲ್ಲೂ ಸೂಚನಾ ಫಲಕಗಳಿಲ್ಲ. ಕೆಲವೊಂದು ಕಡೆಗಳಲ್ಲಿ ಸೂಚನಾ ಫಲಕವಿದ್ದರೂ ತಡೆಬೇಲಿ ಇಲ್ಲದ ಪರಿಣಾಮ ಜನ ನೀರಿಗಿಳಿಯುವ ಸಾಹಸ ಮಾಡುತ್ತಿದ್ದಾರೆ.

ಕೆಂಪು ಕಲ್ಲು ಕ್ವಾರಿಯೂ ಡೇಂಜರ್

ತಾಲೂಕಿನಲ್ಲಿ ಪಾದೆಕಲ್ಲುಗಳಂತೆ ಕೆಂಪು ಕಲ್ಲುಗಳ ಗಣಿಗಾರಿಕೆಯೂ ಅತ್ಯಧಿಕ ಪ್ರಮಾಣದಲ್ಲಿ ನಡೆಯುತ್ತಿದ್ದು, ಕಲ್ಲು ತೆಗೆದು ಹೊಂಡವನ್ನು ಮುಚ್ಚದ ಪರಿಣಾಮ ಕೆಂಪು ಕಲ್ಲು ಕ್ವಾರಿಗಳು ಕೆರೆಯಾಗಿ ಮಳೆಗಾಲದಲ್ಲಿ ಮಾರ್ಪಡಾಗುತ್ತದೆ. ಹೀಗಾಗಿ ಕ್ವಾರಿಯ ಸಮೀಪದಲ್ಲಿ ಯಾವುದೇ ತಡೆಬೇಲಿ ಇಲ್ಲದೆ ಕ್ವಾರಿಯ ನೀರನ್ನು ನೋಡಲು ಹೋಗಿ ಅಥವಾ ಈಜಾಡಲು ಇಳಿಯುವ ಸಾಹಸ ಮಾಡುವುದರಿಂದ ಕೆಂಪು ಕಲ್ಲು ಕ್ವಾರಿಯೂ ತುಂಬಾ ಅಪಾಯಕಾರಿಯಾಗಿದೆ.

ಪ್ರತಿ ಮಳೆಗಾಲದ ಸಂದರ್ಭ ಕ್ವಾರಿಯ ಸಮೀಪದ ಜನರು ಭಯದಲ್ಲೇ ದಿನ ಕಳೆಯುವಂತಾಗಿದೆ. ಕ್ವಾರಿಯ ಹೊಂಡಗಳು ಕೆರೆಯಾಗಿ ಬದಲಾಗಿ ಅನಾಹುತ ಸೃಷ್ಟಿಸುವಂತಿದೆ. ಅಪಾಯಕಾರಿ ಹೊಂಡದ ಬಗ್ಗೆ ಸೂಕ್ತ ಕ್ರಮದ ಅಗತ್ಯವಿದೆ.-ರಮೇಶ್ ಗ್ರಾಮಸ್ಥರು

ಉಡುಪಿ ಜಿಲ್ಲಾಧಿಕಾರಿ ಈ ಕುರಿತು ಸೂಕ್ತ ನಿರ್ದೇಶನ ನೀಡಿದ್ದಾರೆ. ಗಣಿಗಾರಿಕೆ ಮಾಲೀಕರಿಗೆ ಸುರಕ್ಷೆ ವಹಿಸುವಂತೆ ಗಣಿ ಇಲಾಖೆಗೆ ಸೂಚಿಸಿದ್ದಾರೆ. ತಾಲೂಕು ಆಡಳಿತ ವತಿಯಿಂದ ಮೇ 27ರಂದು ಮಳೆಗಾಲದ ಪೂರ್ವಭಾವಿಯಾಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪಿಡಿಒಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು.-ನರಸಪ್ಪ ತಹಸೀಲ್ದಾರ, ಕಾರ್ಕಳ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net