ಭಗವಂತನ ಇಚ್ಛೆಯಂತೆ ನಡೆಯುವುದು ಜಗತ್ತು

gan-3
Published on

ಕುಂದಾಪುರ: ಕಾಲವೇ ಎಲ್ಲವನ್ನು ನಡೆಸಿಕೊಂಡು ಹೋಗುತ್ತದೆ. ಭಗವಂತನು ತನ್ನಿಷ್ಟದಂತೆ ಜಗತ್ತನ್ನು ನಡೆಸಿಕೊಂಡು ಹೋಗುತ್ತಾನೆ ಎಂದು ಸಂಸ್ಕೃತ ಶಿಕ್ಷಕ ರಾಮಕೃಷ್ಣ ಉಡುಪ ಹೇಳಿದರು.

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಭಾನುವಾರ ಪಂಚಾಂಗ ಪೂಜೆ ನೆರವೇರಿಸಿ ಮಾತನಾಡಿದರು.

ವೇದಗಳ ಅರ್ಥವನ್ನರಿಯಬೇಕಾದರೆ ವೇದಾಂಗಗಳ ಜ್ಞಾನ ಅಗತ್ಯ. ಅವುಗಳಲ್ಲಿ ಒಂದು ಜ್ಯೋತಿಷ್ಯಶಾಸ್ತ್ರ. ಆಕಾಶದಲ್ಲಿರುವ ನಕ್ಷತ್ರ, ಗ್ರಹಗಳ ಚಲನವಲನಗಳ ಲೆಕ್ಕಾಚಾರದಂತೆ ದಿನದ ಸ್ಪಷ್ಟ ಮಾಹಿತಿಗಳೇ ಪಂಚಾಂಗ. ಭಾರತೀಯ ಪರಂಪರೆಯಂತೆ ವರ್ಷದ ಬದಲಾವಣೆಯನ್ನು ಯುಗಾದಿ ಶಬ್ದದಿಂದ ಕರೆದು ಆಚರಿಸಿಕೊಂಡು ಬಂದಿದ್ದೇವೆ. ಪ್ರಕೃತಿಯೂ ಹೊಸತನವನ್ನು ಕಾಣುವ ಸಮಯವಾದ್ದರಿಂದ ಇದು ಮಹತ್ವ ಪಡೆದುಕೊಂಡಿದೆ ಎಂದರು.

ಶಾಲಾ ಪ್ರಾಂಶುಪಾಲ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ., ಉಪಪ್ರಾಂಶುಪಾಲ ರಾಮ ದೇವಾಡಿಗ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net