ಭೂಸುಧಾರಣೆ ಜಾರಿಗೆ ತಂದ ಧೀಮಂತ ನಾಯಕ

gan (9)
Published on

ಕುಂದಾಪುರ: ಭೂಸುಧಾರಣೆ ಕಾಲದಲ್ಲಿ ಕುಂದಾಪುರದಲ್ಲಿ 15 ಭೂನ್ಯಾಯ ಮಂಡಳಿ ಇತ್ತು. ಈಗ ಒಂದು ಇದೆ. ಭೂಸುಧಾರಣೆ ಜಾರಿಗೆ ತಂದ ಧೀಮಂತ ಮುಖ್ಯಮಂತ್ರಿ ದೇವರಾಜ ಅರಸು. ಕಾಯ್ದೆ ಜಾರಿಯಿಂದಾಗಿ ಬಡವರಿಗೆ ಭೂಮಿ ಹಕ್ಕು, ಗೇಣಿ, ಒಡೆತನದಿಂದ ಭೂಮಿ ಹಕ್ಕು ದೊರೆವಂತಾಯಿತು. ಇಲ್ಲದಿದ್ದರೆ ಭೂಮಿ ಕೆಲವೇ ಮಂದಿ ಉಳ್ಳವರ ಕೈಯಲ್ಲಿ ಇರುತ್ತಿತ್ತು ಎಂದು ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಹೇಳಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕುಂದಾಪುರದ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ದಿ.ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ ಮಾತನಾಡಿದರು. ಬಿದ್ಕಲ್‌ಕಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಜ್ಯಶಾಸ್ತ್ರ ಉಪನ್ಯಾಸಕ ರಾಘವೇಂದ್ರ ಕಿಣಿ ಅವರು ಡಿ.ದೇವರಾಜ ಅರಸು ಬದುಕು ಸಾಧನೆ ಚಿಂತನೆ ಕುರಿತು ಉಪನ್ಯಾಸ ನೀಡಿ, ಸ್ವಂತಕ್ಕಾಗಿ ಬದುಕುವುದಕ್ಕಿಂತ ಹೆಚ್ಚು ಸಮಾಜಕ್ಕಾಗಿ ಬದುಕಬೇಕು ಎಂಬುದನ್ನು ಅರಸು ತೋರಿಸಿಕೊಟ್ಟಿದ್ದರು ಎಂದರು.

ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಅಧ್ಯಕ್ಷತೆ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟಾ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಮುಖ್ಯಾಧಿಕಾರಿ ಆನಂದ ಜೆ.ಉಪಸ್ಥಿತರಿದ್ದರು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆಶಾದೇವಿ ನಾಯಕ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net