ಕ್ಯಾನ್ಸರ್​ನಿಂದ ಬಳಲುತ್ತಿದ್ದ ಸಹೋದರನ ಚಿಕಿತ್ಸೆಗಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ ಮಹಿಳೆ!

rep 2
Published on

ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸಹೋದರನ ಚಿಕಿತ್ಸೆಗಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ 4.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಮಹಿಳೆ ಜೀವನ್ ಭೀಮಾನಗರ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಗೋವಾ ಮೂಲದ ರುಚಿತಾ ಜಾದವ್ (40) ಬಂಧಿತ ಆರೋಪಿ. ಮುರುಗೇಶ್ ಪಾಳ್ಯದ ನಿವಾಸಿ ತೃಪ್ತಿ ನಗರದ ಪ್ರತಿಷ್ಠಿತ ಸಾಫ್ಟ್​ವೇರ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಮೇ 24ರಂದು ಇವರಿಗೆ ಮಗು ಜನಿಸಿತ್ತು. ಜೂನ್ ತಿಂಗಳಲ್ಲಿ ಮಗುವಿಗೆ ಹಾಗೂ ತಮಗೆ ಮಸಾಜ್ ಮಾಡಲು ಮನೆ ಕೆಲಸದವರಿಗಾಗಿ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ ರುಚಿತಾಳ ನಂಬರ್ ಸಿಕ್ಕಿತ್ತು. ಆಕೆಗೆ ಕರೆ ಮಾಡಿ ಮನೆ ಕೆಲಸಕ್ಕೆ ಬರುವಂತೆ ಸೂಚಿಸಿದ್ದರು. ಅದರಂತೆ ರುಚಿತಾ ಕಳೆದ 1 ತಿಂಗಳಿನಿಂದ ಇಲ್ಲಿ ಮನೆ ಕೆಲಸ ಮಾಡುತ್ತಿದ್ದಳು.

ಇತ್ತ ರುಚಿತಾ ಸಹೋದರ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆತನ ಚಿಕಿತ್ಸೆಗೆ ಹಣದ ಅಗತ್ಯತೆಯಿತ್ತು. ತಾನು ಮಾಡುವ ಕೆಲಸದಿಂದ ಬರುತ್ತಿದ್ದ ಹಣ ಎಲ್ಲೂ ಸಾಲುತ್ತಿರಲಿಲ್ಲ. ಹೀಗಾಗಿ ಆಕೆ ತೃಪ್ತಿ ಅವರ ಮನೆಯಲ್ಲಿದ್ದ ಚಿನ್ನಾಭರಣವನ್ನು ಹಂತ-ಹಂತವಾಗಿ ಕಳ್ಳತನ ಮಾಡಿ ಬೇರೆಡೆ ಮಾರಾಟ ಮಾಡಿದ್ದಳು. ಜು.14ರಂದು ತೃಪ್ತಿ ಲಾಕರ್‌ನ್ನು ನೋಡಿದಾಗ 4.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಜೆಬಿನಗರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನುಮಾನದ ಮೇರೆಗೆ ರುಚಿತಾಳನ್ನು ವಿಚಾರಣೆ ನಡೆಸಿದಾಗ ಸತ್ಯಾಂಶ ಗೊತ್ತಾಗಿದೆ. ಸದ್ಯ ರುಚಿತಾ ನ್ಯಾಯಾಂಗ ಬಂಧನದಲ್ಲಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net