ಉದ್ಯಮಿಯನ್ನು ಅಡ್ಡಗಟ್ಟಿ ದೋಚಿದ್ದ ಕಳ್ಳರ ಬಂಧನ

arrest-696x465_20230709000956420.jpg
Published on

ಬೆಂಗಳೂರು: ಉದ್ಯಮಿಯೊಬ್ಬರ ಕಾರು ಅಡ್ಡಗಟ್ಟಿ 50 ಲಕ್ಷ ರೂ.ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆಜೆ ನಗರದ ನಿವಾಸಿಗಳಾದ ಆಟೊ ಚಾಲಕ ರಿಯಾಜ್ ಹಾಗೂ ಇಮ್ರಾನ್ ಬಂಧಿತರು. ಆರೋಪಿಗಳಿಂದ 44 ಲಕ್ಷ ರೂ.ನಗದು, 2 ಮೊಬೈಲ್, ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ಲೋಕೇಶ್ ಅವರು ಜುಲೈ 15ರಂದು 50 ಲಕ್ಷ ರೂ. ನಗದು ಸಮೇತ ಕಾರಿನಲ್ಲಿ ಹೊರಟಿದ್ದರು. ಈ ಬಗ್ಗೆ ತಿಳಿದಿದ್ದ ನಾಲ್ವರು ಆರೋಪಿಗಳು ಕಾರು ಬೆನ್ನಟ್ಟಿದ್ದರು.

ಹೊಸ ಗುಡ್ಡದಹಳ್ಳಿ ಸಿಗ್ನಲ್‌ನಲ್ಲಿ ಕಾರು ನಿಂತಿದ್ದು, ಕಾರಿನ ಎದುರು ದ್ವಿಚಕ್ರ ವಾಹನ ನಿಲ್ಲಿಸಿದ್ದ ಆರೋಪಿಗಳು, ದೂರುದಾರರ ಜತೆ ಜಗಳ ತೆಗೆದಿದ್ದರು. ಮಾರಕಾಸ್ತ್ರದಿಂದ ಕೈಗೆ ಹೊಡೆದಿದ್ದರು. ಆಗ ಆರೋಪಿಯೊಬ್ಬ, ಕಾರಿನ ಹಿಂಬದಿ ಗಾಜು ಒಡೆದು ಹಣದ ಬ್ಯಾಗ್ ಎತ್ತಿಕೊಂಡು ಓಡಿಹೋಗಿದ್ದ.

ಲೋಕೇಶ್ ಬೆನ್ನಟ್ಟಿ ಹಿಡಿಯಲು ಹೋಗಿ ವಿಫಲರಾಗಿದ್ದರು. ಇತ್ತ ಉಳಿದವರು ಪರಾರಿಯಾಗಿದ್ದರು. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸುಲಿಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net