

ಬೆಂಗಳೂರು: ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಟ್ಟದ ಜಾಲದ ನಂಟು ಹೊಂದಿದ್ದ ಮಹಿಳೆಯೊಬ್ಬಳು ರಾಜಧಾನಿ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾಳೆ. ಮಾದಕವಸ್ತು ಮಾರಾಟ ಜಾಲದಲ್ಲಿದ್ದ ಯೋಗಿತಾ ಎಂಬಾಕೆಯನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದಕವಸ್ತು ಜಾಲದ ಸಂಪರ್ಕ ಹೊಂದಿದ್ದ ಯೋಗಿತಾ, ಕಳೆದ ಮೂರು ವರ್ಷಗಳಿಂದ ಮಾದಕ ವಸ್ತು ಸರಬರಾಜಿನಲ್ಲಿ ತೊಡಗಿಸಿಕೊಂಡಿದ್ದು, ರೇವ್ ಪಾರ್ಟಿಗಳಿಗೆ ಅದನ್ನು ಪೂರೈಕೆ ಮಾಡುತ್ತಿದ್ದಳು. ಅದಕ್ಕೆಂದು ಜರ್ಮನಿಯಿಂದ ಎಂಡಿಎಂಎ ಎಂಬ ಮಾದಕವಸ್ತುವನ್ನು ತರಿಸಿಕೊಂಡ ಈಕೆ ಕೊನೆಗೂ ಸಿಕ್ಕಿಹಾಕಿಕೊಂಡಿದ್ದಾಳೆ.
ಜರ್ಮನಿಯಿಂದ ಮಾದಕವಸ್ತುವನ್ನು ತರಿಸಿಕೊಳ್ಳುತ್ತಿದ್ದ ಈಕೆ ಆಫ್ರಿಕನ್ ಪೆಡ್ಲರ್ಸ್ ಜತೆಗೂ ನಂಟು ಹೊಂದಿದ್ದಳು. ಜರ್ಮನಿಯಿಂದ ಒಂದು ಕಾರ್ಟನ್ ಬಾಕ್ಸ್ನಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೋಸ್ಟ್ ಆಫೀಸ್ ವ್ಯಾಪ್ತಿಯ ವಿಳಾಸಕ್ಕೆ ಕಳುಹಿಸಲಾಗಿತ್ತು. ಪಾರ್ಸೆಲ್ನಲ್ಲಿ ಸ್ಯಾಂಡ್ವಿಚ್ ಗ್ರಿಲ್, ಕಾಸ್ಮೆಟಿಕ್ನಲ್ಲಿ ಇರಿಸಲಾಗಿದ್ದ ಎಂಡಿಎಂಎ ಇರುವುದು ಖಚಿತವಾಗುತ್ತಿದ್ದಂತೆ, ಪಾರ್ಸೆಲ್ ಸ್ವೀಕರಿಸುತ್ತಿದ್ದ ಯೋಗಿತಾಳನ್ನು ಎನ್ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.