ಜ್ಯೋತಿಷಿಯ ಮನೆಯಲ್ಲಿ ನಡೆಯಿತು ಕಳ್ಳತನ; ಲಕ್ಷಾಂತರ ರೂ. ನಗದು, ತೊಲೆಗಟ್ಟಲೆ ಚಿನ್ನಾಭರಣ ಕಳವು

theft
Published on

ಕಲಬುರಗಿ: ಜ್ಯೋತಿಷಿಯೊಬ್ಬರ ಮನೆಯಲ್ಲಿ ಕಳವು ನಡೆದಿದ್ದು, ಲಕ್ಷಾಂತರ ರೂಪಾಯಿ ನಗದು ಹಾಗೂ ತೊಲೆಗಟ್ಟಲೆ ಚಿನ್ನಾಭರಣವನ್ನು ಕದ್ದೊಯ್ಯಲಾಗಿದೆ. ಕಲಬುರಗಿಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಮಂಗಳವಾರ ಹಾಡಹಗಲೇ ಈ ಕಳ್ಳತನ ನಡೆದಿದೆ.

ಜ್ಯೋತಿಷಿ ಮಹೇಂದ್ರ ಮಾರುತಿ ವಾಕೋಡೆ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಇವರ ಮನೆಲ್ಲಿದ್ದ 6.3 ಲಕ್ಷ ರೂಪಾಯಿ ನಗದು ಹಾಗೂ 12 ತೊಲೆ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಲಾಗಿದೆ. ಭವಿಷ್ಯ ಹೇಳುವುದನ್ನೇ ವೃತ್ತಿಯಾಗಿಸಿಕೊಂಡಿದ್ದ ಇವರು ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಈ ಕಳವು ನಡೆದಿದೆ.

ಕಳ್ಳರು ಮನೆಯ ಬೀಗವನ್ನು ಮಾತ್ರ ಮುರಿದು ಇಲ್ಲವೇ ಮನೆಯ ಮೇಲ್ಭಾಗದಲ್ಲಿ ಕಟ್ಟಡ ನಿರ್ಮಿಸುತ್ತಿರುವ ಸ್ಥಳದಿಂದ ಇಳಿದು ಬಂದು ಹಣ ಹಾಗೂ ಚಿನ್ನಾರಭರಣಗಳಿದ್ದ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಿರುವ ಸಾಧ್ಯತೆಯಿದೆ ಎಂದು ದೂರಿದ್ದಾರೆ.

ಸ್ಥಳಕ್ಕೆ ಎಸ್‌ಐ ತಿರುಮಲೇಶ ಕುಂಬಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೀಗ ಮುರಿದ ಯಾವುದೇ ಲಕ್ಷಣ ಪರಿಶೀಲನೆ ವೇಳೆ ಕಾಣಿಸಿಲ್ಲ.  ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು, ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net